ADVERTISEMENT

‘ಸಮಾಜ ಸೇವೆಯಿಂದ ಬಾಳು ಸಾರ್ಥಕ’

ಚಪ್ಪಳಗಾವದಲ್ಲಿ ಸಾಮೂಹಿಕ ಮದುವೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 8:53 IST
Last Updated 30 ಏಪ್ರಿಲ್ 2016, 8:53 IST

ಸೊಲ್ಲಾಪುರ: ಜೀವನದಲ್ಲಿ ಗಳಿಸಿದ ಸಂಪತ್ತನ್ನು ತಾನೊಬ್ಬನೇ ಬಳಸದೆ ಸ್ವಲ್ಪ ಭಾಗ ಸಮಾಜದ ಒಳಿತಿಗಾಗಿ ಉಪಯೋಗಿಸಿದರೆ ಬಾಳು ಸಾರ್ಥಕವಾಗುತ್ತದೆ ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಪ್ಪಳಗಾವದಲ್ಲಿ ಕಲಾವತಿ ಖಂಡಪ್ಪ ಭಂಡಾರಕವಠೆ ಅವರ ಸ್ಮರಣೆಗಾಗಿ ಸಿದ್ಧರಾಮ ಭಂಡಾರಕವಠೆ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ಮದುವೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬರಗಾಲದ ಸ್ಥಿತಿಯಿಂದಾಗಿ ಬಡವರಿಗೆ ಮದುವೆ ಆರ್ಥಿಕ ಹೊರೆಯಾಗುವುದು. ಸಾಮೂಹಿಕ ವಿವಾಹ ಹೊರೆಯನ್ನು ಕಡಿಮೆ ಮಾಡಿ, ನೆಮ್ಮದಿಯ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದರು.

ವೈಯಕ್ತಿಕ ಹಿತಕ್ಕಿಂತ ಸಮಾಜದ ಏಳ್ಗೆಗೆ ಕೈಜೋಡಿಸಿದಾಗ ಬದುಕಿಗೆ ಸಾರ್ಥಕತೆ ಸಿಗುತ್ತದೆ. ಪ್ರತಿಯೊಬ್ಬರೂ ಸಮಾಜದ ಏಳ್ಗೆಗಾಗಿ ತಮ್ಮ ಸಾಮರ್ಥ್ಯಕ್ಕನುಸಾರ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಸಿದ್ಧರಾಮ ಮೇತ್ರೆ ಮಾತನಾಡಿ, ಸಿದ್ಧರಾಮ ಭಂಡಾರಕವಠೆ ಅವರ ಸಾಮಾಜಿಕ ಕಳಕಳಿ ಮೆಚ್ಚು ವಂಥದ್ದು. ಕಾರ್ಯಕ್ರಮವು ಬಡವರ ಬಾಳಿನಲ್ಲಿ ಬೆಳಕು ತಂದಿದೆ ಎಂದರು.

ಸಮಾರಂಭದಲ್ಲಿ ವಿವಿಧ ಧರ್ಮಗಳ 13 ಜೋಡಿ ನವಜೀವನಕ್ಕೆ ಕಾಲಿಟ್ಟರು. ವಧುವರರಿಗೆ ಉಚಿತವಾಗಿ ಸಂಸಾರೋಪಯೋಗಿ ಸಾಮಗ್ರಿ ನೀಡಲಾಯಿತು. ಗ್ರಾಮದ ಯುವಕರು ಬರೆದಿದ್ದ ನೀರು ಉಳಿತಾಯ, ಸ್ವಚ್ಛತೆ, ವೃಕ್ಷಾರೋಪಣ, ಸ್ತ್ರೀ ಭ್ರೂಣ ಹತ್ಯೆ ತಡೆಯ ಘೋಷವಾಕ್ಯಗಳು ಮದುವೆ ಮಂಟಪದಲ್ಲಿ ಗಮನ ಸೆಳೆದವು.

ಭಗವಾನ ಶಿಂಧೆ, ಕಾಶೀನಾಥ ಭರಮಶೆಟ್ಟಿ, ಉಮೇಶ ಪಾಟೀಲ, ಚಂದ್ರ ಕಾಂತ ಜಂಗಲೆ, ಸರಪಂಚ ಶೋಭಾ ಉಟಗೆ, ಅಭಯ ಖೊಬರೆ, ರಾಜ ಪಾಟೀಲ, ಕಾರ್ತೀಕ ಪಾಟೀಲ, ಬಿಡಿಒ ಉತ್ತಮರಾವ ವಾಗಮೋಡೆ, ಸಿದ್ಧರಾಮ ಕಲ್ಯಾಣಶೆಟ್ಟಿ, ಪ್ರಭಾಕರ ಹಂಜಗೆ, ಲಾಲಾ ರಾಠೋಡ, ಮಾಜಿ ಸರಪಂಚ ಉಮೇಶ ಪಾಟೀಲ, ಅಂಬಣ್ಣಪ್ಪ ಭಾಂಗೆ, ಲೋಕ ಮಂಗಲದ ಎಂ.ಡಿ. ರವಿಕಾಂತ ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.