ADVERTISEMENT

ಉಪ ಕಸುಬಿನತ್ತ ಮೀನುಗಾರ ಮಹಿಳೆಯರು

ಮಲ್ಲೇಶ್ ನಾಯಕನಹಟ್ಟಿ
Published 18 ಮಾರ್ಚ್ 2017, 7:19 IST
Last Updated 18 ಮಾರ್ಚ್ 2017, 7:19 IST
ಯಾದಗಿರಿಯಲ್ಲಿ ಉಪಕಸುಬಿಗೆ ಹೊರಟು ನಿಂತ ಮೀನುಗಾರ ಮಹಿಳೆಯರು.
ಯಾದಗಿರಿಯಲ್ಲಿ ಉಪಕಸುಬಿಗೆ ಹೊರಟು ನಿಂತ ಮೀನುಗಾರ ಮಹಿಳೆಯರು.   

ಯಾದಗಿರಿ: ದಿನೇದಿನೇ ನೀರಿನ ಹರಿವು ಕಡಿಮೆಯಾಗುತ್ತಿರುವ ಭೀಮಾನದಿ ತಟದಲ್ಲಿನ ಮೀನುಗಾರರ ಕುಟುಂಬಗಳು ಮೀನು ಶಿಕಾರಿ ಇಲ್ಲದೇ ಉಪಕಸುಬಿಗೆ ಮರಳಿವೆ.

ಇದರಿಂದಾಗಿ ಮೀನುಗಾರ ಮಹಿಳೆಯರು ಹಳ್ಳಿ ಹಳ್ಳಿ ಸುತ್ತುವ ಸ್ಥಿತಿ ಎದುರಾಗಿದೆ. ಇವರ ಹಿಂದೆ ಮಕ್ಕಳೂ ಜೊತೆಯಾಗಿರುವುದು  ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಮೀನುಗಾರ ಮಹಿಳೆಯರು ಯಾದಗಿರಿ, ಸುರಪುರ, ಶಹಾಪುರಗಳಲ್ಲಿ ಮಕ್ಕಳ ಆಟಿಕೆ, ರೋಲ್ಡ್ ಗೋಲ್ಡ್ ಅಲಂಕಾರಿಕ ವಸ್ತುಗಳು, ಆಟದ ವಸ್ತುಗಳನ್ನು ಖರೀದಿಸುತ್ತಾರೆ. ಅವನ್ನು ತಲೆಮೇಲೆ ಹೊತ್ತು ಹಳ್ಳಿಗಳನ್ನು ಸುತ್ತಿ ಮಾರಾಟ ಮಾಡುತ್ತಿದ್ದಾರೆ. ಈ ವಹಿವಾಟಿನಿಂದ ಬರುವ ಲಾಭದಿಂದ ಜೀವನ ನಡೆಸುತ್ತಿದ್ದಾರೆ.

ADVERTISEMENT

ನಾಲ್ಕೈದು ವರ್ಷಗಳಿಂದ ಆವರಿಸಿರುವ ಬರ, ಅಕಾಲಿಕ ಮಳೆ ಹಾಗೂ ನೆರೆಯಿಂದಾಗಿ ಮೀನುಗಾರರ ಕಸುಬಿಗೆ ಪೆಟ್ಟುಬಿದ್ದಿದೆ. ಇದರಿಂದಾಗಿ ಮೀನುಗಾರಿಕೆ ನಿಂತುಹೋಗಿದೆ. ನದಿಯಲ್ಲಿ ಭರಪೂರ ಮೀನು ಶಿಕಾರಿ ನಡೆಯುತ್ತಿದ್ದಾಗ ಈ ಮಹಿಳೆಯರು ಪುರುಷರಿಗೆ ನೆರವಾಗುತ್ತಿದ್ದರು. ಗಂಡಸರು ಮೀನು ಶಿಕಾರಿಯಷ್ಟೇ ಮಾಡುತ್ತಾರೆ. ಅವನ್ನು ನಗರಗಳಲ್ಲಿ ಮಹಿಳೆಯರೇ ಮಾರಾಟ ಮಾಡುತ್ತಾರೆ. ಭೀಮಾ ನದಿ ಬರಿದಾಗಿರುವುದರಿಂದ ಈಗ ಮೀನುಗಾರಿಕೆ ಇಲ್ಲವಾಗಿದೆ.

