ADVERTISEMENT

ಜಿಲ್ಲೆಯಲ್ಲಿ ಸಿಎಂ ಸ್ವಾಗತಕ್ಕೆ ತರಾತುರಿ ಸಿದ್ಧತೆ

ಯಾದಗಿರಿ: ಫೆ. 4ರಂದು ಜಿಲ್ಲಾಡಳಿತ ಭವನ ಉದ್ಘಾಟಿಸಲು ಆಗಮಿಸಲಿರುವ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 7:21 IST
Last Updated 2 ಫೆಬ್ರುವರಿ 2017, 7:21 IST
ಯಾದಗಿರಿ: ಜಿಲ್ಲಾಡಳಿತ ಭವನ ನಿರ್ಮಾಣಗೊಂಡ ಆರು ತಿಂಗಳ ನಂತರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಾಗತಕ್ಕೆ ಜಿಲ್ಲಾಡಳಿತ ನಗರದಲ್ಲಿ ತರಾತುರಿ ಸಿದ್ಧತೆಗೆ ನಡೆಸುತ್ತಿದೆ.
 
ಜಿಲ್ಲಾಧಿಕಾರಿ ಖುಷ್ಬೂ ಗೋಯೆಲ್‌ ಚೌಧರಿ ಅವರ ಆದೇಶದ ಮೇರೆಗೆ ಲೋಕೋಪಯೋಗಿ ಇಲಾಖೆ  ಅಧಿಕಾರಿಗಳು ಡಿಸಿ ಕಚೇರಿ ಸಂಪರ್ಕಿಸುವ ಹರಕಲು ರಸ್ತೆ ದುರಸ್ತಿಯನ್ನು ಕೈಗೆತ್ತಿಕೊಂಡಿದ್ದಾರೆ. ಹಗಲು ರಾತ್ರಿ ಎನ್ನದೇ ರಸ್ತೆದೂಳೆಬ್ಬಿಸುತ್ತಿದ್ದಾರೆ. ಇದರಿಂದ ಡಿಸಿ ಕಚೇರಿಗೆ ಧಾವಿಸುವ ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ.
 
ನಗರದಲ್ಲಿ ಗುಂಡಿಗಳೇ ತುಂಬಿರುವ ಸಾಕಷ್ಟು ರಸ್ತೆಗಳಿದ್ದರೂ, ಡಿಸಿ ಕಚೇರಿ ಸಂಪರ್ಕ ರಸ್ತೆಯನ್ನೇ ಅಭಿವೃದ್ಧಿಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಡಾಂಬರೀಕರಣ ಭರದಿಂದ ಸಾಗಿದೆ. ಎಂದೂ ಬೆಳಗದ ಬೀದಿ ದೀಪಗಳು ಅಲ್ಲಲ್ಲಿ ಬೆಳಕು ನೀಡುತ್ತಿವೆ. ಡಿಸಿ ಕಚೇರಿ– ಅಂಬೇಡ್ಕರ್‌ ವೃತ್ತ ಸಂಪರ್ಕ ರಸ್ತೆಯ ಡಿವೈಡರ್‌ಗಳಿಗೆ ಕಪ್ಪು–ಹಳದಿ ಬಣ್ಣ ಲೇಪಿಸಲಾಗುತ್ತಿದೆ. ಇವೆಲ್ಲಾ  ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಡೆಸುತ್ತಿರುವ ಗಿಮಿಕ್ ಎಂದು ನಗರದ ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ.
 
ಮುಖ್ಯವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಡಳಿತ ಭವನಕ್ಕೆ ಅಲ್ಲಿಂದ ಉದ್ಘಾಟನಾ ಸಮಾರಂಭ ವೇದಿಕೆ ನಿರ್ಮಾಣ ಮಾಡಲಾಗಿರುವ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಂಪರ್ಕ ಮಾರ್ಗದಲ್ಲಿ ಸಿಎಂ ಕಾರು ಸಂಚರಿಸಲಿರುವುದರಿಂದ ಆ ಮಾರ್ಗದ ರಸ್ತೆ, ಚರಂಡಿ, ಸ್ವಚ್ಛತೆಗಷ್ಟೇ ಜಿಲ್ಲಾಡಳಿತ ಗಮನ ಕೇಂದ್ರಿಕರಿಸಿದೆ ಎನ್ನಲಾಗಿದೆ.
 
