ADVERTISEMENT

‘1 ಲಕ್ಷ ಸಸಿ ನೆಟ್ಟು ಪೋಷಣೆ’

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರಿಂದ ತಾಜ್‌ಬಾವಡಿಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 4:49 IST
Last Updated 12 ಜುಲೈ 2017, 4:49 IST

ವಿಜಯಪುರ: ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಅರಣ್ಯ ಇಲಾಖೆ, ಕೆಬಿಜೆಎನ್‌ಎಲ್‌ ವತಿಯಿಂದ ನಗರ ವ್ಯಾಪ್ತಿಯಲ್ಲಿ 1 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಘೋಷಿಸಿದರು.

ಜಿಲ್ಲಾಡಳಿತ, ವೃಕ್ಷ ಅಭಿಯಾನ ಟ್ರಸ್ಟ್‌ ವತಿಯಿಂದ ಮಂಗಳವಾರ ನಗರದ ಹೃದಯ ಭಾಗ ಗಾಂಧಿಚೌಕ್‌ ಬಳಿ ಮಹಾತ್ಮಗಾಂಧಿ ರಸ್ತೆ ಬದಿ ಎನ್‌ಸಿಸಿ ಕೆಡೆಟ್‌ಗಳ ಜತೆ ಸಸಿ ನೆಟ್ಟ ಬಳಿಕ ಮಾತನಾಡಿದ ಸಚಿವರು, ಪಾಲಿಕೆ ಆಡಳಿತ ಇದರ ನಿರ್ವಹಣೆ ಹೊಣೆ ಹೊರಲಿದೆ ಎಂದು ಹೇಳಿದರು.

ಪ್ರಸ್ತುತ ಮಳೆಗಾಲದ ಅವಧಿ ಮುಗಿ ಯುವುದರೊಳಗಾಗಿ ಕೆಬಿಜೆಎನ್‌ಎಲ್‌ನ ನರ್ಸರಿಗಳಿಂದ ಉಚಿತವಾಗಿ ಸಸಿಗಳನ್ನು ವಿತರಿಸಲಿದ್ದು, ಪಾಲಿಕೆ ನಗರದ ವಿವಿಧೆಡೆ ಇವುಗಳನ್ನು ನೆಟ್ಟು ಪೋಷಿಸುವುದು ಎಂದರು.

ADVERTISEMENT

ಬಾಗಿನ ಅರ್ಪಣೆ: ಪುನಶ್ಚೇತನಗೊಂಡ ನಗರದ ಐತಿಹಾಸಿಕ ತಾಜ್‌ ಬಾವಡಿಗೆ ಭೇಟಿ ನೀಡಿದ ಸಚಿವ ಎಂ.ಬಿ.ಪಾಟೀಲ, ಪಾಲಿಕೆ ಸದಸ್ಯರ ಸಮಕ್ಷಮ ಬಾಗಿನ ಅರ್ಪಿಸಿದರು. ಕಾಯಕಲ್ಪದ ಕಾಮಗಾರಿ ವೀಕ್ಷಿಸಿದರು.

‘ಬಾವಡಿಯ ಸುತ್ತಲೂ ಅತಿಕ್ರಮಣ ಗೊಳಿಸಿಕೊಂಡು ಮನೆ ನಿರ್ಮಿಸಿಕೊಂಡಿ ರುವವರಿಗೆ ಬೇರೆಡೆ ಸೂರಿನ ವ್ಯವಸ್ಥೆ ಕಲ್ಪಿಸಿ ಇಲ್ಲಿಂದ ತೆರವುಗೊಳಿಸಿ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ಗೆ ಸ್ಥಳದಲ್ಲೇ ಸೂಚಿಸಿದರು.

‘ಇನ್ನೊಂದು ಬದಿಯಲ್ಲಿದ್ದ ಮಸೀದಿಯ ಆಡಳಿತ ಕಚೇರಿಯ ಕಿಟಕಿಗಳಿಗೆ ಮೆಷ್‌ ಅಳವಡಿಸಿ. ಯಾವುದೇ ಕಸ ಬಾವಡಿಯೊಳಗೆ ಬೀಳದಂತೆ ಕಠಿಣ ಕ್ರಮ ತೆಗೆದುಕೊಳ್ಳಿ’ ಎಂದು ಇದೇ ಸಂದರ್ಭ ಪಾಲಿಕೆ ಆಯುಕ್ತ ಶ್ರೀಹರ್ಷಶೆಟ್ಟಿಗೆ ತಿಳಿಸಿದರು.

