ADVERTISEMENT

1.45 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ ಬಾಕಿ

ಶೇ 10ರಷ್ಟು ನೋಂದಣಿಯಾದ ರೈತರು ಉಳಿಯುವ ಸಾಧ್ಯತೆ; ಕಾಡುತ್ತಿರುವ ಖಾಲಿ ಚೀಲ ಸಮಸ್ಯೆ

ಡಿ.ಬಿ, ನಾಗರಾಜ
Published 17 ಮಾರ್ಚ್ 2018, 6:31 IST
Last Updated 17 ಮಾರ್ಚ್ 2018, 6:31 IST
1.45 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ ಬಾಕಿ
1.45 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ ಬಾಕಿ   

ವಿಜಯಪುರ: ತೊಗರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮಾರ್ಚ್‌ 28ರವರೆಗೂ ರೈತರಿಂದ ತೊಗರಿ ಖರೀದಿಸುವಂತೆ ಸೂಚಿಸಿದ್ದು, ಯುಗಾದಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ 78,607 ರೈತರು ತೊಗರಿ ಮಾರಾಟಕ್ಕಾಗಿ ನೋಂದಾಯಿಸಿಕೊಂಡಿದ್ದರು. ಮಾರ್ಚ್‌ 15ರ ಗುರುವಾರದವರೆಗೆ 63,852 ರೈತರು 7,55,210 ಕ್ವಿಂಟಲ್‌ ತೊಗರಿಯನ್ನು ಮಾರಾಟ ಮಾಡಿದ್ದಾರೆ. ಇದರಲ್ಲಿ ಕೆಲವರು 10 ಕ್ವಿಂಟಲ್‌ ಮಾರಿದ್ದರೆ, ಹಲವರು 20 ಕ್ವಿಂಟಲ್‌ ತೊಗರಿಯನ್ನು ನ್ಯಾಫೆಡ್‌ಗೆ ರಾಜ್ಯ ಕೃಷಿ ಮಾರಾಟ ಇಲಾಖೆ ಮೂಲಕ ನೀಡಿದ್ದಾರೆ.

ಜಿಲ್ಲೆಯಲ್ಲಿ ಇನ್ನೂ 14,755 ಬೆಳೆಗಾರರು ಬೆಂಬಲ ಬೆಲೆಯಡಿ ತೊಗರಿ ಮಾರಾಟಕ್ಕಾಗಿ ಚಾತಕ ಹಕ್ಕಿಯಂತೆ ಕಾದು ಕೂತಿದ್ದಾರೆ. ಖಾಲಿ ಚೀಲಗಳ ಕೊರತೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಕೇಂದ್ರದ ಖರೀದಿ ಕೇಂದ್ರಗಳ ಮುಂಭಾಗವೇ ತಮ್ಮ ಪಾಳಿಗಾಗಿ ಕಾದಿದ್ದಾರೆ.

ADVERTISEMENT

‘1.44.846 ಕ್ವಿಂಟಲ್‌ ತೊಗರಿ ಖರೀದಿಸಲು ಇನ್ನೂ ಅವಕಾಶವಿದೆ. ಸರ್ಕಾರ ನಿಗದಿ ಪಡಿಸಿರುವ ಅವಧಿಯೊಳಗೆ ಎಷ್ಟು ರೈತರು ತಲಾ 10 ಕ್ವಿಂಟಲ್‌ನಂತೆ ಮಾರಾಟ ಮಾಡಲು ಮುಂದಾಗುತ್ತಾರೆ ಅವರಿಂದಷ್ಟೇ ತೊಗರಿ ಖರೀದಿಸಲಾಗುವುದು’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಡಿ.ಚಬನೂರ ತಿಳಿಸಿದರು.

