ADVERTISEMENT

ಚರಂಡಿ ವ್ಯವಸ್ಥೆ ಕಾಣದ ಖಾನಾಪುರ

ಮೂಲಸೌಕರ್ಯ ವಂಚಿತ ಖಾನಾಪುರ ಎಸ್.ಕೆ ಗ್ರಾಮ

ಪವನ ಕುಲಕರ್ಣಿ
Published 7 ಮಾರ್ಚ್ 2017, 6:39 IST
Last Updated 7 ಮಾರ್ಚ್ 2017, 6:39 IST
ಕೆಂಭಾವಿ: ರಾಜ್ಯ ಹಾಗೂ ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಪಡಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಶೌಚಾಲಯ, ಒಳಚರಂಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಪ್ರತಿ ವರ್ಷ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ.
 
ಆದರೆ ಸರ್ಕಾರದ ಯಾವುದೇ ಯೋಜನೆಗಳು ಈ ಗ್ರಾಮವನ್ನು ಇನ್ನೂ ತಲುಪಿಲ್ಲ. ಆ  ಅಭಿವೃದ್ಧಿ ಶೂನ್ಯ ಗ್ರಾಮವೇ ಸುರಪುರ ತಾಲ್ಲೂಕಿನ ನಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾನಾಪುರ ಎಸ್.ಕೆ.
 
ಖಾನಾಪುರ ಎಸ್.ಕೆ ಗ್ರಾಮದಲ್ಲಿ ಬಹುತೇಕ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ಚರಂಡಿ ನೀರು ಹರಿಯುತ್ತಿದೆ. ರಸ್ತೆ ಹಾಗೂ ಚರಂಡಿ ಯಾವುದೆಂದು ಗುರುತಿಸುವುದೇ ಕಷ್ಟವಾಗಿದೆ. ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಡೆಂಗೆ, ಮಲೇರಿಯಾ, ಕಾಲರಾ ಭೀತಿಯಲ್ಲಿ ಗ್ರಾಮಸ್ಥರು ವಾಸ ಮಾಡುತ್ತಿದ್ದಾರೆ. ಸುವರ್ಣಗ್ರಾಮ ಯೋಜನೆಯಡಿ ಕೆಲವೆಡೆ ಸಿಸಿ ರಸ್ತೆಗಳು ಆಗಿದ್ದರೂ ಚರಂಡಿ ನಿರ್ಮಿಸಿಲ್ಲ. ಇದರಿಂದಾಗಿ ಗ್ರಾಮದಲ್ಲಿ ರಸ್ತೆಗಳ ಮೇಲೆಯೇ ತ್ಯಾಜ್ಯ ನೀರು ಹರಿಯುವಂತಾಗಿದೆ. 
 
ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಸಾಮೂಹಿಕ ಮಹಿಳೆಯರ ಶೌಚಾಲಯವೇ ಇಲ್ಲ. ಇದರಿಂದಾಗಿ ಮಹಿಳೆಯರ ಪಾಡು ಹೇಳತೀರದು. ಶೌಚಾಲಯ ಇಲ್ಲದೇ ಇರುವುದರಿಂದ ಮಹಿಳೆಯರು ಬಯಲಿ ಶೌಚಾಲಯಕ್ಕೆ ಹೋಗುವಂತಹ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ.

ಹಲವು ಬಾರಿ ಶಾಸಕರಿಗೆ, ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯ ಪಕ್ಕದ ಗೋಡೆಯೇ ಸದ್ಯ ಶೌಚಾಲಯವಾಗಿದೆ. ಅನಿವಾರ್ಯವಾಗಿ ಅಲ್ಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ನಿವಾಸಿ ಮಡಿವಾಳಮ್ಮ ಕುಂಬಾರ ಅವರು ಹೇಳುತ್ತಾರೆ. 
 
ಹರಿಜನವಾಡದಿಂದ ಗುಂಡಾಪುರಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯ ತುಂಬ ಚರಂಡಿ ನೀರು ಹರಿಯುತ್ತಿದ್ದು, ಗಬ್ಬು ವಾಸನೆ ಬರುತ್ತಿದೆ. ಹಾಗಾಗಿ ಈ ಪ್ರದೇಶದಲ್ಲಿ ನಿತ್ಯ ನೂರಾರು ರೈತರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದ್ದು ಈ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಕರವೇ ಉಪಾಧ್ಯಕ್ಷ ರವಿರಾಜ ಕಂದಳ್ಳಿ ಒತ್ತಾಯಿಸಿದ್ದಾರೆ.
 
* ಹಲವು ವರ್ಷಗಳಿಂದ ಗ್ರಾಮ ದಲ್ಲಿ ಶೌಚಾಲಯವೇ ಇಲ್ಲ.  ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರದ ಅನುದಾನ ನೀಡುತ್ತಿದೆ. ಆದರೆ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ.
ಮಡಿವಾಳಮ್ಮ ಕುಂಬಾರ, ಗ್ರಾಮಸ್ಥೆ
 
* ಈ ಬಾರಿಯ ಗ್ರಾಮಸಭೆಯಲ್ಲಿ ಖಾನಾಪುರದ ಸಮಸ್ಯೆಗಳ ಕುರಿತು ಚರ್ಚಿಸಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಶಾಂತಣ್ಣ ಚನ್ನೂರ, ನಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.