ADVERTISEMENT

‘ಪೋಡಿ ಮುಕ್ತ ಗ್ರಾಮ: ರೈತರಿಗೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 14 ಮೇ 2017, 8:16 IST
Last Updated 14 ಮೇ 2017, 8:16 IST

ಹುಣಸಗಿ: ‘ಪಹಣಿಯಲ್ಲಿನ ದೋಷ ಗಳನ್ನು ಸರಿಪಡಿಸಿಕೊಳ್ಳಲು ರೈತರು ಸಾಕಷ್ಟು ಬಾರಿ ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಇದನ್ನು ತಪ್ಪಿಸಲು ಸರ್ಕಾರ ಪೋಡಿ ಮುಕ್ತ ಗ್ರಾಮ ಯೋಜನೆ ಜಾರಿಗೆ ತಂದಿದೆ’ ಎಂದು ಹುಣಸಗಿ ವಿಶೇಷ ತಹಶೀಲ್ದಾರ್ ಸುರೇಶ ಚವಲ್ಕರ್ ಹೇಳಿದರು.

ಹುಣಸಗಿ ಸಮೀಪದ ವಜ್ಜಲ ಗ್ರಾಮ ದಲ್ಲಿ ಗುರುವಾರ ಕಂದಾಯ ಇಲಾಖೆಯ ವತಿಯಿಂದ ಹಮ್ಮಿ ಕೊಂಡಿದ್ದ ಪೋಡಿ ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಒಂದೇ ಸರ್ವೆ ನಂಬರ್ ಅಡಿಯಲ್ಲಿ ಬರುವ ಹಲವಾರು ಹೆಸರಿನ ರೈತರು ತಮ್ಮ ಹೆಸರಿನಲ್ಲಿ ಪ್ರತ್ಯೇಕ ಪಹಣಿ ಪಡೆದುಕೊಳ್ಳುವ ಯೋಜನೆ ಇದಾಗಿದೆ ಎಂದು ಹೇಳಿದರು.

ಸರ್ವೆ ನಂಬರ್ ಮತ್ತು ಪಹಣಿಯಲ್ಲಿನ ಆಕಾರ ಬಂದ್ ಹೊಂದಾಣಿಕೆಯಾದಲ್ಲಿ ಈ ಯೋಜನೆ ಯಡಿ ಪ್ರತ್ಯೇಕ ಪಹಣಿ ಪಡೆದುಕೊಳ್ಳ ಬಹುದಾಗಿ ಎಂದು ತಿಳಿಸಿದರು. ಭೂ ದಾಖಲೆ ಇಲಾಖೆಯ ಸಹಾಯಕ ನಿರ್ದೇಶಕ ಸುಧಾಕರ ಕಟ್ಟಿಮನಿ ಮಾತನಾಡಿ, ‘ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾಕಷ್ಟು ಸುಧಾರಣ ಕ್ರಮ ಕೈಗೊಂಡಿದೆ.  

ADVERTISEMENT

ಈ ಮೊದಲು ಕಂದಾಯ ಅದಾಲತ್ ಯೋಜನೆ ಜಾರಿ ಮಾಡಿ ಸಾಕಷ್ಟು ರೈತರು  ಪಾಲ್ಗೊಂಡು ತಮ್ಮ ಸಮಸ್ಯೆ ಪರಿಹರಿಸಿಕೊಂಡಿದ್ದರು.  ಸದ್ಯ ಪೋಡಿ ಮುಕ್ತ ಗ್ರಾಮವು  ರೈತರಿಗೆ ಸಹಕಾರಿಯಾಗಿದೆ. ರೈತರು ಮೊದಲು ಪೋಡಿ ಮಾಡಿಕೊಳ್ಳಬೇಕಾದರೆ ಸಾಕಷ್ಟು ಹಣ ಖರ್ಚಾಗುತ್ತಿತ್ತು.  ಸದ್ಯ ಯಾವುದೇ ಶುಲ್ಕವಿಲ್ಲದೇ ಪೋಡಿ ಮಾಡಿಕೊಳ್ಳಬಹುದಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರಗೌಡ ಪಾಟೀಲ ವಜ್ಜಲ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಾರಾಚಂದ್ ವಜ್ಜಲ ತಾಂಡಾ, ಮುಖಂಡ ಸಂಗನಗೌಡ ಪಾಟೀಲ, ಭೂ ನ್ಯಾಯ ಮಂಡಳಿ ಸದಸ್ಯ ಸಂಗನಗೌಡ ಪೊಲೀಸ್ ಪಾಟೀಲ,  ಈಶ್ವರಪ್ಪ ಶ್ರೀಗಿರಿ, ಚಂದ್ರಶೇಖರ ಪಟ್ಟಣಶೆಟ್ಟಿ, ಕರೆಪ್ಪ ದೊಡ್ಡಮನಿ ಇದ್ದರು. ಕಂದಾಯ ನಿರೀಕ್ಷಕ ಶ್ರೀಶೈಲ ಸ್ವಾಗತಿಸಿದರು.  ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಬಿರಾದಾರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.