ADVERTISEMENT

‘ನಮ್ಮ ದೇ ಹೊಣೆ; ನಿಭಾಯಿಸಲು ಬಿಡಿ’

ನಿರ್ವಹಣೆ, ನಿರ್ಮಾಣ, ಹಸ್ತಾಂತರ ಒಪ್ಪಂದದಡಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:47 IST
Last Updated 24 ಮೇ 2016, 5:47 IST

ವಿಜಯಪುರ: ‘ನಗರದ ಹೃದಯ ಭಾಗ ಗಾಂಧಿಚೌಕ್‌ನಲ್ಲಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಯ ಸಂಪೂರ್ಣ ಜವಾಬ್ದಾರಿ ನಮ್ಮದೇ. ಸ್ವಲ್ಪ ಆಚೀಚೆಯಾದರೂ ಶಿಕ್ಷೆ ಅನುಭವಿಸುವವರು ನಾವೇ. ನಗರದ ಜನತೆಯನ್ನು ತಪ್ಪು ದಾರಿಗೆಳೆಯಲು ಪ್ರಕಟಣೆ ನೀಡುವ ಬದಲು ನಮ್ಮ ಜವಾಬ್ದಾರಿ ನಿಭಾಯಿಸಲು ಅವಕಾಶ ಕೊಡಿ.

ಸ್ವಲ್ಪವೂ ತೊಂದರೆಯಾಗದಂತೆ ನೀವೂ ಸೂಚಿಸಿದ ವಿನ್ಯಾಸದಡಿ ಮರು ನಿರ್ಮಾಣ ಇಲ್ಲವೇ ನೂತನ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೂ ಬದ್ಧ...’ ಇದು ಹುಬ್ಬಳ್ಳಿ ಮೂಲದ ದಿ ಪ್ರಿಸಂ ಅಡ್ವರ್ಟೈಜರ್ಸ್‌ ಎಂಬ ಖಾಸಗಿ ಜಾಹೀರಾತು ಕಂಪೆನಿಯ ಪಾಲುದಾರ ವಿಜಯಕುಮಾರ ನೀಲರೆಡ್ಡಿ ಮಹಾನಗರ ಪಾಲಿಕೆ ಆಡಳಿತಕ್ಕೆ ಲಿಖಿತವಾಗಿ ಸಲ್ಲಿಸಿರುವ ಮನವಿ. 

‘ಪಾದಚಾರಿ ಮೇಲ್ಸೇತುವೆಯ ಎಂಟು ಮೆಟ್ಟಿಲುಗಳನ್ನು ತೆರವುಗೊಳಿಸಿದ (ಸೆ 29, 2014) ಮರು ದಿನದಿಂದಲೇ ಮಹಾನಗರ ಪಾಲಿಕೆ ಆಡಳಿತ, ಜಿಲ್ಲಾಧಿಕಾರಿಗೆ ಮನವಿಯ ಮಹಾಪೂರವನ್ನೇ ಸಲ್ಲಿಸಿದ್ದೇವೆ. ಆರಂಭದಿಂದಲೂ ಅವರದ್ದು ಒಂದೇ ರಾಗ. ಮೊದಲು ತೆರವುಗೊಳಿಸಿ. ನಂತರ ಮಾತುಕತೆ ನಡೆಸಿ ಎಂಬುದು.

ಆಯುಕ್ತರ ಸೂಚನೆಯಂತೆ ತೆರವಿಗೆ ಈ ಕ್ಷಣದಲ್ಲೇ ನಾವೂ ಸಿದ್ಧ. 2008ರಲ್ಲಿ ಪಾಲಿಕೆ ಜತೆ ನಾವು ಮಾಡಿಕೊಂಡ ಒಡಂಬಡಿಕೆಯಂತೆ, ಮರು ನಿರ್ಮಾಣ ಅಥವಾ ಹೊಸ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡುವ ಪತ್ರ ಕೊಟ್ಟ ತಕ್ಷಣವೇ ತೆರವು ಕಾರ್ಯ ಆರಂಭಿಸುತ್ತೇವೆ.

ಈ ಭರವಸೆಯನ್ನು ಪಾಲಿಕೆ ಆಯುಕ್ತರು ನೀಡದಿದ್ದರಿಂದ, ನಮ್ಮ ಜತೆ ಮಾಡಿಕೊಂಡಿರುವ ಒಪ್ಪಂದ ಉಲ್ಲಂಘಿ ಸಿರುವುದರಿಂದ ಅನ್ಯ ಮಾರ್ಗವಿಲ್ಲದೆ 2015ರ ಅಕ್ಟೋಬರ್‌ನಲ್ಲಿ ನ್ಯಾಯಾ ಲಯದ ಮೊರೆ ಹೊಕ್ಕಿದ್ದೇವೆ. ಮೇಲ್ಸೇತುವೆಗೆ ಸಂಬಂಧಿಸಿದಂತೆ ನ್ಯಾಯಾಲಯ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ತಡೆಯಾಜ್ಞೆ ನೀಡಿದೆ.