‘ತಾಜ್‌ ಬಾವಡಿಯಲ್ಲಿ ಶುದ್ಧ ನೀರು ಸಂಗ್ರಹಗೊಳ್ಳುತ್ತಿದೆ. ಈ ನೀರನ್ನು ಸುತ್ತಮುತ್ತಲಿನ ಬಡಾವಣೆಗಳಿಗೆ ಬಳಕೆಗೆ ಪೂರೈಸಿ. ಇದರ ಜತೆಗೆ ಬಾವಡಿ ಆವರಣದಲ್ಲೇ ನೀರು ಶುದ್ಧೀಕರಣ ಘಟಕ ಅಳವಡಿಸಿ. ಇದು ಆದಷ್ಟು ಶೀಘ್ರದಲ್ಲೇ ನೆರವೇರಬೇಕು. ಸುತ್ತಲೂ ಅಳವಡಿಸುತ್ತಿರುವ ಪೆನ್ಸಿಂಗ್‌ ಕಾಮಗಾರಿ ಪೂರ್ಣಗೊಳಿಸಿ’ ಎಂದು ಪಾಲಿಕೆ ಅಧಿಕಾರಿಗಳಿಗೆ ಆದೇಶಿಸಿದರು.

‘ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಈಗಾ ಗಲೇ 22 ಐತಿಹಾಸಿಕ ಬಾವಿ ಗಳನ್ನು ಪುನಶ್ಚೇತನ ಕ್ಕೊಳಪಡಿಸಲಾಗಿದ್ದು, ಮುಂದಿನ ವರ್ಷ ಇನ್ನೂ 15ರಿಂದ 20 ಐತಿಹಾಸಿಕ ಬಾವಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯರಾದ ರವೀಂದ್ರ ಲೋಣಿ, ಶಂಕರ ಕುಂಬಾರ, ಉಮೇಶ ವಂದಾಲ, ಮೈನುದ್ಧೀನ್ ಬೀಳಗಿ, ಅಬ್ದುಲ್‌ ರಜಾಕ್‌ ಹೊರ್ತಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

ಐತಿಹಾಸಿಕ ಜಲ ಮಾರ್ಗ ಪುನಶ್ಚೇತನಕ್ಕೆ ಚಾಲನೆ: ‘ವಿಜಯಪುರ ನಗರಕ್ಕೆ ನೀರು ಪೂರೈಕೆಯ ಮೂಲವಾಗಿದ್ದ ಐತಿಹಾಸಿಕ ಕರೇಜ್ (ಸುರಂಗ ಮಾರ್ಗ) ವ್ಯವಸ್ಥೆ ಪುನಶ್ಚೇತನಗೊಳಿಸುವ ಪ್ರಥಮ ಪ್ರಯತ್ನವನ್ನು ಇಂದು ಆರಂಭಿಸಲಾಗಿದೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದ ಇಟಗಿ ಪೆಟ್ರೋಲ್ ಪಂಪ್ ಹಿಂಭಾಗದಲ್ಲಿನ ಸುರಂಗ ಬಾವಡಿ ಬಳಿ ಪುನಶ್ಚೇತನ ಕಾಮಗಾರಿಗೆ ಮಂಗಳ ವಾರ ಶಂಕುಸ್ಥಾಪನೆ ನೆರವೇರಿಸಿ ಮಾತ ನಾಡಿದ ಅವರು, ‘ಐತಿಹಾಸಿಕವಾಗಿ ಕರೇಜ್ ವ್ಯವಸ್ಥೆ ತನ್ನದೇ ಆದ ಮಹತ್ವ ಪಡೆದಿದೆ ಎಂದರು.

‘ನೀರಾವರಿ, ಕುಡಿಯುವ ನೀರು ಅಥವಾ ಈ ಎರಡೂ ಉದ್ದೇಶಗಳಿಗೆ ಐತಿಹಾಸಿಕವಾಗಿ ಇದು ರೂಪು ಗೊಂಡಿರುವುದು ವಿಶೇಷ. ಮುಂಬರುವ ದಿನಗಳಲ್ಲಿ ಈ ವ್ಯವಸ್ಥೆಯನ್ನು ಸಂಪೂರ್ಣ ಪುನಶ್ಚೇತನಗೊಳಿಸಿ ನೀರಾವರಿ ಅಥವಾ ಸಾಧ್ಯವಿದ್ದಲ್ಲಿ ಪ್ರವಾಸೋದ್ಯಮಕ್ಕೂ ಪೂರಕವಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಇದೇ ಸಂದರ್ಭ ಹೇಳಿದರು.

‘ಐತಿಹಾಸಿಕವಾಗಿ ಮಹತ್ವ ಪಡೆದಿರುವ ಇಂತಹ ಕರೇಜ್ ಸಿಸ್ಟಂನ್ನು ಇರಾನ್, ಟರ್ಕಿ, ಚೀನಾ, ಅಫ್ಗಾನಿಸ್ತಾನ ಸೇರಿದಂತೆ ಇನ್ನಿತರೆ ದೇಶಗಳಲ್ಲೂ ಕಾಣಬಹುದು. ನಮ್ಮಲ್ಲಿ ಬೀದರ್‌, ವಿಜಯಪುರದಲ್ಲಿ ಈ ವ್ಯವಸ್ಥೆಯಿ ರುವುದು ವಿಶೇಷ’ ಎಂದು ಎಂ.ಬಿ.ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.