ADVERTISEMENT

ಮೂಲಸೌಲಭ್ಯ ಮರೀಚಿಕೆ

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ನಿವಾಸಿಗಳ ಆರೋಪ

ಮಹಾಂತೇಶ ಸಿ.ಹೊಗರಿ
Published 31 ಜನವರಿ 2017, 7:26 IST
Last Updated 31 ಜನವರಿ 2017, 7:26 IST
ಕಕ್ಕೇರಾದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವುದು
ಕಕ್ಕೇರಾದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವುದು   
ಕಕ್ಕೇರಾ: ಇಲ್ಲಿನ ಎಲ್ಲೆಂದರಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿಯಲ್ಲಿ ತ್ಯಾಜ್ಯ ವಸ್ತುಗಳು ತುಂಬಿದ್ದು, ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟವೆ. 
ಸುಮಾರು 10 ವರ್ಷದಿಂದ ಅಂಗನವಾಡಿ ಕೇಂದ್ರದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಮುಳ್ಳುಕಂಟಿಗಳಿಂದ ತುಂಬಿ ಹೋಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. 
 
ಸುಮಾರು 2 ವರ್ಷದಿಂದ ಹೆಣ್ಣುಮಕ್ಕಳ ಶೌಚಾಲಯ ಸಂಪೂರ್ಣಗೊಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು  ನಿಂಗಪ್ಪ ನಾಯಕ ರಾಠೋಡ ಹೇಳುತ್ತಾರೆ.
 
ಇಲ್ಲಿ ಪ್ರತಿ ಬುಧವಾರ ನಡೆಯುವ ಸಂತೆಗೆ ಹಲವಾರು ಊರುಗಳಿಂದ ಗ್ರಾಹಕರು ಹಾಗೂ ವ್ಯಾಪಾರಸ್ಥರು ಬರುತ್ತಾರೆ. ರಸ್ತೆಯ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಮಾರುಕಟ್ಟೆ ಸ್ಥಳ ಕೊಳಚೆ ಪ್ರದೇಶದಂತಾಗಿದ್ದು, ಯಾವುದೇ ಸೌಲಭ್ಯವಿಲ್ಲ ಎಂದು ನಂದಪ್ಪ ಪಾನಶಾಪ ಹೇಳುತ್ತಾರೆ. 
 
ಪಟ್ಟಣದಲ್ಲಿ ಉತ್ತಮ ರಸ್ತೆಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರೂ ಸುಮಾರು ದಿನಗಳಿಂದ ಉದ್ಘಾಟನೆಯಾಗದೆ ನಿಂತಿದೆ. 
 
1965ರಲ್ಲಿ ಆರಂಭವಾಗಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉತ್ತಮ ಕಟ್ಟಡವಿಲ್ಲ. ಈ ಆಸ್ಪತ್ರೆಯನ್ನು ಸುತ್ತಲಿನ ಸುಮಾರು 27 ಗ್ರಾಮಗಳ ಜನರು ಆಶ್ರಯಿಸಿದ್ದಾರೆ. ಮಾಸಿಕ ಸುಮಾರು 300ಕ್ಕಿಂತ ಹೆಚ್ಚು ಜನರ ಮಲೇರಿಯಾ ತಪಾಸಣೆ ಮಾಡಲಾಗುತ್ತದೆ. 80ರಿಂದ 100 ಹೆರಿಗೆ ಆಗುತ್ತವೆ ಎಂದು ಆರೋಗ್ಯ ಅಧಿಕಾರಿ ವಿಠ್ಠಲಪೂಜಾರಿ ಹೇಳುತ್ತಾರೆ.
 
ಚರಂಡಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟವರು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ನಿವಾಸಿ ಶಿವಪ್ಪ ಜಾಲಹಳ್ಳಿ ಆಗ್ರಹಿಸಿದ್ದಾರೆ. 
 
**
ಕಕ್ಕೇರಾದಲ್ಲಿ ಚರಂಡಿ ಸಮಸ್ಯೆ ಇದೆ. ಮೂಲಸೌಲಭ್ಯ ಕಲ್ಪಿಸುವ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ  ತೆಗೆದುಕೊಳ್ಳಲಾಗುವುದು.
-ನಿಂಗಪ್ಪನಾಯಕ ರಾಠೋಡ, ಪುರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.