ADVERTISEMENT

ಜನಸಂಖ್ಯೆ ಹೆಚ್ಚಳದಿಂದ ನಿರುದ್ಯೋಗ ಉಲ್ಬಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:51 IST
Last Updated 18 ಜುಲೈ 2017, 5:51 IST

ಯಾದಗಿರಿ: ‘ಜನಸಂಖ್ಯೆ ಹೆಚ್ಚಳದಿಂದ ದೇಶದಲ್ಲಿ ಬಡತನ, ಅನಕ್ಷರತೆ ಹಾಗೂ ನಿರುದ್ಯೋಗ ಸಮಸ್ಯೆಗಳು ಉಲ್ಬಣಗೊಂಡು ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಿದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ  ಡಾ.ಎಂ.ಎಸ್.ಪಾಟೀಲ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

‘ಜಗತ್ತಿನಲ್ಲಿ ಶೇ11ರಷ್ಟು ಜನಸಂಖ್ಯೆ ಹೊಂದಿರುವ ಭಾರತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರತಿಯೊಬ್ಬರೂ ಈ ಬಗ್ಗೆ ಕಾಳಜಿವಹಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕು’ ಎಂದು ಕರೆ ನೀಡಿದರು.

‘ಜನನ ಪ್ರಮಾಣವನ್ನು ಕಡಿಮೆಗೊಳಿಸಲು ಮಹಿಳೆಯರು ಮತ್ತು ಪುರುಷರಿಗೆ ಹಲವು ಆಧುನಿಕ ಸರಳ ಚಿಕಿತ್ಸೆಗಳು ಲಭ್ಯವಿದೆ. ಮಹಿಳೆಯರಿಗಾಗಿ ಪಿಪಿಐಸಿಒಡಿ, ಒಪಿಸಿ ಹಾಗೂ ಪುರುಷರಿಗೆ ಎನ್‌ಎಸ್‌ವಿ ಚಿಕಿತ್ಸೆಗಳ ಚಿಕಿತ್ಸೆ ನೀಡಲಾಗುತ್ತದೆ. ತಾತ್ಕಾಲಿಕವಾಗಿ ಪುರುಷರು (ಸಿಸಿ) ಕಾಂಡೋಮ್ ಬಳಸುವ ಮೂಲಕ ಜನನ ಪ್ರಮಾಣವನ್ನು ನಿಯಂತ್ರಿಸಬಹುದು. ಮಹಿಳೆಯರು (ಒಸಿ) ಮಾತ್ರೆಗಳು, ಔಷಧ ಬಳಸಬಹುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಪ್ರಸ್ತುತ 1 ಸಾವಿರ ಪುರುಷರು ಇದ್ದರೆ, ಮಹಿಳೆಯರ ಸಂಖ್ಯೆ 953 ಇದೆ. ಸಾಕಷ್ಟು ಜನರು ಗಂಡು ಮಕ್ಕಳನ್ನೇ ಬಯಸುವುದು ಕಾಣುತ್ತೇವೆ. ಹೆಣ್ಣು, ಗಂಡು ಎಂಬ ಲಿಂಗತಾರತಮ್ಯದಿಂದಾಗಿ ಮಹಿಳೆಯರ ಅನುಪಾತ ಕುಸಿದಿದೆ. ಈ ನಿಟ್ಟಿನಲ್ಲಿ ಎಎನ್‌ಎಂ ಅವರು ಹೆಚ್ಚಿನ ಕಾಳಜಿವಹಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಶ್ರಮವಹಿಸಬೇಕು. ಅರ್ಹರನ್ನು ಗುರುತಿಸಿ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನರಸಿಂಹಲು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಮನೋರೋಗತಜ್ಞ ಡಾ.ಭಗವಂತ ಅನವಾರ ಜನಸಂಖ್ಯೆ ನಿಯಂತ್ರಣದ ಕುರಿತು ಸ್ವರಚಿತ ಕವನ ವಾಚಿಸಿದರು.

ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನಗರ ಮುಖ್ಯಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಆರ್.ಸಿಎಚ್. ಅಧಿಕಾರಿ ಡಾ.ವಿವೇಕಾನಂದ ಟೆಂಗೆ, ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರುರಾಜ ಹಿರೇಗೌಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್ ಬಿರಾದಾರ, ನಂದಣ್ಣ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.