ADVERTISEMENT

ಬಹುಮುಖ ಪ್ರತಿಭೆಗಳ ರಸ್ತಾಪುರ ಪ್ರೌಢಶಾಲೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 10:34 IST
Last Updated 30 ಜುಲೈ 2014, 10:34 IST

ಶಹಾಪುರ: ತಾಲ್ಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯತ್ತ ಹೆಚ್ಚಿನ ವಿದ್ಯಾರ್ಥಿಗಳು ದಾಪುಗಾಲು ಹಾಕುತ್ತಿದ್ದಾರೆ.

2007ರಲ್ಲಿ ಪ್ರಾರಂಭವಾದ ಈ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಗ್ರಾಮದ ಮುಖಂಡ ಸಂಗರಡ್ಡಿ ಹಂಗರಗಿ 1ಎಕರೆ 4 ಗುಂಟೆ ಜಮೀನು ದಾನ ನೀಡಿದರು. ಇದರ ಫಲವಾಗಿ ಗ್ರಾಮದ ಹೊರವಲಯದಲ್ಲಿ ಸುಸಜ್ಜಿತ 8 ಕೊಠಡಿಯ ಕಟ್ಟಡ ಹೊಂದಿದೆ. 178 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಶಾಲೆ ತೊರೆದ ಮಕ್ಕಳನ್ನು ಕರೆ ತರಲು ‘ಮಗುವಿನ ಮನೆ ಭೇಟಿ’ ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಿದ್ದು, ಈ ಶಾಲೆಯ ವಿಶೇಷ. ಪ್ರತಿ ಶನಿವಾರ ಶಾಲೆ ಬಿಟ್ಟ ಮಗುವಿನ ಮನೆಗೆ ಭೇಟಿ ನೀಡಿ ಮಗುವಿನ ಹಾಗೂ ಪಾಲಕರ ಮನವೊಲಿಸಲಾಗುತ್ತದೆ. ಶೇ 100 ಹಾಜರಾತಿಗೆ ಶಾಲಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಶಾಲೆಗೆ ಪ್ರತ್ಯೇಕ ಪ್ರಯೋಗಾಲಯವಿದೆ. ವಿದ್ಯಾರ್ಥಿಗಳು ವಿಜ್ಞಾನ ಮತ್ತು ಪ್ರದರ್ಶನ ಮೇಳ ಆಯೋಜಿಸಿ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳುತ್ತಿದ್ದಾರೆ. 2012ರಲ್ಲಿ ‘ಇನ್ಸ್‌ಫೈಯರ್‌’ ಪ್ರಶಸ್ತಿಯ ಕೃಷಿ ವಿಭಾಗದಲ್ಲಿ ಮೊಬೈಲ್ ಮೂಲಕ  ನೀರೆತ್ತುವ ಪಂಪ್‌ನ ವಿಜ್ಞಾನ ಮಾದರಿ ರೂಪಿಸಿದ ಶ್ರೀಶೈಲ ಹಾಗೂ ಶರಣಯ್ಯ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದೆ.

ಕ್ರೀಡಾ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಸುಮಂಗಲಾ ಮತ್ತು ಭಾರತಿ ಕಳೆದ ವರ್ಷ ಜಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಗ್ರಾಮೀಣ ಕ್ರೀಡಾಕೂಟದ ಕೊಕ್ಕೊ ವಿಭಾಗದಲ್ಲಿ ಭಾಗವಹಿಸಿದ್ದರು. ಚದುರಂಗದಲ್ಲಿ ವಿದ್ಯಾರ್ಥಿ ಬಸಯ್ಯ ಉತ್ತಮ ಸಾಧನೆ ತೋರಿದ್ದಾರೆ.

ಮಕ್ಕಳ ಶೈಕ್ಷಣಿಕ ವೃದ್ಧಿಗಾಗಿ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ರಸಪ್ರಶ್ನೆ, ಪ್ರಬಂಧ, ಭಾಷಣ, ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೇರಣೆ ನೀಡಲಾಗುತ್ತಿದೆ. ಗ್ರಾಹಕರ ಕ್ಲಬ್‌ ಯೋಜನೆ ಅಡಿ ಜಾಥಾ ಆಯೋಜಿಸಿ ಜನಜಾಗೃತಿ ಮೂಡಿಸಲಾಗುತ್ತಿದೆ.

