ADVERTISEMENT

ಬಸವಸಾಗರ: ಕುಡಿಯುವ ನೀರು ಮಾತ್ರ ಉಳಿಕೆ

5 ಲಕ್ಷ ಎಕರೆಗೆ ನೀರು ಒದಗಿಸುವ ಜಲಾಶಯ ಬರಿದು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:20 IST
Last Updated 22 ಮಾರ್ಚ್ 2017, 9:20 IST
ಹುಣಸಗಿ ಸಮೀಪದ ನಾರಾಯಣಪುರದ ಬಸವಸಾಗರಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.
ಹುಣಸಗಿ ಸಮೀಪದ ನಾರಾಯಣಪುರದ ಬಸವಸಾಗರಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.   

ಹುಣಸಗಿ: ₹5 ಲಕ್ಷ ಎಕರೆಗೆ ನೀರು ಒದಗಿಸುವ ರಾಜ್ಯದ ಪ್ರತಿಷ್ಠಿತ ಜಲಾಶಯಗಳಲ್ಲಿ ಒಂದಾಗಿರುವ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯ ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಜಲಾನಯನ ಪ್ರದೇಶವಾಗಿರುವ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಯಾಗಿದೆ. 

ಈ ಭಾಗದ ರೈತರ ಜೀವನ ಮಟ್ಟವನ್ನೇ ಬದಲಾಯಿಸಿ, ಎಲ್ಲ ರೈತರ ಜೀವನ ಸುಧಾರಿಸುವಂತೆ ಮಾಡಿದೆ. ಆದರೆ, ಹಿಂಗಾರು ಹಂಗಾಮಿಗೆ ನೀರು ಒದಗಿಸಿದ್ದು, ನಾರಾಯಣಪುರದ ಬಸವಸಾಗರ ಮತ್ತು ಆಲಮಟ್ಟಿಯ ಲಾಲ್‌ ಬಹದ್ದೂರ ಶಾಸ್ತ್ರಿ ಜಲಾಶಯದಲ್ಲಿ ನೀರಿನ ಮಟ್ಟ ಬಹಳವಾಗಿ ಕ್ಷೀಣಿಸಿದೆ.  
ಜಲಾಶಯದಲ್ಲಿ ಕೇವಲ 0.805 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಲಭ್ಯವಿದೆ ಎಂದು ಜಲಾಶಯದ ಮೂಲಗಳಿಂದ ತಿಳಿದು ಬಂದಿದೆ.

ಇದರ ಪರಿಣಾಮವಾಗಿ ಕೃಷ್ಣಾನದಿ ಪಾತ್ರ ಬತ್ತುವ ಆತಂಕ ಹಳ್ಳಿಯ ಜನತೆಗೆ ಕಾಡುತ್ತಿದೆ. ಪ್ರತಿವರ್ಷವೂ ಎಡದಂಡೆ ಮುಖ್ಯ ಕಾಲುವೆಯ ಮುಖಾಂತರ ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ರಾಯಚೂರ ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ವಿಜಯಪುರ ಜಿಲ್ಲೆಯ ಇಂಡಿ ಸೇರಿದಂತೆ ಕೆಲ ಭಾಗಗಳಿಗೆ ನೀರಾವರಿ ಕಲ್ಪಿಸಲಾಗಿದೆ.

ಇದರಿಂದಾಗಿ ಆ ಭಾಗದಲ್ಲಿ ಅಂತರ್ಜಲಮಟ್ಟ ಸುಧಾರಿಸಿ ನೀರಿನ ಕುಡಿಯುವ ನೀರಿನ ಸಮಸ್ಯೆ ಇರುತ್ತಿರಲಿಲ್ಲ.
ಅದರೆ ಏಪ್ರೀಲ್‌, ಮೇ ತಿಂಗಳಲ್ಲಿ ಮತ್ತೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. 

