ADVERTISEMENT

ತೊಗರಿ ಮಾರಾಟಕ್ಕೆ ರೈತರ ಪರದಾಟ

ಒಂದೇ ದಿನ 400ಕ್ಕೂ ಹೆಚ್ಚು ರೈತರು ನೋಂದಣಿ, ಟೋಕನ್ ಪಡೆಯಲು ನುಗ್ಗಾಟ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 9:38 IST
Last Updated 14 ಫೆಬ್ರುವರಿ 2017, 9:38 IST
ಹುಣಸಗಿಯ ಕಂದಾಯ ನಿರಿಕ್ಷರ ಕಚೇರಿಯಲ್ಲಿ ತೊಗರಿ ಮಾರಾಟ ಮಾಡಲು ನೊಂದಣಿಗಾಗಿ ಸರದಿಯಲ್ಲಿ ನಿಂತಿರುವ ರೈತರು 
ಹುಣಸಗಿಯ ಕಂದಾಯ ನಿರಿಕ್ಷರ ಕಚೇರಿಯಲ್ಲಿ ತೊಗರಿ ಮಾರಾಟ ಮಾಡಲು ನೊಂದಣಿಗಾಗಿ ಸರದಿಯಲ್ಲಿ ನಿಂತಿರುವ ರೈತರು    
ಹುಣಸಗಿ:  ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಸಾಕಷ್ಟು ಖರ್ಚು ಮಾಡಿ ತೊಗರಿ ಬೆಳೆದಿರುವ ರೈತರು ತೊಗರಿ ಮಾರಾಟಕ್ಕೂ ಪರದಾಡುವಂತಾಗಿದೆ ಎಂದು ಇಲ್ಲಿನ ರೈತರು ದೂರಿದ್ದಾರೆ. 
 
ಸಾಲ ಮಾಡಿ ತೊಗರಿ ಬಿತ್ತನೆ ಮಾಡಿದ್ದೆವು. ಆದರೆ, ಮಳೆಯ ಕೊರತೆಯಿಂದಾಗಿ ಅರ್ಧದಷ್ಟು ಬೆಳೆ ಒಣಗಿ ಹೊಯಿತು. ಈ ನಡುವೆ ಕೈಗೆ ಬಂದ ಫಸಲು ಮಾರಾಟ ಮಾಡಲು ಅಲೆಯುವಂತಾಗಿದೆ ಎಂದು ಶಾಂತಗೌಡ ಅಮಲಿಹಾಳ, ಮಲ್ಲಿಕಾರ್ಜುನ ರಾಜನಕೋಳೂರ ಸೇರಿದಂತೆ ಕೆಲ ರೈತರು ಬೇಸರ ವ್ಯಕ್ತಪಡಿಸಿದರು.
 
ಮಳೆಯಾಶ್ರಿತ ಹಾಗೂ ಕಾಲುವೆ ಕೊನೆಯ ಭಾಗದ ಬೇಸಾಯದ ಗ್ರಾಮಗಳಾದ ಶ್ರೀನಿವಾಸಪುರ, ಮಂಜಲಾಪುರ, ಗೆದ್ದಲಮರಿ, ಗುಂಡಲಗೇರಾ, ಕಲ್ಲದೇವನಹಳ್ಳಿ, ಅಮಲಿಹಾಳ, ಕರಿಬಾವಿ, ಜೋಗುಂಡಬಾವಿ, ಕೊಡೇಕಲ್ಲ, ನಾರಾಯಣಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ತಾವು ಬೆಳೆದ ತೊಗರಿಯನ್ನು ಬೆಂಬಲ ಬೆಲೆಗೆ ಮಾ ರಾಟ ಮಾಡಲು ಅಲೆದಾಡುವಂತಾಗಿದೆ. 
 
ಸುರಪುರಕ್ಕೆ ತೆರಳಿ ಕಳೆದ 15 ದಿನಗಳಿಂದ ಸರದಿಯಲ್ಲಿ ನಿಂತು ತೊಗರಿ ಮಾರಾಟಕ್ಕಾಗಿ ದಿನಾಂಕ ನಿಗದಿ ಪಡಿಸಿದ (ನೋಂದಣಿ) ಟೋಕನ್ ಪಡೆಯಲಾಗಿತ್ತು. ಆದರೆ ಶನಿವಾರ ಅದನ್ನು ಮಾರಾಟ ಮಾಡಲು ಮಾಲು ಸಮೇತ ಸುರಪುರಕ್ಕೆ ಹೊದರೆ ಅಲ್ಲಿ ನಮ್ಮ ಮಾಲನ್ನು ಖರೀಸದೇ ಹುಣಸಗಿ ತೊಗರಿ ಖರೀದಿ ಕೇಂದ್ರಕ್ಕೆ ಹೋಗಿ ಎಂದು ಕಳಿಸಿದ್ದರು. 
 
