ADVERTISEMENT

‘ಆರೋಗ್ಯ ಶಿಕ್ಷಣ ಡೆಂಗಿಗೆ ಮದ್ದು’

ಆರೋಗ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ರಂದೀಪ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:46 IST
Last Updated 24 ಮೇ 2016, 5:46 IST

ವಿಜಯಪುರ: ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತಂತೆ ಮುನ್ನೆಚ್ಚರಿಕೆ ವಹಿಸಲು ಶಾಲಾ ಶಿಕ್ಷಕರಿಗೆ, ಮಕ್ಕಳಿಗೆ ಜಾಗೃತಿ ಮೂಡಿಸಲು ಆರೋಗ್ಯ ಹಾಗೂ ಶಿಕ್ಷಣ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ನಡೆದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲ ಆರಂಭವಾಗುತ್ತಿರುವುದರಿಂದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಶಾಲೆಗಳು ಆರಂಭಗೊಂಡ ಮೊದಲ ವಾರದಲ್ಲೇ ಜಿಲ್ಲೆಯಾದ್ಯಂತ ಎಲ್ಲ ಶಾಲಾ ಕಾಲೇಜುಗಳಲ್ಲಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಲು ಆರೋಗ್ಯಾಧಿಕಾರಿ, ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ನಗರದಲ್ಲಿ ಡೆಂಗಿ ಪ್ರಕರಣಗಳು ಕಂಡು ಬಂದಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆ -ಮನೆಗೆ ತೆರಳಿ ಮನೆಯಲ್ಲಿ ನೀರು ದಾಸ್ತಾನು ಮಾಡುವ ಟ್ಯಾಂಕರ್‌, ಬ್ಯಾರಲ್, ಹೂವಿನ ಕುಂಡ, ಒಡೆದ ತೆಂಗಿನಕಾಯಿ ಚಿಪ್ಪುಗಳು, ಹಳೆಯ ಟೈರ್‌ಗಳು, ಹಳೆಯ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ಕ್ರಮ ಕೈಗೊಳ್ಳಬೇಕು.

ವಾರಕ್ಕೊಮ್ಮೆ ಡ್ರೈ ಡೇ ಆಚರಿಸುವುದರ ಮೂಲಕ ಡೆಂಗಿ  ಕಾರಣವಾದ ಸೊಳ್ಳೆ ಹರಡದಂತೆ ಕ್ರಮ ವಹಿಸಬೇಕು. ಧೂಮೀಕರಣವನ್ನು ತಕ್ಷಣದಿಂದಲೇ ಆರಂಭಿಸಬೇಕು. ಡ್ರೈನೇಜ್ ಸೇರಿದಂತೆ ಕಸ ನಿರ್ವಹಣೆ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪಾಲಿಕೆಯ ಪರಿಸರ ಅಧಿಕಾರಿ ಜಗದೀಶ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.  

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಂಪತ್ ಗುಣಾರಿ ಮಾತನಾಡಿ, 2015ನೇ ಸಾಲಿನಲ್ಲಿ 77, 2016ರಲ್ಲಿ ಏ 30ರವರೆಗೆ 28 ಪ್ರಕರಣ ಪತ್ತೆಯಾಗಿವೆ. ನಗರದಲ್ಲಿ 17ಕ್ಕಿಂತ ಹೆಚ್ಚು ಪ್ರಕರಣಗಳು ಪ್ರಸಕ್ತ ವರ್ಷ ಕಂಡು ಬಂದಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಡೆಂಗ್ಯು ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆಯಿಂದ ಮನೆ -ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಜನರಿಗೆ ಆರೋಗ್ಯ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ಲಾರ್ವಾ ಸರ್ವೇ ಸಹ ಕೈಗೊಳ್ಳಲಾಗಿದೆ. ಈ ಕಾರ್ಯಕ್ಕಾಗಿ ನಗರದ 32 ವಾರ್ಡ್‌ಗಳಲ್ಲಿ 28 ತಂಡ ಗಳನ್ನು ರಚಿಸಿ, ಸರ್ವೇ ಆರಂಭಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಗುಂಡಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎ.ಎನ್.ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಳವಾರ, ಪಾಲಿಕೆ ಆರೋಗ್ಯ ನಿರೀಕ್ಷಕ ನಾಯಕ ಸೇರಿದಂತೆ ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಜಾಗೃತಿ ಜಾಥಾ: ನಗರದ ದರ್ಗಾ ಕ್ರಾಸ್‌ನಿಂದ ಆರಂಭಗೊಂಡ ಜಾಗೃತಿ ಜಾಥಾಕ್ಕೆ ಡಿಎಚ್ಓ ಗುಂಡಪ್ಪ, ಬಿಎಲ್‌ಡಿಇ ವೈದ್ಯಕೀಯ ಆಸ್ಪತ್ರೆ ಅಧೀಕ್ಷಕ ಡಾ.ವಿಜಯಪುರ ಕಲ್ಯಾಣಪ್ಪಗೋಳ ಚಾಲನೆ ನೀಡಿದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಂಪತ್ ಗುಣಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಸ್.ಎಸ್.ಮೈಲಾರಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಬೀಳಗಿ, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ.ರಾಜೇಶ್ವರ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಕೆ.ಡಿ.ಗುಂಡಬಾವಡಿ ಇದ್ದರು.

** *** **
ಮನೆ-ಮನೆಗೆ ತೆರಳಿ ಡೆಂಗಿ, ಮಲೇರಿಯಾ ತಡೆಗೆ ಸೊಳ್ಳೆಗಳ ನಿಯಂತ್ರಣ ಕುರಿತಂತೆ ಅರಿವು ಮೂಡಿಸಲು ಆರೋಗ್ಯ ಶಿಕ್ಷಣ ಹಮ್ಮಿಕೊಳ್ಳಿ.
-ಡಿ.ರಂದೀಪ್‌,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.