ಮೂರು ಸುತ್ತಿನ ಸಭೆ: ಸಿಎಂ ಸ್ವಾಗತಕ್ಕೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೂರು ಸುತ್ತಿನ ಸಭೆ ನಡೆಸಿದ್ದಾರೆ. 
 
ಬುಧವಾರವೂ ಅವರು ಸಿದ್ಧತೆ, ಭದ್ರತೆ ಹಾಗೂ ಸಮಾರಂಭ ಯಶಸ್ಸಿನ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕಲಬುರ್ಗಿಯಿಂದ ಬೆಳಿಗ್ಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮದವರ ಕಣ್ತಪ್ಪಿಸಿ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿ ಸಂಜೆ ಮರಳಿ ಕಲಬುರ್ಗಿ ಸೇರಿಕೊಳ್ಳುತ್ತಿದ್ದಾರೆ.
 
ಒಟ್ಟು 32 ಕಾಮಗಾರಿಗಳಿಗೆ ಅಡಿಗಲ್ಲು: ಫೆ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಡಳಿತ ಭವನ ಲೋಕಾರ್ಪಣೆ ಜತೆಗೆ ವಿವಿಧ ಇಲಾಖೆಗಳ 32 ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಿದ್ದಾರೆ. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ 20 ನೂತನ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಹೋಂಗಾರ್ಡ್ ಸೇರಿದಂತೆ ಒಟ್ಟು 1,350 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂಬುದಾಗಿ ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ.
 
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಆಗಬೇಕಾಗಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಡಳಿತ ಬೇಡಿಕೆ ಪಟ್ಟಿ ಸಲ್ಲಿಸಲು ತೀರ್ಮಾನಿಸಿದೆ.
 
**
‘ಗಿಮಿಕ್‌ಗೆ ಸಿಎಂ ಮರುಳಾಗದಿರಲಿ’
ಸಿಎಂ ಸಿದ್ದರಾಮಯ್ಯ ಬಂದು ಹೋಗುವ ಹಾದಿಗೆ ಜಿಲ್ಲಾಡಳಿತ ಆದ್ಯತೆ ನೀಡಿರುವುದು ಅಷ್ಟು ಸಮಂಜಸವಲ್ಲ. ಸಿದ್ದರಾಮಯ್ಯ ಹೆಲಿಪ್ಯಾಡ್‌ನಿಂದ ನಗರದಲ್ಲಿ ಪಾದಯಾತ್ರೆ ಮೂಲಕ ಸಮಾರಂಭದ ವೇದಿಕೆಗೆ ಬರಲಿ. ಆಗ ಜಿಲ್ಲಾಡಳಿತ ಅಭಿವೃದ್ಧಿ ಕಾರ್ಯವೈಖರಿ ಗೋಚರಿಸಲಿದೆ. ಅಧಿಕಾರಿಗಳ ಗಿಮಿಕ್‌ಗೆ ಸಿದ್ದರಾಮಯ್ಯ ಮರುಳಾಗ ಬಾರದು ಎನ್ನುತ್ತಾರೆ ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್‌ ಲಿಂಡಿಯಾ ಜಿಲ್ಲಾ ಸಮಿತಿ ಅಧ್ಯಕ್ಷ ಸೋಮಶೇಖರ್.
 
**
ಸಾವಿರಾರು ಮನವಿ ಕೊಟ್ಟರೂ ಕಿವಿಗೊಡದ ಜಿಲ್ಲಾಡಳಿತ ರಸ್ತೆಗಳ ದಿಢೀರ್‌ ಡಾಂಬರೀಕರಣ ಕೈಗೆತ್ತಿಕೊಂಡಿರುವುದು ಅಚ್ಚರಿ ಅನಿಸುತ್ತದೆ. 
-ಮಲ್ಲಿಕಾರ್ಜುನ ಕ್ರಾಂತಿ
ದಲಿತ ಮುಖಂಡ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.