ಬಸವಸಾಗರ ಜಲಾಶಯ ನೀರಿನ ಮಟ್ಟ: ಮಂಗಳವಾರ ನಾರಾಯಣಪುರ ಬಸವಸಾಗರ ನೀರಿನ ಮಟ್ಟ 487.400 ಮೀ ಇದ್ದು, ಒಟ್ಟು (ಡೆಡ್‌ಸ್ಟೋರೇಜ್‌ ಸೇರಿ)15.565 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಆದರೆ, ಕಳೆದ ವರ್ಷ ಇದೇ ದಿನದಂದು 487.160 ಇದ್ದು, 14.916 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಆದರೆ, ಇನ್ನೂ ಮಾರ್ಚ್ 30ರ ವರೆಗೆ ಕಾಲುವೆಗೆ ನೀರು ಹರಿಸಬೇಕಾಗಿರುವುದು ಸವಾಲಾಗಿದ್ದು, ಯಾವ ಕ್ರಮ ಅನುಸರಿಸಬೇಕು ಎಂಬ ಯೋಚನೆಯಲ್ಲಿ ಅಧಿಕಾರಿಗಳಿದ್ದಾರೆ.

ಹಿಂಗಾರು ಹಂಗಾಮಿಗೆ ನೀರು ಹರಿಸಿದ್ದರಿಂದ ಎಲ್ಲೆಡೆ ಬತ್ತದ ನಾಟಿ ಮಾಡಲಾಗಿದ್ದು, ನೀರಿನ ಚಿಂತೆಯಲ್ಲಿ ರೈತರು ಮುಳುಗಿದ್ದಾರೆ. ಇನ್ನೂ ಕೆಲ ರೈತರು ಎರಡು ಕಿ.ಮೀ ವರೆಗೆ ಹಳ್ಳಗಳಿಗೆ, ನೀರು ಸಂಗ್ರಹವಿರುವ ಕ್ವಾರಿಗಳಿಗೆ ಪಂಪ್‌ಸೆಟ್‌ ಅಳವಡಿಸಿ ತಾತ್ಕಾಲಿಕ ಪೈಪ್‌ಗಳ ಮೂಲಕ ಬೆಳೆಗೆ ನೀರು ಒದಗಿಸುವಲ್ಲಿ ಮುಂದಾಗಿದ್ದಾರೆ.

ಈ ಸಲದ ವಾರಾಬಂದಿಯಿಂದ ಬೆಳೆ ಸಂಪೂರ್ಣ ಒಣಗುವ ಹಂತದಲ್ಲಿದೆ. ಆದ್ದರಿಂದ 50 ಸಾವಿರ ಖರ್ಚುಮಾಡಿ ತಾತ್ಕಾಲಿಕ ಪೈಪ್‌ ಅಳವಡಿಸಿಕೊಂಡು ಹಳ್ಳದಿಂದ ನೀರು ಪಡೆಯುತ್ತಿರುವುದಾಗಿ ದ್ಯಾಮನಹಾಳ ಗ್ರಾಮದ ಲಕ್ಷ್ಮಿಕಾಂತ ಕುಲಕರ್ಣಿ ಹಾಗೂ ಗೆದ್ದಲಮರಿ ಗ್ರಾಮದ ರೈತ ಬಸವರಾಜ ತಿಳಿಸಿದರು.
ವಜ್ಜಲ, ಬಲಶೆಟ್ಟಿಹಾಳ, ಹುಣಸಗಿ ಸೇರಿದಂತೆ ಇತರ ಭಾಗಗಳ ರೈತರು ಈ ಕ್ರಮ ಅನುಸರಿಸುತ್ತಿದ್ದಾರೆ.

*
ವಾರಾಬಂದಿಯಿಂದ ಬೆಳೆ  ಒಣಗುವ ಹಂತದಲ್ಲಿದೆ. ಆದ್ದರಿಂದ ₹ 50 ಸಾವಿರ ಖರ್ಚುಮಾಡಿ ತಾತ್ಕಾಲಿಕ ಪೈಪ್‌ ಅಳವಡಿಸಿಕೊಂಡು ಹಳ್ಳದಿಂದ ನೀರು ಪಡೆಯುತ್ತಿದ್ದೇನೆ.
-ಲಕ್ಷ್ಮಿಕಾಂತ ಕುಲಕರ್ಣಿ,
ದ್ಯಾಮನಹಾಳ ಗ್ರಾಮದ  ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT