ADVERTISEMENT

ಪ್ರತ್ಯೇಕ ವಿವಿ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 6:28 IST
Last Updated 11 ಜನವರಿ 2017, 6:28 IST

ಯಾದಗಿರಿ: ಜಿಲ್ಲೆಯಲ್ಲಿ ಪ್ರತ್ಯೇಕ ನೂತನ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಆಗ್ರಹಿಸಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಂಗಳವಾರ ಕರವೇ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕರವೇ ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎನ್. ಭೀಮುನಾಯಕ್ ಮಾತ ನಾಡಿ,‘ಯಾದಗಿರಿ ಜಿಲ್ಲೆಯಾಗಿ 7 ವರ್ಷ ಕಳೆದರೂ ಜಿಲ್ಲೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸುಗಳಿಗೆ ಸಂಬಂಧಿಸಿದಂತೆ ಒಂದಾದರೂ ಕಾಲೇಜು ರಾಜ್ಯ ಸರ್ಕಾರ ಸ್ಥಾಪನೆ ಮಾಡಿಲ್ಲ. ಇದರಿಂದ ಯಾದಗಿರಿಜಿಲ್ಲೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿಯಿಂದ ಹೊರಬರುತ್ತಿಲ್ಲ. ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಮತ್ತು ಅಧಿಕಾರಿ ವರ್ಗ ಶ್ರಮಿಸುವ ಅಗತ್ಯವಿದೆ’ ಎಂದರು.

ಗುಲ್ಬರ್ಗಾ ವಿಶ್ವವಿದ್ಯಾಲಯವನ್ನು ಸುಗಮ ಆಡಳಿತದ ದೃಷ್ಟಿಯಿಂದ ಬೇರ್ಪಡಿಸಿ ರಾಯಚೂರು ಇಲ್ಲವೇ ಯಾದಗಿರಿಯಲ್ಲಿ ಹೊಸ ವಿವಿ ಸ್ಥಾಪಿಸಬೇಕು. ವಿವಿ ಸ್ಥಾಪನೆಗೆ ಜಿಲ್ಲೆಯಲ್ಲಿ ಕಂದಾಯ ಭೂಮಿ ಬೇಕಾದಷ್ಟಿದೆ’ ಎಂದರು.

‘ರಾಯಚೂರಿನಲ್ಲಿ ಈಗಾಗಲೇ ಕೃಷಿ ವಿಶ್ವವಿದ್ಯಾಲಯವಿದ್ದು, ಯಾದಗಿರಿಯಲ್ಲಿ ಹೊಸ ವಿವಿ ಸ್ಥಾಪನೆ ಮಾಡಿದ್ದಲ್ಲಿ, ಜಿಲ್ಲಾಭಿವೃದ್ಧಿ ಜತೆಗೆ ಶೈಕ್ಷಣಿಕವಾಗಿಯೂ ಮುಂದೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು’ಎಂದು ಒತ್ತಾಯಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದಿಂದ ಆರಂಭಗೊಂಡ ಪ್ರತಿಭಟನಾ ರ್‍್ಯಾಲಿ, ಸರ್ಕಾರಿ ಪದವಿ ಕಾಲೇಜು ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಭೀಮಾಶಂಕರ ಹತ್ತಿಕುಣಿ, ಮಲ್ಲು ಮಾಳಿಕೇರಿ, ಚೌಡಯ್ಯ ಬಾವೂರ, ರಾಜು ಚೌವ್ಹಾಣ, ಸಿದ್ದುನಾಯಕ ಹತ್ತಿಕುಣಿ, ಅಬ್ದುಲ್ ಚಿಗನೂರು, ಹಣಮಂತ ಖಾನಳ್ಳಿ, ಹಣಮಂತ ಅಚ್ಚೋಲಾ, ಭೀಮಣ್ಣ ಶಾಖಾಪೂರ, ಅರ್ಜುನ ಪವಾರ್, ದಿಲೀಪ್‌ಕುಮಾರ್ ಸೈದಾಪುರ, ವಿಶ್ವರಾಧ್ಯ ದಿಮ್ಮೆ, ಸಿದ್ದಪ್ಪ ಕ್ಯಾಸಪ್ಪನಹಳ್ಳಿ, ಶಿವಕುಮಾರ್ ಕೊಂಕಲ್, ನಾಗಪ್ಪ ಗೋಪಾಳಪೂರ, ಭೀಮು ಬಸವಂತಪೂರ, ಯಮನಯ್ಯ ಗುತ್ತೇದಾರ, ನಿಂಗಪ್ಪ ಗುಡಿಗುಡಿ, ಮಲ್ಲು ದೇವಕರ್, ರಾಜು ಬಳಮಕರ್, ಸಾಹೇಬಗೌಡ ನಾಯಕ್, ಬಸು ಸೈದಾಪೂರ, ವೆಂಕಟರಾಮುಲು, ಸಾಬು ಹೊರುಂಚಾ, ಸಿದ್ದು ಸಾಹುಕಾರ ಠಾಣಾಗುಂದಿ, ಸೈದಪ್ಪ ಬಾಂಬೆ, ರಾಜು ಗೌಡಗೇರಾ, ಭೀಮರಾಯ ಕಟ್ಟಿಮನಿ, ವೆಂಕಟೇಶ್ ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.