ADVERTISEMENT

ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಪರದಾಟ

ಹೊರಗುತ್ತಿಗೆ ಪೌರ ಕಾರ್ಮಿಕರ ಧರಣಿ ಇಂದಿನಿಂದ, ಬೇಡಿಕೆಗಳ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:08 IST
Last Updated 22 ಏಪ್ರಿಲ್ 2017, 5:08 IST
ಶಹಾಪುರ: ನಾಲ್ಕು ತಿಂಗಳಿಂದ ತಮಗೆ ವೇತನ ನೀಡಿಲ್ಲ ಎಂದು ಹೊರಗುತ್ತಿಗೆ ಪೌರಕಾರ್ಮಿಕರು  ಶುಕ್ರವಾರ ಕೆಲಸಕ್ಕೆ ಹಾಜರಾಗದೆ ನಗರಸಭೆಯ ಮುಂದೆ  ಪ್ರತಿಭಟನೆ ನಡೆಸಿದರು.
 
‘ಹತ್ತು ವರ್ಷಗಳಿಂದ 67 ಹೊರ ಗುತ್ತಿಗೆ ಪೌರ ಕಾರ್ಮಿಕರು ಕೆಲಸ ನಿರ್ವಹಿ ಸುತ್ತಿದ್ದೇವೆ. ಜನವರಿಯಿಂದ  ಪ್ರತಿ ತಿಂಗಳು ₹4,000 ನೀಡಬೇಕಿದ್ದು, ಅದನ್ನು ನೀಡುತ್ತಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿ ಸ್ಪಂದಿಸುತ್ತಿಲ್ಲ.  ವೇತನ  ಇಲ್ಲದಿದ್ದರೆ ಜೀವನ ನಿರ್ವಹಣೆ ಮಾಡುವುದಾದರು ಹೇಗೆ’ ಎಂದು ಅವರು ಪ್ರಶ್ನಿಸಿದರು.
 
‘ಸಾಂಕೇತಿಕವಾಗಿ ಶುಕ್ರವಾರ ಪ್ರತಿಭಟನೆ ಮಾಡಿದ್ದೇವೆ. ನ್ಯಾಯ ಸಮ್ಮತ ವಾಗಿ ನಮ್ಮ ಬೇಡಿಕೆ ಈಡೇರಿಸುವವರೆಗೆ  ಶನಿವಾರದಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದೇವೆ’ ಎಂದು ಸಿಐಟಿಯು ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವಪ್ಪ ಅವರಾದ ತಿಳಿಸಿದರು. 
 
‘ಸ್ವಚ್ಛತಾ ಗುತ್ತಿಗೆದಾರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ  ಕಾರ್ಮಿಕರಿಗೆ  ಕನಿಷ್ಠ ವೇತನವನ್ನು ಸರ್ಕಾರ ನಿಗದಿಪಡಿ ಸಿದೆ. ಅದರಂತೆ ಹೊರ ಗುತ್ತಿಗೆ ಪೌರ ಕಾರ್ಮಿಕರು ಪ್ರತಿ ತಿಂಗಳು ₹12,431 ವೇತನ ಪಡೆಯಲು ಅರ್ಹರಾಗಿದ್ದಾರೆ.
 
ಈಗಾಗಲೇ ಯಾದಗಿರಿ ಜಿಲ್ಲೆಯ ಯಾದಗಿರಿ, ಗುರುಮಠಕಲ್ ಪುರಸಭೆ ಯಲ್ಲಿ  ನಿಯಮದಂತೆ ವೇತನ ಪಾವತಿ ಸಿದ್ದಾರೆ. ಇಲ್ಲಿ ಅದು ಇನ್ನೂ ಜಾರಿ ಯಾಗಿಲ್ಲ’ ಎಂದು ದೂರಿದರು.
 
‘ನಗರ ಸಭೆಯ ಆಡಳಿತಾಧಿಕಾರಿ ಯಾಗಿರುವ  ಪ್ರಭಾರ ಜಿಲ್ಲಾಧಿಕಾರಿ ಮೆನನ್ ತಕ್ಷಣ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲದೆ ಹೋದರೆ ಕಾರ್ಮಿಕರ ಜೊತೆ ಧರಣಿಯಲ್ಲಿ ಭಾಗ ವಹಿಸುತ್ತೇವೆ’ ಎಂದು ಬಿಜೆಪಿಯ ನಗರ ಸಭೆಯ ಸದಸ್ಯ ವಸಂತ ಸುರಪುಕರ್ ಎಚ್ಚರಿಕೆ ನೀಡಿದ್ದಾರೆ.
 
‘ಈಗಾಗಲೇ ನಗರದಲ್ಲಿ ವ್ಯಾಪಕ ವಾಗಿ ಕಾಣಿಸಿಕೊಂಡಿರುವ ಡೆಂಗಿ ಜ್ವರದ ಸೋಂಕು ಆತಂಕವನ್ನುಂಟು ಮಾಡಿದೆ. ಪೌರಕಾರ್ಮಿಕರು ಕೆಲಸದಿಂದ ದೂರ ಉಳಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಹಿರಿಯ ಅಧಿಕಾರಿ ಗಳು ಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
 
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ನಿಂಗಪ್ಪ ಯಕ್ಷಿಂತಿ, ಧರ್ಮ ರಾಜ, ಕೃಷ್ಣಾ, ಭೀಮರಾಯ, ಯಲ್ಲಮ್ಮ, ಸಿದ್ದಮ್ಮ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.