ADVERTISEMENT

‘ರೈತರ ಸಮಸ್ಯೆಗೆ ಒಟ್ಟಾಗಿ ಸ್ಪಂದಿಸೋಣ’

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 5:47 IST
Last Updated 22 ಆಗಸ್ಟ್ 2014, 5:47 IST

ವಿಜಾಪುರ: ಪರಸ್ಪರ ದೋಷಾರೋಪಣೆ ಮಾಡುವುದು ಒಳ್ಳೇಯದಲ್ಲ. ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಪಕ್ಷಾತೀತವಾಗಿ ಎಲ್ಲರೂ ಶ್ರಮಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಎಲ್ಲೆಡೆ ಹದ ಮಳೆ ಸುರಿದಿಲ್ಲ. ಜನ–ಜಾನುವಾರುಗಳಿಗೂ ಕುಡಿಯುವ ನೀರಿಗೆ ತತ್ವಾರವಿದೆ. ರೈತ ಸಮೂಹ ಚಿಂತಾಜನಕ ಸ್ಥಿತಿಯಲ್ಲಿದೆ. ಇಂಥ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಬೇಡ. ಎಲ್ಲರೂ ರೈತರ ನೆರವಿಗೆ ಧಾವಿಸೋಣ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಕೆಲ ಕಾಂಗ್ರೆಸ್‌ ಶಾಸಕರು ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬಂದಿಲ್ಲ. ಇದರಿಂದ ಪರಿಹಾರ ವಿತರಣೆ ವಿಳಂಬವಾಗುತ್ತಿದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದು ಖಂಡನಾರ್ಹ. ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯ ಮನವಿ ಬಂದರೆ ತಕ್ಷಣವೇ ಸ್ಪಂದಿಸಲಾಗುವುದು. ಆದರೆ ರಾಜ್ಯ ಸರ್ಕಾರ ಏನು ಮಾಡಿದೆ ಎಂಬುದು ತಮಗೆ ಗೊತ್ತಿಲ್ಲ ಎಂದರು.

ಮೊದಲ ಹಂತದ ಸರ್ವೇಯಂತೆ ಜಿಲ್ಲೆಗೆ ಆಲಿಕಲ್ಲು ನಷ್ಟದ ಪರಿಹಾರವಾಗಿ ಸರ್ಕಾರ ₨ 138 ಕೋಟಿ ಬಿಡುಗಡೆ ಮಾಡಿದ್ದು, ಅಗತ್ಯವಿರುವ ಮತ್ತಷ್ಟು ಹಣವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಲು ಯತ್ನಿಸಲಾಗುವುದು ಎಂಬ ಭರವಸೆ ನೀಡಿದರು.
ಜಿಲ್ಲಾಡಳಿತ ನಡೆಸಿದ ಎರಡನೇ ಹಂತದ ಸರ್ವೇಯಂತೆ ಪರಿಹಾರ ವಿತರಿಸಲು ಇನ್ನೂ ₨110 ಕೋಟಿ ಬೇಕಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೆ ಈ ಹಣ ಬಿಡುಗಡೆ ಮಾಡಿಸಲು ಯತ್ನಿಸುವೆ ಎಂದು ಹೇಳಿದರು.

ಮರಳು ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳು ಸೇರಿದಂತೆ ಬಹುತೇಕ ರಾಜಕಾರಣಿಗಳು ಶಾಮೀಲಾಗಿದ್ದಾರೆ. ಇದಕ್ಕೆ ಇತಿಶ್ರೀ ಹಾಡಲು ಮರಳು ಗಣಿಗಾರಿಕೆಯನ್ನೇ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ವಿಜಾಪುರವನ್ನು ವಿಶ್ವಪರಂಪರೆ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಎರಡು ಬಾರಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಪ್ರಧಾನಿಯವರಿಂದ ಸಕಾರಾತ್ಮಕ ಪ್ರತಿಕ್ರಿಯೆಯ ಪತ್ರ ಬಂದಿದೆ ಎಂದರು.
ನಗರ ವ್ಯಾಪ್ತಿಯಲ್ಲಿ 33 ಸ್ಮಾರಕಗಳಿವೆ. ಇವುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ ಮಾನವೀಯತೆಯ ದೃಷ್ಟಿಯಿಂದ ಈಗಿರುವ 300 ಮೀಟರ್‌ ದೂರವನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕೂಡಗಿ ತನಕ ಜೋಡಿ ಹಳಿ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಬದ್ಧವಾಗಿದೆ. ಎನ್‌ಟಿಪಿಸಿ ₨ 300 ಕೋಟಿ ಕಟ್ಟಿದೆ. ಇನ್ನೂ ₨ 300 ಕೋಟಿ ಕಟ್ಟಬೇಕು. ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣ ಭರಿಸಿದರೆ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.