ADVERTISEMENT

ಕೆಂಭಾವಿ: ₹15.86 ಕೋಟಿ ಬಜೆಟ್‌ ಮಂಡನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:51 IST
Last Updated 19 ಏಪ್ರಿಲ್ 2017, 4:51 IST
ಕೆಂಭಾವಿ: ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ದೇವಪ್ಪ ಮ್ಯಾಗೇರಿ ಅಧ್ಯಕ್ಷತೆಯಲ್ಲಿ 2017-18ನೇ ಸಾಲಿನ ಬಜೆಟ್ ಮಂಡನೆ ಸಭೆ ಮಂಗಳವಾರ ನಡೆಯಿತು. 
 
ಬಜೆಟ್ ಕುರಿತು ಪುರಸಭೆ ಮುಖ್ಯಾಧಿಕಾರಿ ವಿಠಲ ಹಾದಿಮನಿ ಮಾತನಾಡಿ, ಸರ್ಕಾರದ ನಿಯಮದಂತೆ ಪ್ರತಿವರ್ಷ ಮಾರ್ಚ್‌ ತಿಂಗಳ ಅಂತ್ಯದ ವರೆಗೆ ಬಜೆಟ್ ಸಭೆ ನಡೆಸಬೇಕು. ಆದರೆ, ಪಟ್ಟಣದಲ್ಲಿ ಎರಡು ತಿಂಗಳಿನಿಂದ ನಡೆಯುತ್ತಿರುವ ತಾಲ್ಲೂಕು ರಚನೆ ಹೋರಾಟದಲ್ಲಿ ಜನಪ್ರತಿನಿಧಿಗಳು ತೊಡಗಿಸಿಕೊಂಡ ಕಾರಣ ಸಭೆ ತಡವಾಗಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸಭೆ ನಡೆಸಲಾಗುತ್ತಿದೆ’ ಎಂದರು.
 
ಕೆಂಭಾವಿ ಪುರಸಭೆಯಾದ ಬಳಿಕ ನಡೆದ ಪ್ರಥಮ ಬಜೆಟ್ ಸಭೆ ಇದಾಗಿದೆ. 2017-18ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕಂದಾಯ ಮೂಲಗಳಿಂದ ₹16 ಕೋಟಿ, ರಾಜಸ್ವ ಸಂಗ್ರಹದಿಂದ ₹13.36 ಕೋಟಿ ಹಾಗೂ ಇತರ ಮೂಲಗಳಿಂದ ₹90.91 ಲಕ್ಷ ಸೇರಿದಂತೆ ಒಟ್ಟು ₹15.86 ಕೋಟಿ ಆದಾಯ ನಿರೀಕ್ಷೆಯ ಬಜೆಟ್‌ ಮಂಡಿಸಲಾಯಿತು.
 
‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕೆಲವು ವಾರ್ಡ್‌ಗಳಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಕಾಲುವೆ ನೀರು ಸ್ಥಗಿತಗೊಂಡು ಎಪಿಎಂಸಿ ಕೊಳಬೆಬಾವಿ ಬತ್ತುವ ಸಂಭವವಿದೆ. ಇದಕ್ಕೆ ಪರ್ಯಾಯವಾಗಿ ಹೊಸ ಕೊಳವೆಬಾವ ಕೊರೆಸಲಾಗುವುದು’ ಎಂದು ಮುಖ್ಯಾಧಿಕಾರಿ ಹೇಳಿದರು. 
 
ಸದಸ್ಯ ವಿಕಾಸ ಸೊನ್ನದ ಮಾತನಾಡಿ, ಪುರಸಭೆ ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು. 
 
ಉಪಾಧ್ಯಕ್ಷೆ ಆರೆಮ್ಮ ಸುರಪುರ ಇದ್ದರು. ಸದಸ್ಯರಾದ ರಾಘವೇಂದ್ರ ದೇಶಪಾಂಡೆ, ಗುರು ಕುಂಬಾರ, ಉಮಾದೇವಿ ಪೊಲೀಸ್ ಪಾಟೀಲ, ರವಿ ಮಲಕಾಪೂರ ಸಭೆಯಲ್ಲಿ ಮಾತನಾಡಿದರು. ಜಯಶ್ರೀ ಬಜೆಟ್ ಪತ್ರಿಕೆ ಓದಿದರು, ಹಣಮಂತ, ಮೌನೇಶ, ರಷೀದ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.