‘ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದ 92 ಖರೀದಿ ಕೇಂದ್ರಗಳಲ್ಲಿ ಈಗಾಗಲೇ 20 ಖರೀದಿ ಕೇಂದ್ರಗಳು ತಮ್ಮ ಗುರಿ ಪೂರ್ಣಗೊಳಿಸಿವೆ. ಇನ್ನೂ 20 ಕೇಂದ್ರಗಳು ಗುರಿ ಸಮೀಪವಿವೆ. ಈ 40 ಕೇಂದ್ರಗಳು ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರೆ, ಉಳಿದ 52 ಕೇಂದ್ರಗಳಲ್ಲಿ ನಿಗದಿತ ಗುರಿ ಮುಟ್ಟುವ ತನಕ ತೊಗರಿ ಖರೀದಿಸಲಾಗುವುದು. ನಂತರ ಎಲ್ಲವನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತೇವೆ’ ಎಂದು ಚಬನೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಚೀಲಗಳ ಕೊರತೆ; ವಿಳಂಬ
‘ರೈತರಿಂದ ಖರೀದಿಸಿದ ತೊಗರಿ ತುಂಬಿಕೊಳ್ಳಲು ಚೀಲಗಳ ಕೊರತೆಯಿತ್ತು. ಪ್ರಸಕ್ತ ಖರೀದಿಸಿದರೂ ತುಂಬಿಕೊಳ್ಳಲು ಚೀಲಗಳು ಇಲ್ಲದಿದ್ದುದರಿಂದ ಕೆಲವೆಡೆ ಖರೀದಿ ಪ್ರಕ್ರಿಯೆ ವಿಳಂಬಗತಿಯಲ್ಲಿ ನಡೆದಿತ್ತು. ಹಲವೆಡೆ ಸ್ಥಗಿತಗೊಂಡಿತ್ತು.

ಇದೀಗ ಕೋಲ್ಕತ್ತಾದಿಂದ ಗೋಣಿ ಚೀಲ ಬರಲಾರಂಭಿಸಿವೆ. ಅಹೋರಾತ್ರಿ ಬಂದರೂ ವಿಜಯಪುರ ತಲುಪಲು ಕನಿಷ್ಠ ಮೂರು ದಿನ ಬೇಕಿದೆ. ಒಂದೊಂದು ಲಾರಿ ಬರುತ್ತಿದ್ದಂತೆ, ತುರ್ತು ಅಗತ್ಯವಿರುವೆಡೆ ಕೊಂಚ ಪ್ರಮಾಣದ ಚೀಲಗಳನ್ನು ಕಳುಹಿಸಿಕೊಡಲಾಗುತ್ತಿದೆ’ ಎಂದು ಎಂ.ಡಿ.ಚಬನೂರ ಹೇಳಿದರು.

‘ಗೋಣಿಚೀಲದ ಕೊರತೆಯಿಂದ ರೈತರ ತೊಗರಿ ಖರೀದಿ ಪ್ರಕ್ರಿಯೆಗೆ ಅಡ್ಡಿಯಾಗಬಾರದು ಎಂದು ಜಿಲ್ಲಾಡಳಿತ ಮಾರ್ಚ್‌ 25ರವರೆಗೂ ಖರೀದಿಗೆ ಅವಕಾಶ ಕೋರಿ ಸರ್ಕಾರಕ್ಕೆ ಪತ್ರ ಬರೆದಿತ್ತು. ನಮ್ಮ ಮನವಿಗೆ ಸ್ಪಂದನೆ ದೊರಕಿದೆ’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.

‘ಖರೀದಿ ಪ್ರಕ್ರಿಯೆ ನಡೆದಿದೆ. ನೋಂದಣಿಯಾದ ಎಲ್ಲ ರೈತರ ಉತ್ಪನ್ನ ಖರೀದಿಯಾಗಲ್ಲ. ಕನಿಷ್ಠ ಪಕ್ಷ ಶೇ 10ರಷ್ಟು ರೈತರ ತೊಗರಿ ಖರೀದಿಯಾಗದೆ ಉಳಿಯುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

*
ತೊಗರಿ ಖರೀದಿಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರಿದ್ದು, ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದ್ದೇವೆ. ಯಾವೊಬ್ಬ ರೈತರು ದೂರು ಹೇಳದಾಗಿದ್ದಾರೆ.
– ಮಹಾದೇವಪ್ಪ ಡಿ.ಚಬನೂರ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ

*
ನೋಂದಣಿ ಮಾಡಿಸಿ ಮೂರು ತಿಂಗಳಾದರೂ ಖರೀದಿಸಿಲ್ಲ. ಪಾಳಿ ಯಾವಾಗ ಬರಲಿದೆ ಎಂದು ಕಾದಿದ್ದೇನೆ. ಮಾರಾಟವಾಗದಿದ್ದರೆ ಬದುಕು ಭಾರವಾಗಲಿದೆ.
–ಗುರುರಾಜ ಗಡೇದ,
ದೇವರಹಿಪ್ಪರಗಿ

*


ವಿಜಯಪುರದಲ್ಲಿ ರಸ್ತೆಗೆ ತೊಗರಿ ಸುರಿದು ಗುರುವಾರ ಪ್ರತಿಭಟಿಸಿದ್ದ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.