ಆದರೆ ಸೋಮವಾರ ಬೆಳಿಗ್ಗೆಯಿಂದ ಕಾಯ್ದರೂ ನಮ್ಮ ಮಾಲು ಖರೀಸಲು ಖರೀದಿ ಕೇಂದ್ರ ಬಾಗಿಲು ತೆರೆದಿಲ್ಲ ಎಂದು ನಾರಾಯಣಪುರ ಬಳಿಯ ಬಸರಿಗಿಡದ ತಾಂಡಾದ ರೈತ ಗೋಪಿಲಾಲ, ಮಲ್ಲಣ್ಣ ಪೂಜಾರಿ ದೂರಿದರು. 
 
ಈ ಕುರಿತು ಖರೀದಿ ಕೇಂದ್ರದ ಸದಸ್ಯರನ್ನು ಸಂಪರ್ಕಿಸಿದರೆ, ಇನ್ನೂ ತೊಗರಿ ಗುಣಮಟ್ಟ ಪರಿಕ್ಷಿಸುವ ಅಧಿಕಾರಿ ಬಂದಿಲ್ಲ ಎಂದು ಹೇಳುತ್ತಾರೆ ಎಂದು ಕಲ್ಲದೇವನಹಳ್ಳಿಯ ಶಿವಪ್ಪ ಬಡಿಗೇರ, ಕರಿಬಾವಿಯ ಮುತ್ತು ಪಾಟೀಲ ಆರೋಪಿಸಿದರು.
 
ಸುಮಾರು 20ಕ್ಕೂ ಹೆಚ್ಚು ರೈತರು ಸೋಮವಾರ ಬೆಳಿಗ್ಗೆಯೇ ಹುಣಸಗಿಗೆ ತೊಗರಿಯೊಂದಿಗೆ ಬಂದು ಕಾಯ್ದು ಸುಸ್ತಾದರು. ಇತ್ತ ತೊಗರಿ ಖರೀದಿ ಕೇಂದ್ರಕ್ಕೆ ತರಬೇಕಾದ ದಿನಾಂಕ ತಿಳಿಸುವ (ನೋಂದಣಿ) ಟೋಕನ್ ಪಡೆದುಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ರೈತರು ಬಂದಿದ್ದರಿಂದಾಗಿ ಬೆಳಿಗ್ಗೆ ನೂಕು ನುಗ್ಗಲು ಉಂಟಾಗಿತ್ತು. ಬಳಿಕ ಸರದಿಯಲ್ಲಿ ನಿಂತು ಸೋಮವಾರ ಸಂಜೆಯವರೆಗೂ ರೈತರು  ಟೋಕನ್ ಪಡೆದರು.
 
ಒಂದು ದಿನಕ್ಕೆ 600 ಚೀಲ ತೊಗರಿ ಖರೀದಿಸುವ ಗುರಿಯೊಂದಿಗೆ ಅಂದಾಜು 400 ಕ್ಕೂ ಹೆಚ್ಚು ರೈತರ 5400 ಚೀಲ ತೊಗರಿ ಖರೀದಿಯ ನೊಂದಣಿ ಒಂದೇ ದಿನದಲ್ಲಿ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆಯ ಎಸ್‌.ಎಂ.ಗವಿಸಿದ್ದಯ್ಯ ತಿಳಿಸಿದರು.
 
ಸಂಜೆ ಆರಂಭವಾದ ಖರೀದಿ ಕೇಂದ್ರ: ರೈತರ ಒತ್ತಡ ಮಧ್ಯೆ ತೊಗರಿ ಗುಣಮಟ್ಟ ಪರೀಕ್ಷಿಸುವ ಅಧಿಕಾರಿ ಸೋಮವಾರ ಸಂಜೆ ಬರುತ್ತಿದ್ದಂತೆ ರೈತರ ತೋಗರಿ ಖರೀದಿಸಲು ಪ್ರಾರಂಭಿಸಲಾಯಿತು.
– ಭೀಮಶೇನರಾವ ಕುಲಕರ್ಣಿ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.