ಹಳ್ಳಿಗಳಿಗೆ ಹೋಗಿ ಚೈನ್, ಪಂಚಗೌರಿ ಹರಳು, ಲಕ್ಷ್ಮೀಸರ, ಸರ, ಡಿಸ್ಕೊಮಣಿ, ಕ್ಲಿಪ್, ಜುಮಕಿ, ಬೆಂಡೋಲಿ, ಕೈಕಟ್ಟ ಮಣಿ, ಹಾಲಗಡಗ, ಚಹಾ ಸೋಸುವುದು, ಪೌಡರ್ ಡಬ್ಬಿ, ರಿಬ್ಬನ್, ಕನ್ನಡಿ, ಬಾಚಣಿಕೆ, ಕಾಡಿಗೆ, ಉಡುದಾರ, ಗಿಲಗಿಂಚಿ, ಹೇರ್‌ಪಿನ್, ಹಿಟ್ಟಿನ ಜರಡಿ ಮಾರುತ್ತಿದ್ದಾರೆ.

ಸಿಗದ ಕೌಶಲ ತರಬೇತಿ: ‘ಮೀನುಗಾರರ ಮಹಿಳೆಯರಿಗೆ ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆಗಳಿಂದ ಯಾವುದೇ ಕೌಶಲ ತರಬೇತಿ ಸಿಕ್ಕಲ್ಲ. ಇವರೆಲ್ಲಾ ಅನಕ್ಷರಸ್ಥರು ಎಂಬ ಕಾರಣಕ್ಕೆ ಅಧಿಕಾರಿಗಳೂ ಸಹ ಇವರತ್ತ ಸುಳಿದೂ ನೋಡುತ್ತಿಲ್ಲ.

ತರಬೇತಿಗೆ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಕರೆಯವುದು ಕೂಡ ಇವರಿಗೆ ಸಮಸ್ಯೆಯಾಗಿದೆ. ಅಕ್ಷರ ಜ್ಞಾನದ ಕೊರತೆಯಿಂದಾಗಿ ಮೀನುಗಾರರು ಸರ್ಕಾರದ ಸೌಲಭ್ಯ ಪಡೆದುಕೊಂಡಿಲ್ಲ’ ಎಂದು ಕಬ್ಬಲಿಗ ಸಮಾಜದ ಮುಖಂಡ ಉಮೇಶ ಮುದ್ನಾಳ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಒಟ್ಟು 932 ಮೀನುಗಾರರ ಕುಟುಂಬಗಳು ಭೀಮಾ ನದಿಯ ದಂಡೆ ಮೇಲೆ ನೆಲೆಸಿವೆ. ಅವರಲ್ಲಿ ಕನಿಷ್ಠ 2 ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದಾರೆ.

500ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇವರಲ್ಲಿ ಶೇ 90ರಷ್ಟು ಮಹಿಳೆಯರು ಅನಕ್ಷರಸ್ಥರಿದ್ದಾರೆ. ಹಾಗಾಗಿ, ಸರ್ಕಾರಿ ಸೌಲಭ್ಯಗಳನ್ನು ಕೇಳಿ ಪಡೆಯುವಷ್ಟು ಇವರು ಸಬಲರಾಗಿಲ್ಲ. ಸರ್ಕಾರ ಮೀನುಗಾರ ಮಹಿಳೆಯರಿಗೆ ಪ್ರತ್ಯೇಕ ಕೌಶಲ ತರಬೇತಿ ಕೇಂದ್ರಗಳನ್ನು ತೆರೆಯಬೇಕು’ ಎಂಬುದು ಮೀನುಗಾರರ ಮಹಿಳೆಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.