ADVERTISEMENT

ಕೆರೆ ನಿರ್ಮಾಣ ಸ್ಥಳಕ್ಕೆ ಶಾಸಕ ನಾಯಕ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 5:53 IST
Last Updated 6 ಜುಲೈ 2017, 5:53 IST

ಹುಣಸಗಿ: ಸಮೀಪದ ಕೋಳಿಹಾಳದಲ್ಲಿ ಗ್ರಾಮಸ್ಥರು ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಕೆರೆ ನಿರ್ಮಾಣ ಸ್ಥಳಕ್ಕೆ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಧರ್ಮಸ್ಥಳ ಸಂಸ್ಥೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸುಮಾರು 4 ಎಕರೆ ಪ್ರದೇಶದಲ್ಲಿ ಮೂರು ವಾರಗಳಿಂದ ಕೆರೆ ನಿರ್ಮಾಣ ಕಾಮಗಾರಿ ನಡೆದಿದೆ. ಹೂಳು ತೆಗೆಯುವ ವೆಚ್ಚವನ್ನು ಧರ್ಮಸ್ಥಳ ಸಂಸ್ಥೆ ನೀಡುತ್ತಿದೆ. ಆದರೆ, ಹೂಳನ್ನು ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ’ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ದುಗ್ಗೆಗೌಡ ಮಾಹಿತಿ ನೀಡಿದರು.

ತಾಲ್ಲೂಕು ನಿರ್ದೇಶಕ ಸಂದೀಪ್ ಡಿ. ಮಾತನಾಡಿ, ‘ಸಂಸ್ಥೆ ಅಂದಾಜು ₹12 ಲಕ್ಷ ವೆಚ್ಚ ಮಾಡಿದ್ದು, ಗ್ರಾಮಸ್ಥರ ಸಹಾಯ ಸಹಕಾರದಿಂದ ಈ ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದರು. ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ‘ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಇಂದಿಗೂ ಕೆಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಧರ್ಮಸ್ಥಳ ಸಂಸ್ಥೆ ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ಕಾರ್ಯಗಳು ಹೆಚ್ಚು ನಡೆಯಲಿ’ ಎಂದು ಹೇಳಿದರು.

ADVERTISEMENT

‘ಸುರಪುರ ತಾಲ್ಲೂಕಿನಲ್ಲಿ ಕುಡಿವ ನೀರು ಮತ್ತು ಲಘು ನೀರಾವರಿ ವಂಚಿತ ಹಳ್ಳಿಗಳು ಸಾಕಷ್ಟು ಇವೆ. ಅದಕ್ಕಾಗಿ 3–4 ಕೆರೆಗಳನ್ನು ನಿರ್ಮಿಸಲು ಮುಂದೆ ಬಂದರೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಮಾತನಾಡಿ, ‘ನಮ್ಮ ಭಾಗದಲ್ಲಿ ಧರ್ಮಸ್ಥಳ ಸಂಸ್ಥೆ ಗ್ರಾಮಗಳ ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಮುಖಂಡರಾದ ಶರಣು ದಂಡಿನ್, ಹುಲಗಪ್ಪ ಗುರಿಕಾರ, ಮಲಕೀಂದ್ರರಾವ ಜಹಗಿರದಾರ, ಶಾಂತಣ್ಣ ದೊರೆ, ಸಂತೋಷ ಜಾಧವ, ಭೀಮನಗೌಡ, ಶಂಬಾಜಿಗೌಡ ಪಾಟೀಲ, ಮಲ್ಲಪ್ಪ ಇಸಾಂಪುರ, ಚನ್ನಬಸಪ್ಪಗೌಡ ಗುಂಡಲಗೇರಾ, ಶಾಂತಪ್ಪ ಬಾಕ್ಲಿ ಇದ್ದರು. ಈ ಕುರಿತು ‘ಪ್ರಜಾವಾಣಿ’ ಬುಧವಾರದ ಸಂಚಿಕೆಯಲ್ಲಿ ‘ಕೆರೆ ನಿರ್ಮಿಸಲು ಮುಂದಾದ ಗ್ರಾಮಸ್ಥರು’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.