ADVERTISEMENT

ಮುಸ್ಲಿಮರ ಒಳಜಗಳ ಪಟ್ಟಭದ್ರರಿಗೆ ಲಾಭ

ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮೌಲಾನಾ ತೌಖೀರ್ ರಝಾಖಾನ್ ಕಳವಳ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 9:49 IST
Last Updated 2 ಜನವರಿ 2017, 9:49 IST

ಯಾದಗಿರಿ: ‘ಮುಸ್ಲಿಂ ಸಮುದಾಯದಲ್ಲಿ ದಿನೇದಿನೇ ಹುಟ್ಟಿಕೊಳ್ಳುತ್ತಿರುವ ಒಳಜಗಳ, ವೈಮನಸ್ಸು, ಕೀಳರಿಮೆಯಂತಹ ಗುಣಗಳಿಂದ ಮುಸ್ಲಿಂ ಸಮುದಾಯ ಕುಗ್ಗುತ್ತಿದ್ದರೆ ಪಟ್ಟಭದ್ರ ಹಿತಾಸಕ್ತಿಗಳು ಇದರ ಲಾಭ ಪಡೆದುಕೊಳ್ಳುತ್ತಿವೆ’ ಎಂದು ದೆಹಲಿಯ ಅಖಿಲ ಭಾರತ ಸಮುದಾಯ ಐಕ್ಯ ಸಮಿತಿ ಅಧ್ಯಕ್ಷ ಮೌಲಾನಾ ತೌಖೀರ್ ರಝಾಖಾನ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಮೊಘಲ್ ಸಭಾಂಗಣದಲ್ಲಿ ಭಾನುವಾರ ಮುಸ್ಲಿಂ ಸಮುದಾಯ ಸಂಪರ್ಕ ಸಮಿತಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಮುಸ್ಲಿಂ ಸಮುದಾಯದಲ್ಲಿ ಉದಾತ್ತ ಧ್ಯೇಯ ಮತ್ತು ಪರಸ್ಪರ ಸಂವಹನ ಕೊರತೆಯಿಂದಾಗಿ ಇಡೀ ಸಮುದಾಯಕ್ಕೆ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಇದರಿಂದ ಮುಸ್ಲಿಂ ಸಮುದಾಯ ಹೊರಬರಬೇಕಿದೆ’ ಎಂದರು.

‘ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಏಕೈಕ ದೇಶ ಭಾರತ. ಇಂತಹ ದೇಶದಲ್ಲಿ ಜನ್ಮ ತಳೆದಿರುವ ನಾವುಗಳು ಎಂದೂ ವೈಮನಸ್ಸಿಗೆ ಅವಕಾಶ ಕೊಡದೆ ಸಹಬಾಳ್ವೆ ನಡೆಸಿದಾಗ ಮಾತ್ರ ಮಾನವೀಯ ಮೌಲ್ಯಗಳಿಗೆ ಅರ್ಥ ಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಪರ್ಕ ಸಮಿತಿ ಊರುಗೋಲಿನಂತೆ ಸಮುದಾಯದ ಜತೆ ಕಾರ್ಯನಿರ್ವಹಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಶೈಕ್ಷಣಿಕವಾಗಿ ಮುಸ್ಲಿಂ ಸಮುದಾಯ ತೀರಾ ಹಿಂದುಳಿದಿದೆ. ಸಮು ದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸದೃಢಗೊಳ್ಳಬೇಕೆಂದರೆ ರಾಜಕೀಯ ಹಿತಾಸಕ್ತಿ ಮುಖ್ಯವಾಗುತ್ತದೆ. ರಾಜ್ಯದಲ್ಲಿ ಅಧಿಕಾರ ಹೊಂದಿರುವ ಮುಸ್ಲಿಂ ಜನಪ್ರತಿನಿಧಿಗಳು ಸಮುದಾಯ ಸ್ಥಿತಿ ಬಗ್ಗೆ ಚಿಂತನೆ ನಡೆಸಬೇಕಿದೆ’ ಎಂದು ಅವರು ಹೇಳಿದರು.

‘ಮಕ್ಕಳನ್ನು ಚಿಕ್ಕಂದಿನಿಂದಲೇ ಕೂಲಿ ಕೆಲಸಕ್ಕೆ ಕಳುಹಿಸಬಾರದು. ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸುವುದರಿಂದ ಸಮುದಾಯ, ದೇಶಕ್ಕೂ ಉತ್ತಮ ಪ್ರಜೆ ಸಿಕ್ಕಂತಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಈ ನಿಟ್ಟಿನಲ್ಲಿ ಬಡ ಮಕ್ಕಳಿಗೆ ಸಹಾಯವನ್ನು ಕೂಡ ಮಾಡಬೇಕು’ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ನಗರದ ಜಮಾ ಮಸೀದಿಯ ಪ್ರಮುಖರಾದ ಮೌಲಾನಾ ಮಕ್ಸೂದ ಇಮ್ರಾನ್ ಸಾಹೇಬ್, ಬೀದರ್‌ನ ಮುಜೀಬುರ್ರಹಮಾನ್ ಸಾಹೇಬ್, ಮಹ್ಮದ್ ಯುಸೂಫ್ ಖನ್ನಿ, ಲಾಲ್ ಹುಸೇನ್ ಇಲಕಲ್, ಲಾಯಕ್ ಹುಸೇನ್ ಬಾದಲ್, ರಫೀಕ್ ಅಹ್ಮದ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಜೀಮ್ ಅಹ್ಮದ್, ಮನ್ಸೂರ್ ಅನ್, ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಖಾಜಿ ಮಹ್ಮದ್ ಇಮ್ತಿಯಾಜುದ್ದೀನ್ ಸಿದ್ದೀಖಿ, ಗುಲಾಮ್ ಜಿಲಾನಿ, ಹುಸೇನ್ ಬಾಷಾ ತಿಮ್ಮಾಪುರ ಸಮಾವೇಶದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.