ADVERTISEMENT

ದಿನಗೂಲಿ ಪೌರಕಾರ್ಮಿಕರ ಪ್ರತಿಭಟನೆ

ಸುರಪುರ: ಸೇವೆಯಲ್ಲಿ ಮುಂದುವರಿಕೆ, ಬಾಕಿ ವೇತನ ಪಾವತಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 7:23 IST
Last Updated 2 ಫೆಬ್ರುವರಿ 2017, 7:23 IST
ಸುರಪುರ ತಹಶೀಲ್ದಾರ್‌ ಕಚೇರಿ ಮುಂದೆ ಬುಧವಾರ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು
ಸುರಪುರ ತಹಶೀಲ್ದಾರ್‌ ಕಚೇರಿ ಮುಂದೆ ಬುಧವಾರ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು   
ಸುರಪುರ: ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಪೌರಕಾರ್ಮಿಕರು ಬುಧವಾರ ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಫಾಯಿ ಸಾಮಗ್ರಿಗಳಾದ ಪೊರಕೆ, ಸಲಿಕೆ, ಗುದ್ದಲಿ, ಬಕೆಟ್, ಪುಟ್ಟಿ ಹಿಡಿದು ನಗರದ ರಸ್ತೆಗಳಲ್ಲಿ ಘೋಷಣೆ ಕೂಗಿದರು.
 
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣದ ನೇತೃತ್ವದಲ್ಲಿ ಗೌತಮಬುದ್ಧ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಮೆರವಣಿಗೆ ನಡೆಸಿ ಅಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  
 
ನಗರಸಭೆ 10 ತಿಂಗಳಿಂದ ವೇತನ ಬಾಕಿ ಉಳಿಸಿಕೊಂಡಿದ್ದು, ಪೌರಕಾರ್ಮಿಕರ ನೇಮಕಕ್ಕೆ ಹೊರಗುತ್ತಿಗೆ ಟೆಂಡರ್ ಕರೆಯಲಾಗಿದೆ. ಕೆಲವು ದಿನಗಳಿಂದ ತಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದರು. 
 
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ, ‘ದಿನಗೂಲಿ ಪೌರಕಾರ್ಮಿಕರು ಅನೇಕ ತಿಂಗಳು ವೇತನ ಮತ್ತು ನೌಕರಿಯಿಲ್ಲದೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಪೌರಾಯುಕ್ತರು ದಿನಗೂಲಿ ಪೌರ ಕಾರ್ಮಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಆರೋಪಿಸಿದರು.
 
‘ಪೌರಾಯುಕ್ತರು ದಿನಗೂಲಿ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವುದು ಖಂಡನೀಯ. ಬಹುತೇಕ ಕಾರ್ಮಿಕರು ದಲಿತರಾಗಿದ್ದಾರೆ. ಬಡತನದ ಬೇಗೆಯಲ್ಲಿರುವ ಅವರ ಮೇಲೆ ಈ ರೀತಿಯ ಪ್ರಹಾರ ನಡೆಸಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
‘ಸೇಡಂ, ಶಹಬಾದ, ಆಫಜಲಪುರ, ಆಳಂದ, ಚಿಂಚೋಳಿ ಪುರಸಭೆಗಳಲ್ಲಿ ಈ ಹಿಂದೆ ಇದೇ ರೀತಿ ಸಮಸ್ಯೆ ಉದ್ಭವಿಸಿತ್ತು. ನಮ್ಮ ಸಮಿತಿಯು ಹೋರಾಟ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೊರಗುತ್ತಿಗೆ ಆದೇಶ ರದ್ದುಪಡಿಸಲು ಮನವಿ ಮಾಡಿಕೊಂಡಾಗ, ಅವರು ನಿರ್ದೇಶಕರೊಂದಿಗೆ ಮಾತನಾಡಿ ಸಮಸ್ಯೆ ಇತ್ಯರ್ಥಗೊಳಿಸಿದ್ದರು’ ಎಂದು ತಿಳಿಸಿದರು.
 
‘ಇಲ್ಲಿಯ ಪೌರಾಯುಕ್ತರು ಆ ಆದೇಶ ಪ್ರತಿಯನ್ನು ತರಿಸಿಕೊಂಡು ಅದೇ ರೀತಿ ಪಾಲಿಸಬೇಕು. ಒಂದು ವೇಳೆ ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ಫೆ.4ರಂದು ಯಾದಗಿರಿ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಸಿದರು.
 
‘ಹೊರಗುತ್ತಿಗೆ ಟೆಂಡರ್‌ ಕರೆದಿರುವುದು ಸರಿಯಲ್ಲ. ಇದರಿಂದ ಸಧ್ಯ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರು ಬೀದಿಗೆ ಬೀಳುತ್ತಾರೆ. ಇದು ಅವರ ಪಾಲಿಗೆ ಮರಣ ಶಾಸನ ಇದ್ದಂತೆ. ನಗರಸಭೆ ತನ್ನ ನಿರ್ಧಾರ ಬದಲಿಸಿದ್ದರೆ ದಿನಗೂಲಿ ಪೌರಕಾರ್ಮಿಕರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ’ ಎಂದು ತಿಳಿಸಿದರು. 
 
ದಲಿತ ಮುಖಂಡ ಚಂದ್ರಶೇಖರ ಜಡಿಮರಳ ಮಾತನಾಡಿ, ‘ಹೊಟ್ಟೆಪಾಡಿಗಾಗಿ ಕಳೆದ 10-–15 ವರ್ಷಗಳಿಂದ ನಿರಂತರವಾಗಿ, ಪ್ರಾಮಾಣಿಕವಾಗಿ ದುಡಿಯುತ್ತಿರುವ ದಿನಗೂಲಿ ಪೌರಕಾರ್ಮಿಕರಿಗೆ ವೇತನ ನೀಡದಿರುವುದು ನಿಜಕ್ಕೂ ದುರಂತದ ವಿಷಯ ಮತ್ತು ನಾಚಿಗೇಡಿತನದ ಸಂಗತಿ’ ಎಂದು ದೂರಿದರು. 
 
ತಹಶೀಲ್ದಾರ್ ಸುರೇಶ ಅಂಕಲಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಮಿತಿಯ ಮುಖಂಡರಾದ ಮಲ್ಲಿಕಾರ್ಜುನ ಕನ್ನ, ಶ್ಯಾಮರಾವ್ ಸಿಂದ್ಯಾ, ನಿಂಗಣ್ಣ ಗೋನಾಳ, ರಾಮಣ್ಣ ಶೆಳ್ಳಗಿ, ತಿಪ್ಪಣ್ಣ ಶೆಳ್ಳಗಿ, ಮಹೇಶ ಯಾದಗಿರಿ, ಮರಿಲಿಂಗಪ್ಪ ಹುಣಸಿಹೊಳೆ, ಭೀಮಣ್ಣ ಕ್ಯಾತನಾಳ, ಹುಲಿಗೆಪ್ಪ ಬೈಲಕುಂಟಿ, ಮಲ್ಲಿಕಾರ್ಜುನ ಬೊಳ್ಳಾರಿ, ಶರಣು ಬೊಳ್ಳಾರಿ, ಶ್ರೀಮಂತ ಚಲುವಾದಿ ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.
 
**
ಕಳೆದ 10– 15 ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ನಮಗೆ ಹೊರಗುತ್ತಿಗೆ ನಿರ್ಧಾರ ಬರಸಿಡಿಲು ಬಡಿದಂತಾಗಿದೆ.
-ವೆಂಕಟೇಶ ಝಂಡಾದಕೇರಿ
ಪೌರಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.