ADVERTISEMENT

ಮಹಿಳಾ ಸಬಲೀಕರಣದಿಂದ ಲಿಂಗ ಸಮಾನತೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:49 IST
Last Updated 22 ಮೇ 2017, 5:49 IST

ಸುರಪುರ: ‘ಸರ್ಕಾರ ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಲಿಂಗ ಅಸಮಾನತೆ ಮುಂದುವರಿದಿದೆ. ಮಹಿಳೆಯರ ಸಬಲೀಕರಣದಿಂದ ಮಾತ್ರ ಈ ತಾರತಮ್ಯ ನಿವಾರಣೆಯಾಗಲು ಸಾಧ್ಯ’ ಎಂದು ಕೆಂಭಾವಿ ಪುರಸಭೆ ಸದಸ್ಯ ಹಳ್ಳೆಪ್ಪಗೌಡ ಪೊಲೀಸ ಪಾಟೀಲ ಹೇಳಿದರು.

ತಾಲ್ಲೂಕಿನ ಪರಸನಹಳ್ಳಿ ಗ್ರಾಮದಲ್ಲಿ ವೃತ್ತಿ ಕೌಶಲ ತರಬೇತಿ ಯೋಜನೆ ಅಡಿಯಲ್ಲಿ ಮಹರಬ್ ಶಿಕ್ಷಣ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಟೇಲರಿಂಗ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ವೃತ್ತಿ ಕೌಶಲ ತರಬೇತಿ ಮಹತ್ವ ಪೂರ್ಣವಾಗಿದೆ. ಮಹಿಳೆಯರು ಶಿಬಿರದ ಲಾಭ ಪಡೆದು ಸ್ವಯಂ ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬಿಗಳಾಗಬೇಕು’ ಎಂದು ಕರೆ ನೀಡಿದರು.

ADVERTISEMENT

‘ಮಹಿಳೆ ನಾಲ್ಕು ಗೋಡೆಗಳ ನಡುವೆ ಸೀಮಿತ ಎಂಬ ಕಾಲ ಈಗಿಲ್ಲ. ಪ್ರತಿ ಕ್ಷೇತ್ರಗಳಲ್ಲಿಯೂ ಮಹಿಳೆ ಪುರುಷನಿಗೆ ಸಮಾನವಾಗಿ ದುಡಿಯುತ್ತಿದ್ದಾಳೆ. ಮಹಿಳೆ ಆರ್ಥಿಕವಾಗಿ ಸಧೃಢಳಾಗಬೇಕು. ಪುರುಷನ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಹ್ದಮ್ ಯಸೂಫ್ ವಲೀಬು ಮಾತನಾಡಿ, ‘ನಮ್ಮ ಸಂಸ್ಥೆ 12 ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿದೆ. ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿಯವರೆಗೆ 2 ಸಾವಿರ ಜನರಿಗೆ ಟೇಲರಿಂಗf ತರಬೇತಿ ನೀಡಿದೆ. ತರಬೇತಿ ಪಡೆದ ಅನೇಕ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಿದ್ದಾರೆ. ಕೆಲವರು ಗಾರ್ಮೆಂಟ್‌ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ಗ್ರಾಮದ ಮುಖಂಡ ರಾಯಣ್ಣ ದೊರೆ, ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಪೂಜಾರಿ ಮಾತನಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಕುಂಬಾರ ಸ್ವಾಗತಿಸಿದರು. ಸಾಕ್ಷರ ಭಾರತ ಸಂಚಾಲಕ ಎಸ್.ಬಿ. ಬಡಿಗೇರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.