ADVERTISEMENT

ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಕರೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 6:25 IST
Last Updated 19 ಜುಲೈ 2017, 6:25 IST

ಹುಣಸಗಿ: ‘ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ  ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು’ ಎಂದು ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ನರಸಿಂಹನಾಯಕ(ರಾಜುಗೌಡ) ಹೇಳಿದರು. ಸಮೀಪದ  ಕೊಡೇಕಲ್ಲ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೊಡೇಕಲ್ಲ ಹಾಗೂ ರಾಜನಕೋಳೂರ  ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಈಗಾಗಲೇ ರಾಜ್ಯದಾದ್ಯಂತ ವಿಸ್ತಾರಕ ಸಭೆಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಎಲ್ಲರಿಗೂ ತಿಳಿಸುವ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಸುರಪುರ ಮತಕ್ಷೇತ್ರದಲ್ಲಿಯೂ ಕಾರ್ಯಕರ್ತರು  ಅತಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ.  ಪ್ರತಿ ಗ್ರಾಮಗಳಲ್ಲಿಯೂ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವುದು ರಾಜ್ಯ ನಾಯಕರಿಗೆ ತೃಪ್ತಿ ತಂದಿದೆ’ ಎಂದರು.

‘ಪ್ರಧಾನಿ ಮೋದಿ ಅವರ ಜನಪರ ಆಡಳಿತ, ಜನಧನ, ಫಸಲ್ ಬಿಮಾ, ಸೇರಿದಂತೆ ಇತರ ಯೋಜನೆಗಳ ಮಹತ್ವ ಈಗಾಗಲೇ ಜನರಿಗೆ ತಿಳಿದಿದೆ. ಅಂತರರಾಷ್ಟ್ರೀಯ ಸಂಬಂಧಗಳು ಗಟ್ಟಿಗೊಳ್ಳುತ್ತಿದ್ದು,  ಭಾರತದ ಶಕ್ತಿ ವಿಶ್ವಮಟ್ಟದಲ್ಲಿಯೇ ಗುರುತಿಸುವಂತಾಗಿದೆ’ ಎಂದರು. 

ADVERTISEMENT

‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು  ನೀಡುತ್ತಿದೆ.  ಶಾಸಕರು ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ’ ಎಂದು ಆರೋಪಿಸಿದರು.
ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ ಅಂಬ್ರಣ್ಣ ಹುಡೇದ, ಹನುಮಂತನಾಯಕ (ಬಬಲುಗೌಡ), ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ ಪಾಟೀಲ, ಡಾ. ಬಿ.ಬಿ.ಬಿರಾದಾರ, ಗೌಡಪ್ಪಗೌಡ ಪೊಲೀಸ್‌ ಪಾಟೀಲ,  ಬಾಲಾಜಿ ರಾಠೊಡ, ಪಕ್ಷದ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.