ADVERTISEMENT

ಮಹದಾಯಿ: ರಾಷ್ಟ್ರೀಯ ಪಕ್ಷಗಳಿಗೆ ಕಾಳಜಿ ಇಲ್ಲ

ಕಲಕೇರಿ ಗ್ರಾಮದಲ್ಲಿಜೆಡಿಎಸ್ ಸಮಾವೇಶದಲ್ಲಿ ದೇವೇಗೌಡರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 13:22 IST
Last Updated 11 ಫೆಬ್ರುವರಿ 2018, 13:22 IST
ಕಲಕೇರಿಯಲ್ಲಿಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಕುಂಭ ಹೊತ್ತು ಪಾಲ್ಗೊಂಡ ಮಹಿಳೆಯರು ಮೆರವಣಿಗೆಯಲ್ಲಿ ಸ್ವಾಗತಿಸಿದರು
ಕಲಕೇರಿಯಲ್ಲಿಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಕುಂಭ ಹೊತ್ತು ಪಾಲ್ಗೊಂಡ ಮಹಿಳೆಯರು ಮೆರವಣಿಗೆಯಲ್ಲಿ ಸ್ವಾಗತಿಸಿದರು   

ಕಲಕೇರಿ (ಸಿಂದಗಿ): ಮಹದಾಯಿ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಿಕೊಳ್ಳುವ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಎಳ್ಳಷ್ಟೂ ಕಾಳಜಿ ಇಲ್ಲ. ಬಿಜೆಪಿ–ಕಾಂಗ್ರೆಸ್ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಸಮಸ್ಯೆ ತುಂಬಾ ಉಲ್ಬಣಗೊಂಡಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ಕಲಕೇರಿ ಗ್ರಾಮದಲ್ಲಿ ಹಮ್ಮಿಕೊಂಡ ಜೆಡಿಎಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಾನು ಪ್ರಧಾನಿಯಾಗಿದ್ದ ಅಲ್ಪಾವಧಿ ಆಡಳಿತದಲ್ಲಿ ಕೇಂದ್ರದ ಬಜೆಟ್‌ನಲ್ಲಿ ಮೊದಲ ಬಾರಿಗೆ ರಾಜ್ಯಗಳಿಗೆ ನೀರು ಕೊಡಲು ತೀರ್ಮಾನ ತೆಗೆದುಕೊಳ್ಳಲಾಯಿತು. ಈ ರಾಜ್ಯದಲ್ಲಿ ಐದು ಬಾರಿ ನೀರಾವರಿ ಮಂತ್ರಿಯಾಗಿ ರೈತರಿಗೆ ನೀರು ಕೊಡಲು ಹಲವಾರು ಹೋರಾಟಗಳನ್ನು ಮಾಡಿ ಮೂರು ಬಾರಿ ರಾಜೀನಾಮೆ ನೀಡಿ ರೈತರ ಸಮಸ್ಯೆಗೆ ಸ್ಪಂದಿಸಿರುವೆ ಎಂದು ಹೇಳಿದರು.

ADVERTISEMENT

ಮುಂಬರುವ ದಿನಮಾನಗಳಲ್ಲಿ ರೈತರು ಕಾಂಗ್ರೆಸ್–ಬಿಜೆಪಿ ಎರಡೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ದಿಸೆಯಲ್ಲಿ ಕುಮಾರಸ್ವಾಮಿ ಇಸ್ರೇಲ್ ಪ್ರವಾಸ ಮಾಡುವ ಮೂಲಕ ರೈತರು ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ಕೃಷಿ ಜ್ಞಾನವನ್ನು ಸಂಪಾದಿಸಿಕೊಂಡು ಬಂದಿದ್ದಾರೆ. ಮತದಾರ ಪ್ರಭುಗಳು ರಾಜಕೀಯ ಅಧಿಕಾರ ಕೊಟ್ಟರೆ ನೀರಿನ ಸದ್ಭಳಕೆ ಮತ್ತು ಹಂಚಿಕೆಯ ಕುರಿತು ವಿಶೇಷ ಯೋಜನೆಗಳನ್ನು ರೂಪಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ ಎಂದರು.

ಸರ್ಕಾರಗಳು ದೇಶವನ್ನು ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿಪಡಿಸುವುದು ಆದ್ಯ ಕರ್ತವ್ಯ. ಯಾರ ದಾಕ್ಷಿಣ್ಯಕ್ಕೂ ಅಲ್ಲ. ಅದು ಪ್ರಜೆಗಳ ಹಕ್ಕು. ಸ್ವಾಭಿಮಾನಿಗಳಾದ ನೀವೆಲ್ಲ ಜಾಗೃತರಾಗಬೇಕಿದೆ ಎಂದು ಮನವಿ ಮಾಡಿಕೊಂಡ ಅವರು, ಈ ಭಾಗದ ಜನರು ಎ.ಎಸ್.ಪಾಟೀಲ ನಡಹಳ್ಳಿಯವರ ಮೇಲಿಟ್ಟಿರುವ ಪ್ರೀತಿ,ವಿಶ್ವಾಸ ನೋಡಿ ಅಪಾರ ಸಂತಸ ತರಿಸಿದೆ. ನೀರಿಗಾಗಿ ಹೋರಾಟ ಮಾಡುವ ಮತ್ತೊಬ್ಬ ಸಮರ್ಥ ನಾಯಕ ನಮ್ಮ ಪಕ್ಷಕ್ಕೆ ಸಿಕ್ಕಂತಾಗಿದೆ ಎಂದರು.

ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ, ಈ ಭಾಗದ ಸಮಗ್ರ ನೀರಾವರಿಗಾಗಿ ಸದನದ ಒಳಗೂ–ಹೊರಗೂ ನಿರಂತರ ಹೋರಾಟ ಮಾಡಿ ಸ್ವಪಕ್ಷದ ವಿರೋಧವನ್ನು ಲೆಕ್ಕಿಸದೇ ನಡೆಸಿದ ಹೋರಾಟ ನಿಜಕ್ಕೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಜಾತ್ಯತೀತ, ರೈತರ ಪರವಾಗಿರುವ ಏಕಮೇವ ಪಕ್ಷವಾಗಿರುವ ಜೆಡಿಎಸ್ ಮೂಲಕ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದು ಜಿಲ್ಲೆಯಲ್ಲಿ ಅತಿ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮನಗೂಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಜನರು ಜೆಡಿಎಸ್ ಗೆ ಸೇರ್ಪಡೆಗೊಂಡರು. ಸಮಾವೇಶಕ್ಕೂ ಮುನ್ನ ದೇವೇಗೌಡರನ್ನು 501 ಪೂರ್ಣ ಕುಂಭಮೇಳ, ವಿವಿಧ ವಾದ್ಯ ವೈಭವದೊಂದಿಗೆ ಭವ್ಯ ಸ್ವಾಗತ ನೀಡಲಾಯಿತು.

ಮಾಜಿ ಶಾಸಕ ಎನ್.ಎಸ್.ಖೇಡ, ಮಹಾದೇವಿ ನಡಹಳ್ಳಿ, ಶಾಂತಗೌಡ ನಡಹಳ್ಳಿ, ಶ್ರೀನಾಥಗೌಡ ಕೋರವಾರ, ದಯಾನಂದಗೌಡ ಯಾಳವಾರ, ಸಂಗಾರಡ್ಡಿ ದೇಸಾಯಿ, ಆರ್.ಎಮ್.ಬಡೇಘರ, ರಿಯಾಜ್ ಫಾರೂಕಿ, ನೂರ ಚಾಂದಕವಟೆ, ನಜೀರ್ ಸಿಪಾಯಿ, ಸಾಹೇಬಗೌಡ ಪಾಟೀಲ ವಣಕಿಹಾಳ, ರಿಯಾಜ್ ಯಲಿಗಾರ, ಬಾಸ್ಕರ ಗುಡಿಮನಿ, ಆರ್.ಕೆ.ಪಾಟೀಲ, ಮೈನುದ್ದೀನ ಮನಿಯಾರ, ಸೋಮನಗೌಡ ಯಾಳವಾರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.