ADVERTISEMENT

ಬಾರದ ಮಳೆ: ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 6:23 IST
Last Updated 19 ಜುಲೈ 2017, 6:23 IST

ಶಹಾಪುರ: ‘ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ (ಜು.17ರ ವರೆಗೆ) ಕೇವಲ 10.ಮೀ.ಮೀ ಮಳೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ತಾಲ್ಲೂಕಿನಲ್ಲಿ ಕೇವಲ ಶೇ 30ರಂದು ಮಾತ್ರ ಬಿತ್ತನೆಯಾಗಿದೆ. ತೇವಾಂಶದ ಕೊರತೆಯಿಂದ ಬಿತ್ತನೆಯ ಕಾರ್ಯ ತಾತ್ಕಾಲಿವಾಗಿ ಸ್ಥಗಿತವಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಅಧಿಕಾರಿ ಡಾ.ದಾನಪ್ಪ ಕತ್ನಳ್ಳಿ ತಿಳಿಸಿದ್ದಾರೆ.

‘ವಾಡಿಕೆಯಂತೆ ಜೂನ್‌ನಲ್ಲಿ 123 ಮಿ.ಮೀ ಮಳೆಯಾಗಬೇಕಾಗಿತ್ತು. ಕೇವಲ 98 ಮಿ.ಮಳೆಯಾಗಿದೆ. ಅದರಂತೆ ಜುಲೈನಲ್ಲಿ 167 ಮಿ.ಮೀ ಮಳೆಯಾಗಬೇಕು. ಜು.17ವರೆಗೆ ಕೇವಲ 10 ಮಿ.ಮೀ ಮಳೆಯಾಗಿದೆ. ಉತ್ತಮ ಮಳೆಯಾದರೆ ಹತ್ತಿ, ತೊಗರಿ ಬಿತ್ತೆನೆಗೆ ಅವಕಾಶವಿದೆ. ಈಗಾಗಲೇ ಬಿತ್ತನೆ ಮಾಡಿದ್ದ ಹೆಸರು ಬೆಳೆ ತೇವಾಂಶದ ಕೊರತೆಯಿಂದ ಬಾಡುತ್ತಿವೆ’ ಎಂದರು. ‘ಮೋಡ ಕವಿದ ವಾತಾವರಣವಿರುತ್ತದೆ. ಆದರೂ ಮಳೆಯಾಗುತ್ತಿಲ್ಲ, ಬರದ ಛಾಯೆ  ಆವರಿಸಿದೆ’ ಎಂದು ರೈತ ಶಿವಪ್ಪ ಹೇಳಿದರು.

ಕಾಲುವೆಗೆ ನೀರು ಬಿಡಿ:
ಕಾಲುವೆಗೆ ನೀರು ಹರಿಸಲು ಜು.21ರಂದು ಆಲಮಟ್ಟಿಯಲ್ಲಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ. “ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ.

ADVERTISEMENT

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕಾಲುವೆ ನೀರು ಉಸಿರಾಗಿದೆ. ತಕ್ಷಣವೇ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸಬೇಕು. ಮುಂಚಿತವಾಗಿ ನೀರು ಹರಿಸಿದರೆ  ಹತ್ತಿ, ತೊಗರಿ, ಬೆಳೆಯನ್ನು ಬಿತ್ತನೆ ಮಾಡಲು ಅನುಕೂಲವಾಗುತ್ತದೆ’ ಎಂದು ರೈತ ಮುಖಂಡ ಮಲ್ಲಣ್ಣ ಪರಿವಾಣ ಗೋಗಿ ಮನವಿ ಮಾಡಿದ್ದಾರೆ.

ಈಗಾಗಲೇ ಜುಲೈ ತಿಂಗಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮೇವಿನ ಬರವು ಕಾಣಿಸಿಕೊಂಡಿದೆ. ರೈತರು ಆತಂಕದಿಂದ ಕಾಲ ಕಳೆಯುವಂತೆ ಆಗಿದೆ ಎಂದು ಮಲ್ಲಣ್ಣ ತಿಳಿಸಿದರು.

ಪ್ರಾರ್ಥನೆ: ಮಳೆಗಾಗಿ ಪ್ರಾರ್ಥಿಸಿ ಇಲ್ಲಿನ ವಾರ್ಡ್ ನಂ–2ರ ದೇವಿನಗರ ಬಡಾವಣೆಯ ಮಹಿಳೆಯರು ಹಲವು ದಿನಗಳಿಂದ  ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಮಂಗಳವಾರ ಮರೆಮ್ಮ ದೇವಿಗೆ ಪೂಜೆ ಸಲ್ಲಿಸಿ, ಬಡಾವಣೆಯಲ್ಲಿ ಮೆರವಣಿಗೆ ನಡೆಸಿದರು.

* * 

ಜುಲೈ ತಿಂಗಳಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಮುಂಗಾರು ಬೆಳೆ ಬಿತ್ತನೆಗೆ ಸಾಕಷ್ಟು ಸಮಯವಿದೆ. ಮಳೆ ಬರುವ ನಿರೀಕ್ಷೆ ಇದ್ದು, ರೈತರು ಭಯಪಡಬೇಕಿಲ್ಲ
ಡಾ.ದಾನಪ್ಪ ಕತ್ನಳ್ಳಿ
ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.