ನಾವು ಸಮಾಜ ಸೇವಕರಲ್ಲ. ವ್ಯವಹಾರಿಗಳು. ನಮಗೆ ಜಗಳ ಬೇಕಿಲ್ಲ. ₹ 30 ಲಕ್ಷಕ್ಕೂ ಅಧಿಕ ಮೊತ್ತ ವಿನಿಯೋಗಿಸಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಿದ್ದೇವೆ. ಐದು ವರ್ಷ ಗತಿಸಿ ಆರನೇ ವರ್ಷ. ನಿರ್ಮಾಣಕ್ಕೆ ವ್ಯಯಿಸಿದ ಮೊತ್ತದಲ್ಲಿ ಶೇ 10ರಷ್ಟು ಕಾಸು ಕೈಗೆ ಮರಳಿಲ್ಲ.

ಇನ್ನೂ 14 ವರ್ಷ ಸಮಯವಿದೆ. ಪಾಲಿಕೆ ಆಡಳಿತ ಒಪ್ಪಂದದಂತೆ ಮತ್ತೊಂದು ವಿನ್ಯಾಸ ನೀಡಿದರೆ ಅದೇ ಜಾಗದಲ್ಲಿ ಪಾದಚಾರಿ ಮೇಲ್ಸೇತುವೆ ಮರು ನಿರ್ಮಾಣ ಇಲ್ಲವೇ ನೂತನ ಮೇಲ್ಸೇತುವೆ ನಿರ್ಮಾಣಕ್ಕೆ ನಾವು ಸಿದ್ಧರಿದ್ದೇವೆ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಹಿಂಪಡೆಯಲಿದ್ದೇವೆ. ನಮಗೆ ಆಯುಕ್ತರು ಅನುಮತಿ ನೀಡಿದರೆ ಸಾಕು’ ಎಂದು ವಿಜಯಕುಮಾರ ನೀಲರೆಡ್ಡಿ ‘ಪ್ರಜಾವಾಣಿ’ ಬಳಿ ಪುನರುಚ್ಚರಿಸಿದರು.

‘ನಿರ್ಮಾಣ, ನಿರ್ವಹಣೆ, ಹಸ್ತಾಂತರ ಒಪ್ಪಂದದಡಿ ಈ ಪಾದಚಾರಿ ಮೇಲ್ಸೇತುವೆ ನಿರ್ಮಿಸಿದ್ದೇವೆ. 20 ವರ್ಷ ನಿರ್ವಹಣೆ ಬಳಿಕ ಪಾಲಿಕೆಗೆ ಹಸ್ತಾಂತರಿಸಬೇಕು. ಇದೀಗ ಆರನೇ ವರ್ಷ. ಆರಂಭದ ಎರಡು ವರ್ಷಗಳಲ್ಲಿ ಕೊಂಚ ಆದಾಯವೂ ಸಿಗಲಿಲ್ಲ. ಇದರ ನಡುವೆ ಒಂದೂವರೆ ವರ್ಷದಿಂದ ತೆರವುಗೊಳಿಸುವಂತೆ ಪಾಲಿಕೆ ಮೇಲಿಂದ ಮೇಲೆ ಒತ್ತಡ ಹಾಕುತ್ತಿದೆ.

ನಮಗೆ ಅವಕಾಶ ನೀಡದಿದ್ದರೆ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ನೀಲರೆಡ್ಡಿ ಪ್ರಸಕ್ತ ತಾವು ಎದುರಿಸುತ್ತಿರುವ ಅಸಹಾಯಕತೆಯನ್ನು ‘ಪ್ರಜಾವಾಣಿ’ ಬಳಿ ಬಿಚ್ಚಿಟ್ಟರು. ನಗರದ ನಾಗರಿಕರ ಹಿತದೃಷ್ಟಿಯಿಂದಾದರೂ ಪಾಲಿಕೆ ಆದಷ್ಟು ಬೇಗ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿ ಎಂದು ಅವರು ಇದೇ ಸಂದರ್ಭ ಆಗ್ರಹಿಸಿದರು.

** *** **
ಕುಂಟು ನೆಪ ಬಿಡಿ. ಜವಾಬ್ದಾರಿ ನಿಭಾಯಿಸಲು ಅವಕಾಶ ಕೊಡಿ. ಸಾರ್ವಜನಿಕರ ಒಳಿತಿಗಾಗಿ ನ್ಯಾಯಾಲಯದ ಹೊರಗೆ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳೋಣ.
-ವಿಜಯಕುಮಾರ ನೀಲರೆಡ್ಡಿ,
ದಿ ಪ್ರಿಸಂ ಅಡ್ವಟೈರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.