ADVERTISEMENT

‘ಪರಮೇಶ್ವರ್‌ ಬೇಜವಾಬ್ದಾರಿ ಗೃಹ ಸಚಿವ’

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:13 IST
Last Updated 5 ಜನವರಿ 2017, 9:13 IST

ಯಾದಗಿರಿ: ‘ರಾಜ್ಯದಲ್ಲಿ ಮಹಿಳೆಯರು ನಿರ್ಭೀತಿಯಿಂದ ತಿರುಗಾಡುವಂತಹ ವಾತಾವರಣ ಇಲ್ಲವಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಟೀಕಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬೆಂಗಳೂರಿನಲ್ಲಿ ಜ.31ರಂದು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಿಡಿಗೇಡಿಗಳು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಅದೆಲ್ಲ ಸಹಜ ಘಟನೆಗಳು ಎಂಬಂತೆ ಮಾತನಾಡಿದ್ದಾರೆ.

ರಾಜ್ಯದಲ್ಲಿ ಪೋಲಿ, ಪುಂಡರ ಹಾವಳಿ ಹೆಚ್ಚುತ್ತಿರುವುದಕ್ಕೆ ಘಟನೆ ಸಾಕ್ಷಿಯಾಗಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಸಚಿವರು ಬೇಜವಾಬ್ದಾರಿಯಿಂದ ಮಾತನಾಡುವ ಮೂಲಕ ತಾವೊಬ್ಬ ಬೇಜವಾಬ್ದಾರಿ ಗೃಹ ಸಚಿವ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ಎಂದು ಅವರು ಹೇಳಿದರು.

‘ಮಹಿಳೆಯರು ಮುಕ್ತವಾಗಿ ಓಡಾಡಬೇಕಾದರೆ ಕಾನೂನು ವ್ಯವಸ್ಥೆ ಬಿಗಿಗೊಳ್ಳಬೇಕು. ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ, ತಪ್ಪಿದ್ದರೆ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಬೇಕು. ಅದನ್ನು ಬಿಟ್ಟು ಹಗುರವಾಗಿ ಮಾತನಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ ಅವರು, ‘ಗೃಹ ಸಚಿವರು ಇಡೀ ಪ್ರಕರಣದ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.