ADVERTISEMENT

ಜಿಲ್ಲೆಯಲ್ಲಿ 42 ಪರೀಕ್ಷಾ ಕೇಂದ್ರ

30ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: 13,098 ವಿದ್ಯಾರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 9:14 IST
Last Updated 24 ಮಾರ್ಚ್ 2017, 9:14 IST

ಯಾದಗಿರಿ: ‘ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್‌.ಕೆಂಚೇಗೌಡ ತಿಳಿಸಿದರು.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ನಡೆಯುವ ಪರೀಕ್ಷೆಯಲ್ಲಿ 7,574 ಬಾಲಕರು ಮತ್ತು 5,524 ಬಾಲಕಿಯರಿರು ಸೇರಿ ಒಟ್ಟು13,098 ಮಂದಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿದ್ದಾರೆ. ಶಹಾಪುರ–13, ಸುರಪುರ–13 ಯಾದಗಿರಿ–16 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.

ಅವುಗಳಲ್ಲಿ ಮೂರು ಖಾಸಗಿ ಅಭ್ಯರ್ಥಿಗಳ ಕೇಂದ್ರಗಳನ್ನು ಒಳಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 42 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಜಿಲ್ಲೆಯ 6 ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾ ಗಿದೆ. ಶಹಾಪುರ ತಾಲ್ಲೂಕಿನ ವಡಗೇರಾದ ಸರ್ಕಾರಿ ಪ್ರೌಢಶಾಲೆ, ದೋರಹನಳ್ಳಿ ಸರ್ಕಾರಿ ಪ್ರೌಢಶಾಲೆ, ಸುರಪುರ ತಾಲ್ಲೂಕಿನ ಹುಣಸಗಿಯ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಕೆಂಭಾವಿಯ ಸರ್ಕಾರಿ ಪದವಿ ಪೂರ್ವ ಕಾಲೇಜು,

ಲಕ್ಷ್ಮೀಪುರದ ಸರ್ಕಾರಿ ಪ್ರೌಢಶಾಲೆ ಹಾಗೂ ಗುರುಮಠಕಲ್‌ನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜುಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ. ಅತಿ ಸೂಕ್ಷ್ಮ ಕೇಂದ್ರಗಳಾಗಿ ಯಾದಗಿರಿ ನಗರದ ಸರ್ಕಾರಿ ಕನ್ಯಾಪ್ರೌಢಶಾಲೆ ಮತ್ತು ಸ್ಟೇಷನ್ ಬಜಾರ್ ಸರ್ಕಾರಿ ಪ್ರೌಢಶಾಲೆಗಳ ಗುರುತಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

‘42 ಪರೀಕ್ಷಾ ಕೇಂದ್ರಗಳ ಪೈಕಿ 38 ಕೇಂದ್ರಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾಗಳ ಅಳವಡಿಸಲಾಗಿದೆ. ಇಲಾಖೆ ವತಿಯಿಂದ ಜಿಲ್ಲಾ ಹಂತದಲ್ಲಿ 4 ಜಾಗೃತ ದಳದ ತಂಡಗಳನ್ನು ರಚಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ತಾಲ್ಲೂಕ ಮಟ್ಟದ ಅಧಿಕಾರಿಗಳ ಜಾಗೃತದಳ ನೇಮಕ ಮಾಡಲಾಗಿದೆ.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರ ಮೂಲ ಸೌಲಭ್ಯ ಕಲ್ಪಿಸಲು ಆಯಾ ಶಾಲಾ ಮುಖ್ಯಶಿಕ್ಷಕರಿಗೆ ಮತ್ತು ಮುಖ್ಯ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಮಾರ್ಚ್‌ 30ರಂದು ಬೆಳಿಗ್ಗೆ 9.30ಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಬೆಳಿಗ್ಗೆ 9.15ಕ್ಕೆ ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಆಸೀನರಾಗಿರಬೇಕು. ಬೆಳಿಗ್ಗೆ 9.25ಕ್ಕೆ ಎರಡನೇ ಲಾಂಗ್ ಬೆಲ್ ಬಳಿಕ ಪರೀಕ್ಷಾ ಕೊಠಡಿವಾರು ಮುಖ್ಯ ಅಧೀಕ್ಷಕರು ಹಾಗೂ ಕಸ್ಟೋಡಿಯನ್‌ ಪ್ರಶ್ನೆಪತ್ರಿಕೆ ಲಕೋಟೆಗಳ ಕೊಠಡಿ ಮೇಲ್ವಿಚಾರಕರಿಗೆ ವಿತರಿಸುತ್ತಾರೆ. ಬೆಳಿಗ್ಗೆ 9.3ಕ್ಕೆ ಮೂರ ನೆಯ ಲಾಂಗ್ ಬೆಲ್ ಆದ ನಂತರ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳನ್ನು ವಿತರಿ ಸಲಾಗುತ್ತದೆ.

ಪರೀಕ್ಷೆ ಪ್ರಾರಂಭವಾದ 9.30ರ ನಂತರ ಯಾವುದೇ ಕಾರಣಕ್ಕೂ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ, ಕೇಂದ್ರದಲ್ಲಿ ಅವಕಾಶ ಇರುವುದಿಲ್ಲ’ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶನ ನೀಡಿದೆ’ ಎಂದು ತಿಳಿಸಿದ್ದಾರೆ.

‘ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ವಿದ್ಯಾರ್ಥಿಗಳು ನಿಗದಿಪಡಿಸಿದ ಸಮಯ ದೊಳಗಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ನೇರವಾಗಿ
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಖಾಸಗಿ ಅಭ್ಯರ್ಥಿಗಳು ಯಾವುದಾದರ ಒಂದು ಗುರುತಿನ ಚೀಟಿ ತರಬೇಕು’ ಎಂದು ಡಿಡಿಪಿಐ ಎನ್.ಕೆಂಚೇಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.