ವಿದ್ಯಾರ್ಥಿಗಳು ಪ್ರತಿದಿನ ರಾಜ್ಯಮಟ್ಟದ ಎರಡು ಪತ್ರಿಕೆಗಳ ವರದಿಗಳನ್ನು ಮುಂಜಾನೆಯ ಪ್ರಾರ್ಥನೆಯಲ್ಲಿ ವಾಚಿಸುತ್ತಾರೆ. ಅಂದಿನ ಸುದ್ದಿಯ ಪ್ರಮುಖ ಅಂಶಗಳ ಮಾಹಿತಿ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ‘ಪ್ರಜಾವಾಣಿ’ಯ ‘ವಿಜ್ಞಾನ ವಿಶೇಷ’ ಅಂಕಣವನ್ನು ಶಾಲೆಯಲ್ಲಿ ಸಂಗ್ರಹಿಸಿ ಇಡಲಾಗಿದೆ.

ಕೆಲ ಸಮಸ್ಯೆಗಳು ಇಲ್ಲಿವೆ. ಶಾಲೆಗೆ ಎರಡು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲ. ಇದು ಕಂಪ್ಯೂಟರ್ ಕಲಿಕೆಯಿಂದ ವಂಚಿತ ಮಾಡಿದೆ. ಕಟ್ಟಡದ ಸುತ್ತ ಕಾಂಪೌಂಡ ಅಗತ್ಯವಿದೆ. ಕ್ರೀಡಾ ಮೈದಾನ ಅವಶ್ಯ. ವಿದ್ಯಾರ್ಥಿನಿಯರಿಗೆ ಮಾತ್ರ ಶೌಚಾಲಯ ಇದೆ. ವಿದ್ಯಾರ್ಥಿಗಳು ಬಯಲು ಆಶ್ರಯಿಸಿದ್ದಾರೆ. ಈ ಕೊರತೆ ನೀಗಿಸಿದೆ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಎನ್ನುವುದು ಪಾಲಕರ ಅನಿಸಿಕೆ.

ಶೈಕ್ಷಣಿಕ ಅಂಗಳ

ಶಿಕ್ಷಕರಲ್ಲಿ ಹೆಚ್ಚಿನ ಕಾಳಜಿ
ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕಾಳಜಿ ಮತ್ತು ನಿಗಾವಹಿಸಿ ಪಾಠ ಮಾಡುತ್ತಾರೆ. ಅಗತ್ಯ ಸೌಲಭ್ಯಗಳಾದ ಆಟದ ಮೈದಾನ, ವಿದ್ಯುತ್ ಸಂಪರ್ಕ ನೀಡಬೇಕು.
– ಟಿ.ಶಶಿಧರ, ಗ್ರಾಮದ ಮುಖಂಡ

ಗುಣಮಟ್ಟದ ಶಿಕ್ಷಣ
ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಓದಿನ ಆಸಕ್ತಿ ಹೆಚ್ಚಿಸುತ್ತಿದೆ. ಶಾಲೆಯ ಸಿಬ್ಬಂದಿ ಪ್ರತಿ ವಿದ್ಯಾರ್ಥಿಯ ಹೆಸರು ನೆನಪಿಡುತ್ತಾರೆ. ಈ ಮೂಲಕ ಮಕ್ಕಳ ಪ್ರಗತಿಗೆ ಕಾಳಜಿ ವ್ಯಕ್ತಪಡಿಸುತ್ತಾರೆ.
–ತಿಪ್ಪರಡ್ಡಿ, ಪಾಲಕರು

ಗ್ರಾಮಸ್ಥರಿಂದ ಉತ್ತಮ ಸಹಕಾರ
ಶಾಲೆಯ ಸಿಬ್ಬಂದಿಗೆ ಗ್ರಾಮಸ್ಥರು ಉತ್ತಮ ಸಹಕಾರ ನೀಡುತ್ತಿದ್ದು  ಯಾವುದೇ ತೊಂದರೆ ಇಲ್ಲ. ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಿ  ಶಾಲೆಗೆ ಬಂದು ವಿಚಾರಿಸುತ್ತಾರೆ.
– ವೆಂಕೋಬ ಪಾಟೀಲ್,ಮುಖ್ಯಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT