ADVERTISEMENT

ಅರ್ಧ ಶತಮಾನದ ಪೂರೈಸಿದ ಹೆಬ್ಬಾಳ ಶಾಲೆ

ವಿಜ್ಞಾನಿ ಆಗಿರುವ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ l ಇಂಗ್ಲಿಷ್ ಶಿಕ್ಷಕರ ಕೊರತೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:43 IST
Last Updated 18 ಜನವರಿ 2017, 5:43 IST
ಅರ್ಧ ಶತಮಾನದ ಪೂರೈಸಿದ ಹೆಬ್ಬಾಳ ಶಾಲೆ
ಅರ್ಧ ಶತಮಾನದ ಪೂರೈಸಿದ ಹೆಬ್ಬಾಳ ಶಾಲೆ   

ಹುಣಸಗಿ:  ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಹೆಚ್ಚಾಗಿ ಕಳಿಸುತ್ತಾರೆ. ಆದರೆ, ಅದಕ್ಕೆ ತದ್ವಿರುದ್ದ ಎನ್ನುವಂತೆ ಹೆಬ್ಬಾಳ (ಬಿ) ಗ್ರಾಮದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಅರ್ಧ ಶತಮಾನ ಪೂರೈಸಿರುವ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಳಿಸುತ್ತಿದ್ದಾರೆ. ಈ ಮೂಲಕ ಶಾಲೆಗೆ ಉತ್ತೇಜನ ನೀಡುತ್ತಿದ್ದಾರೆ.

ಹುಣಸಗಿಯಿಂದ ಸುಮಾರು 15  ಕಿ.ಮೀ ದೂರದಲ್ಲಿರುವ ಹೆಬ್ಬಾಳ (ಬಿ) ಗ್ರಾಮದ ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಕಲಿತಿರುವ ಮಕ್ಕಳು ವಿಜ್ಞಾನಿ, ಡಾಕ್ಟರ್, ಎಂಜಿನಿಯರ್‌ಗಳಾಗಿದ್ದು, ಖಾಸಗಿ ಕಂಪೆನಿಗಳ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ.

    ಹೆಬ್ಬಾಳ (ಬಿ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ 1955 ರಲ್ಲಿ  ಪ್ರಾರಂಭವಾಗಿದ್ದು, 1 ರಿಂದ 7ನೇ ತರಗತಿವರೆಗೆ ಇದೆ. ಶಾಲೆಯಲ್ಲಿ 9 ಸುಸಜ್ಜಿತ ಕೊಠಡಿಗಳಿವೆ. ಒಟ್ಟು 177 ಮಕ್ಕಳ ದಾಖಲಾತಿ ಇದ್ದು, ಒಂದರಿಂದ ನಾಲ್ಕನೇ ತರಗತಿಯ ನಲಿ ಕಲಿಯಲ್ಲಿ 100 ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇದೆ. ಪ್ರತಿಯೊಂದು ತರಗತಿಯಲ್ಲಿಯೂ ಪ್ರತಿ ದಿನ ಶೇ 80 ರಷ್ಟು ಹಾಜರಾತಿ ಇರುತ್ತದೆ.

ಈ ಶಾಲೆಯ ಎಲ್ಲ ಶಿಕ್ಷಕರೂ ಉತ್ತಮ ಹಾಗೂ ಗುಣಮಟ್ಟದ ಬೊಧನೆಯಿಂದಾಗಿ ಮಕ್ಕಳ ಹಾಗೂ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು  ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ನಾಯಕ ಹೇಳಿದರು.

ಶಾಲೆಯ ಆವರಣದಲ್ಲಿ ಬೃಹತ್ ಗಾತ್ರದ ಮರಗಳಿದ್ದು, ಇದರಿಂದ ಶಾಲಾ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಇಂತಹ ಉತ್ತಮ   ವಾತಾವರಣ ಶಿಕ್ಷಣದ ಗುಣಮಟ್ಟ ಹೆಚ್ಚುವಂತೆ ಮಾಡಿದೆ.

ಈ ಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಇನ್ನೂ ಕೆಲವರು ವಿದೇಶದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಈ ಶಾಲೆಯಲ್ಲಿ ಕಲಿತ ಮಲ್ಲನಗೌಡ ಪಾಟೀಲ ಎಂಬುವವರು ವಿಜ್ಞಾನಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಪೋಷಕರು, ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗುರನಾಥರಡ್ಡಿ ಪಾಟೀಲ ಹೇಳುತ್ತಾರೆ.

*

ಶಾಲೆಯಲ್ಲಿ ಅಳವಡಿಸಲಾಗಿರುವ ಸೋಲಾರ್ ಕಿಟ್ ದುರಸ್ತಿಗಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇಂಗ್ಲಿಷ್‌ ಬೊಧನೆಗೆ  ಶೀಘ್ರ ಶಿಕ್ಷಕರನ್ನು ನೇಮಿಸಲಾಗುವುದು
–ಗಿರೀಶ, ಸಿಆರ್‌ಸಿ ವಜ್ಜಲ
 

ADVERTISEMENT

**

–ಭೀಮಶೇನರಾವ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.