ADVERTISEMENT

ಜನವರಿಯಲ್ಲಿ ಜಿಲ್ಲಾ ದ್ವಿತೀಯ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2014, 11:35 IST
Last Updated 4 ಆಗಸ್ಟ್ 2014, 11:35 IST

ಯಾದಗಿರಿ: ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮುಗಿಯುತ್ತಿ­ದ್ದಂತೆಯೇ ಯಾದಗಿರಿ ಜಿಲ್ಲೆಯಲ್ಲೂ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಆರಂಭ­ಗೊಂಡಂತಾಗಿದೆ. ಮಾತೃ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ನಂತರ ಇದೀಗ ಜಿಲ್ಲೆಯಲ್ಲೂ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಮುಂದಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಜನವರಿಯಲ್ಲಿ ಎರಡನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ 2012ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2013ರಲ್ಲಿ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗಿದೆ. ಇದೀಗ ಎರಡನೇ ಸಾಹಿತ್ಯ ಸಮ್ಮೇಳನ ನಡೆಸಬೇಕು ಎನ್ನುವ ಒತ್ತಾಯಗಳು ಕೇಳಿ ಬರುವ ಮುನ್ನವೇ, ಸಾಹಿತ್ಯ ಪರಿಷತ್ತು, ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ.

2013ರ ನವೆಂಬರ್‌ನಲ್ಲಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ನಡೆಸಲಾಗಿತ್ತು. ಸುರಪುರದ ಹಿರಿಯ ಸಾಹಿತಿ ಎ.ಕೃಷ್ಣ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಾದ ನಂತರ ಮತ್ತೊಂದು ಸಮ್ಮೇಳನ­ವನ್ನು ಆಯೋ­ಜಿಸಬೇಕು ಎನ್ನುವ ಮಾತು­ಗಳು ಸಾಹಿತ್ಯ ವಲಯ­ದಲ್ಲಿ ಕೇಳಿ ಬರುತ್ತಿದ್ದವು. ಇದ­ರಿಂದಾಗಿ ಕನ್ನಡ ಸಾಹಿತ್ಯ ಪರಿ­ಷತ್‌ ಜಿಲ್ಲಾ ಘಟಕದ ಪದಾಧಿ­ಕಾರಿ­ಗಳು, 2ನೇ ಸಮ್ಮೇಳನ ಆಯೋ­ಜಿಸುವ ಚಿಂತನೆ ನಡೆ­ಸಿದ್ದು, ಬರುವ ಜನವರಿ­ಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ಹೇಳಲಾಗುತ್ತಿದೆ.

2013ರಲ್ಲಿಯೂ ಗುಲ್ಬರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ನಡೆದ ನಂತ­ರವೇ, ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ­ವನ್ನು ನಡೆಸಲಾಗಿತ್ತು. ಇದೀಗ ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳ­ನದ ಮುಗಿದಿದ್ದು, ಯಾದ­ಗಿರಿ ಜಿಲ್ಲೆಯಲ್ಲೂ ಮತ್ತೊಂದು ನುಡಿ ಜಾತ್ರೆ ಆಯೋ­ಜಿಸಬೇಕು ಎಂದು ಸಾಹಿತ್ಯಾಸಕ್ತರು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಅನೇಕ ಸಾಹಿತಿಗಳಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಗಮನ ಸೆಳೆಯಲು ನಿರಂ­ತರ ಕಾರ್ಯಕ್ರಮಗಳು ನಡೆಯಬೇಕು. ಅದರಲ್ಲೂ ಗಡಿ ಭಾಗದಲ್ಲಿರುವ ಜಿಲ್ಲೆಯಲ್ಲಿ ಕನ್ನಡದ ಚಟುವಟಿಕೆಗಳು ನಡೆಯಬೇಕು. ಈ ಕಾರಣ ಮತ್ತೊಂದು ಸಾಹಿತ್ಯ ಸಮ್ಮೇಳನದ ನಡೆಸಬೇಕು ಎಂದು ಹಿರಿಯ ಸಾಹಿತಿಗಳು ಹೇಳುತ್ತಿದ್ದಾರೆ.

ಜನವರಿಯಲ್ಲಿ ಸಮ್ಮೇಳನ: ಕನ್ನಡ ಸಾಹಿತ್ಯ ಪರಿ­ಷತ್ತಿನ ಶತಮಾನೋತ್ಸವ ಸಮಾರಂಭಗಳು ನಡೆ­ಯುತ್ತಿದ್ದು, ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಚಿಂತನೆ ಮಾಡಲಾಗುತ್ತಿದೆ. ಈ ಕಾರಣದಿಂದ ಎರಡನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ ಅಥವಾ ಫೆಬ್ರುವರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ, ಎರಡನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ­ವನ್ನು ಜನವರಿಯಲ್ಲಿ ಆಯೋಜಿಸ­ಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಪರಿಷತ್ ಭವನದ ನಿರ್ಮಾಣ ಕಾರ್ಯ ಆರಂಭವಾಗಿದೆ. ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿ­ಯಾಗಿ ನಡೆಸಲಾಗಿದೆ. ಕಳೆದ ಜನವರಿಯಲ್ಲಿ ದ್ವಿತೀಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ­ವನ್ನೂ ಆಯೋಜಿಸಲಾಗಿತ್ತು. ಇದೀಗ ಎರಡನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಬೇಕು ಎನ್ನುವ ಚರ್ಚೆಗಳು ಆರಂಭವಾಗಿದೆ. ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಮಾರಂಭದಲ್ಲಿಯೇ ಎರಡನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.