ADVERTISEMENT

ಮಹಿಳೆಯರ ಹಕ್ಕು ಸಂರಕ್ಷಣೆಗೆ ಕಾನೂನು

ಕಾಲೇಜು ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2017, 5:53 IST
Last Updated 31 ಆಗಸ್ಟ್ 2017, 5:53 IST

ಶಹಾಪುರ: ‘ನಾವು ಯಾವಾಗಲೂ ಸಕರಾತ್ಮಕವಾಗಿ ಚಿಂತನೆ ನಡೆಸಬೇಕು. ಮಹಿಳೆಯರಿಗೆ ಕಾನೂನು ರಕ್ಷಾ ಕವಚವಿದೆ. ಅವರು ಕನಿಷ್ಠ ಕಾನೂನು ಜ್ಞಾನ ಪಡೆದು ಹಕ್ಕುಗಳನ್ನು ಪಡೆದುಕೊಳ್ಳಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ನಾಮದೇವ ಸಾಲಮಂಟಪಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಸಮ್ಯಾಕ್ ಸಂಘ ಮತ್ತು ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಹೆಚ್ಚು ಪ್ರಬುದ್ಧರಾಗಿರುತ್ತಾರೆ. ಅವರು ಗ್ರಾಮೀಣ ಪ್ರದೇಶದಲ್ಲಿ ಕಾನೂನು ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.ಜೆಎಂಎಫ್‌ ನ್ಯಾಯಾಲಯದ

ADVERTISEMENT

ನ್ಯಾಯಾಧೀಶೆ ತಯ್ಯಾಬ್ ಸುಲ್ತಾನಾ ಮಾತನಾಡಿ, ‘ಮಹಿಳೆಯರ ಹಕ್ಕು ಸಂರಕ್ಷಣೆಗಾಗಿ ಕಾನೂನು ಸದ್ಬಳಕೆ ಮಾಡಿಕೊಳ್ಳಬೇಕು ವಿನಃ ದುರ್ಬಳಕೆ ಮಾಡಿಕೊಳ್ಳಬಾರದು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ದೌರ್ಜನ್ಯವಾದರೆ ತಕ್ಷಣ ಪ್ರಾಚಾರ್ಯರಿಗೆ ದೂರು ನೀಡಬೇಕು. ಬಾಲ್ಯ ವಿವಾಹ ಎಂಬ ಅನಿಷ್ಠ ಪದ್ಧತಿಯು ನೆರಳಿನಂತೆ ಹಿಂಬಾಲಿಸುತ್ತಿದೆ. ಜಾಗೃತ ಮನಸ್ಸುಗಳು ಕಾನೂನು ಅರಿವು ಮೂಡಿಸಬೇಕು. ವಿದ್ಯಾರ್ಥಿನಿಯರು ತಮ್ಮ ಸುತ್ತಮುತ್ತ ನಡೆಯುವ ಇಂತಹ ಅನಿಷ್ಠ ಪದ್ಧತಿಯ ನಿರ್ಮೂಲನೆಗೆ ಹೋರಾಟ ನಡೆಸಬೇಕು. ಅಕ್ಷರಸ್ಥರಾದರೂ ಕಾನೂನು ಜ್ಞಾನ ಪಡೆಯದಿದ್ದರೆ ಅನಕ್ಷರಸ್ಥರಂತೆ ಉಳಿದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎ.ಸಾತ್ವಿಕ ಮಾತನಾಡಿ, ‘ನಮ್ಮ ಹಕ್ಕು ಪಡೆದುಕೊಳ್ಳಲು ಹೋರಾಟ ಮಾಡುತ್ತೇವೆ. ಆದರೆ, ಕರ್ತವ್ಯಗಳ ಬಗ್ಗೆ ನಿಷ್ಕಾಳಜಿಯಿದೆ. ಪರಿಸರ, ಕೆರೆ, ಹಳ್ಳ, ಕಾಪಾಡುವುದು ಸಾಮಾಜಿಕ ಕರ್ತವ್ಯವಾಗಿದೆ. ರಾಷ್ಟ್ರಧ್ವಜ, ದೇಶ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ’ ಎಂದರು.

ಕಾಲೇಜಿನ ಪ್ರಾಚಾರ್ಯ ವಿ.ಎಂ.ಹಿರೇಮಠ ಅದ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಆರ್.ಎಂ.ಹೊನ್ನಾರಡ್ಡಿ ಹಾಗೂ ಬಿ.ಎಂ.ರಾಂಪೂರೆ ‘ಮಹಿಳಾ ಕಾನೂನು’ ಬಗ್ಗೆ ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಅಮರೇಶ ದೇಸಾಯಿ, ಕಾರ್ಯದರ್ಶಿ ಹೇಮರಡ್ಡಿ ಕೊಂಗಂಡಿ, ಮಹಿಳಾ ಸಮಾಖ್ಯಾ ಜಿಲ್ಲಾ ಸಂಚಾಲಕಿ ಜ್ಯೋತಿ ಹಾಗೂ ವಕೀಲರಾದ ಎಸ್‌.ಎಂ.ಸಜ್ಜನ, ಶರಬಣ್ಣ ರಸ್ತಾಪುರ, ಶರಣಪ್ಪ ಪ್ಯಾಟಿ, ರಮೇಶ ಸೇಡಂಕರ್, ಉಮೇಶ ಮುಡಬೂಳ, ಶಿವಶರಣಪ್ಪ ಹೊತಪೇಟ ಇದ್ದರು.

**

ಮಹಿಳೆಯರು ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದ ಅನಿಷ್ಠ ಪದ್ಧತಿಯ ವಿರುದ್ಧ ವಿದ್ಯಾರ್ಥಿನಿಯರು ಕಾನೂನು ಅರಿವು ಮೂಡಿಸಬೇಕು.

-ತಯ್ಯಾಬ್ ಸುಲ್ತಾನಾ, ನ್ಯಾಯಾಧೀಶೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.