ADVERTISEMENT

ಒಂದೇ ನೋಂದಣಿ ಸಂಖ್ಯೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ

ಪ್ರವೇಶ ಪರೀಕ್ಷೆಯಿಂದ ವಂಚಿತನಾದ ಕಕ್ಕೇರಾದ ಬಾಲಕ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 6:33 IST
Last Updated 7 ಮಾರ್ಚ್ 2017, 6:33 IST
ಕಕ್ಕೇರಾ: ಮೊರಾರ್ಜಿ ವಸತಿ ಶಾಲೆಯ ಪ್ರವೇಶಕ್ಕಾಗಿ ಭಾನುವಾರ (ಮಾ.5) ಜರುಗಿದ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿದ ಪ್ರಮಾದದಿಂದ ಕಕ್ಕೇರಾದ ಬಾಲಕನೊಬ್ಬ ಪರೀಕ್ಷೆಯಿಂದ ವಂಚಿತನಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 
ಒಂದೇ ಸಂಖ್ಯೆಯನ್ನು ಹೊಂದಿರುವ ಪ್ರವೇಶ ಪತ್ರವನ್ನು ಇಬ್ಬರೂ ವಿದ್ಯಾರ್ಥಿಗಳಿಗೆ ನೀಡಿದ್ದು ಈ ಅವಾಂತರಕ್ಕೆ ಕಾರಣವಾಗಿದೆ. 40/02/2202 ನೋಂದಣಿ ಸಂಖ್ಯೆಯನ್ನು ರೇವಣ ಸಿದ್ದಪ್ಪ ಹಾಗೂ ಕಕ್ಕೇರಾ ಪಟ್ಟಣದ ಚಿದಾನಂದ ಹೆಳವರ ಎಂಬ ಬಾಲಕರಿಗೆ ನೀಡಲಾಗಿದ್ದು, ಕಕ್ಕೇರಾದ ಚಿದಾನಂದ ಹೆಳವರ ಎಂಬ ಬಾಲಕನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ರೇವಣ ಸಿದ್ದಪ್ಪ ಎಂಬ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಿದ್ದಾರೆ. 
 
‌ಸುರಪುರ ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಮೊರಾರ್ಜಿ ವಸತಿ ಶಾಲೆಗೆ ಆಯ್ಕೆ ಬಯಸಿ ಪರೀಕ್ಷೆ ಬರೆಯಲು ಬಂದಿದ್ದ ಕಕ್ಕೇರಾ ಸಮೀಪದ ಹೊಸೂರ ಗ್ರಾಮದವನಾದ ಚಿದಾನಂದ ಹೆಳವರ ಎಂಬ ಕಲಬುರ್ಗಿಯ ಅಲೆಮಾರಿ ಆಶ್ರಮ ಶಾಲೆಯೊಂದರಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾನೆ. ಭಾನುವಾರ ಪರೀಕ್ಷೆ ಬರೆಯಲು ಅಣಿಯಾಗಿ ಭಾನುವಾರ ತಾಲ್ಲೂಕಿನ ರಂಗಂಪೇಟೆಯ ಅರುಂಧತಿ ಡಿ.ಇಡಿ ಕಾಲೇಜಿಗೆ ಬಂದಿದ್ದ ಬಾಲಕ ಬೇಸರದಿಂದ ಮನೆಗೆ ವಾಪಸ್ಸಾಗಿದ್ದಾನೆ.
 
ಪರೀಕ್ಷೆ ನಡೆಯುವ ವೇಳೆ ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದರೆ ಪರೀಕ್ಷೆ ಬರೆಯಲು ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು. ಪ್ರವೇಶ ಪತ್ರದ ಸಂಖ್ಯೆಗಳು ಒಂದೇ ಆಗಿರುವುದರಿಂದ ಈ ಅವಾಂತರವಾಗಿದೆ. ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ  ಪರೀಕ್ಷಾ ವಂಚಿತ  ವಿದ್ಯಾರ್ಥಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು  ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ  ಯಲ್ಲಪ್ಪ ಕಾಡ್ಲೂರ್  ಅವರು ತಿಳಿಸಿದ್ದಾರೆ.
 
ಪ್ರವೇಶ ಪತ್ರದ ಕೊನೆಯ ಸಂಖ್ಯೆಗಳನ್ನು ಬದಲಾಯಿಸಿ ವಿದ್ಯಾರ್ಥಿಯಿಂದ ಪರೀಕ್ಷೆ ಬರೆಸಬಹುದಿತ್ತು.ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದು ಮಗುವಿನ ಭವಿಷ್ಯಕ್ಕೆ ತೊಂದರೆಯಾಗಿದೆ. ಇನ್ನು ಮುಂದೆ ಈ ತರಹದ ಅವಾಂತರಗಳು ಆಗದಂತೆ ಇಲಾಖೆ ಎಚ್ಚರ ವಹಿಸಬೇಕು ಎಂದು ಕಕ್ಕೇರಾ  ವಾಲ್ಮೀಕಿ ಸಂಘದ ಅಧ್ಯಕ್ಷ  ಪರಮಣ್ಣ ವಡಿಕೇರಿ ಒತ್ತಾಯಿಸಿದ್ದಾರೆ.                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.