ADVERTISEMENT

‘ರಂಗೋತ್ಸವ’ದಿಂದ ಗ್ರಾಮೀಣ ವಿದ್ಯಾರ್ಥಿಗಳು ವಂಚಿತ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 9:57 IST
Last Updated 15 ಫೆಬ್ರುವರಿ 2017, 9:57 IST
ಯಾದಗಿರಿಯ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಕಾಲೇಜು ರಂಗೋತ್ಸವದಲ್ಲಿ ವಿದ್ಯಾರ್ಥಿನಿಯರು ಜಾನಪದ ನೃತ್ಯ ಪ್ರದರ್ಶಿಸಿದರು
ಯಾದಗಿರಿಯ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಕಾಲೇಜು ರಂಗೋತ್ಸವದಲ್ಲಿ ವಿದ್ಯಾರ್ಥಿನಿಯರು ಜಾನಪದ ನೃತ್ಯ ಪ್ರದರ್ಶಿಸಿದರು   
ಯಾದಗಿರಿ: ಅದು ಬಣ್ಣ ಬಣ್ಣದ ಶಾಮಿ ಯಾನದಡಿ ನಿರ್ಮಾಣಗೊಳಿಸಿದ್ದ ಅದ್ಧೂರಿ ವೇದಿಕೆ... ಅದರ ತುಂಬಾ ಗಣ್ಯರಿದ್ದರು... ಕಲೆ, ನಾಟಕ, ಸಂಗೀತ, ಆಟ, ಪಾಠಗಳಿಗೆ ಸಂಬಂಧಿಸಿದಂತೆ ಭಾಷಣಗಳ ಭೂರಿಭೋಜನವೂ ಇತ್ತು... ಆದರೆ, ಅದನ್ನು ಸವಿಯಲು ಅಲ್ಲಿ ವಿದ್ಯಾರ್ಥಿಗಳೇ ಇರಲಿಲ್ಲ...
 
ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಬುರ್ಗಿ ರಂಗಾ ಯಣ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಾಲೇಜು ರಂಗೋತ್ಸವದಲ್ಲಿ ಕಂಡುಬಂದ ದೃಶ್ಯಗಳಿವು.
 
ರಂಗೋತ್ಸವಕ್ಕೆ ಕನಿಷ್ಠ ಪ್ರಚಾರ ಕೊರತೆ ಹಾಗೂ ಜಿಲ್ಲೆಯಲ್ಲಿನ ಗ್ರಾಮೀಣ ಭಾಗದ ಕಾಲೇಜುಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಹ್ವಾನ ಮತ್ತು ಮಾಹಿತಿ ನೀಡದೇ ಇರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜು ರಂಗೋತ್ಸವದಂತಹ ಉತ್ತಮ ಅವಕಾಶ ಕಳೆದುಕೊಳ್ಳುವಂತಾಯಿತು ಎಂದು ಸಮಾರಂಭಕ್ಕೆ ಬಂದಿದ್ದ ಗ್ರಾಮೀಣ ಕಾಲೇಜು ಉಪನ್ಯಾಸಕರು ಬೇಸರ ವ್ಯಕ್ತಪಡಿಸುತ್ತಿದ್ದದ್ದು ಕಂಡುಬಂತು.
 
ನಗರದ ಐದು ಕಾಲೇಜುಗಳಿಗಷ್ಟೇ ಸೀಮಿತಗೊಳಿಸಿ ಜಿಲ್ಲಾಮಟ್ಟದ ಸಮಾರಂಭ ಎಂದು ಕರೆಯುವುದು ಎಷ್ಟು ಸರಿ? ಹೈದರಾಬಾದ್‌ ಕಲಾ ಸಂಸ್ಕೃತಿ ಇರುವುದೇ ಗ್ರಾಮೀಣ ಭಾಗದಲ್ಲಿ. ಅದರಲ್ಲೂ ಗ್ರಾಮೀಣ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ಹೆಚ್ಚು ಪ್ರತಿಭಾನ್ವಿತರಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿರುವ ಕಾಲೇಜುಗಳಿಗೆ ಮಾಹಿತಿ ನೀಡದೇ ವಂಚಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಪಷ್ಟನೆ ಕೇಳಲಿ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮೀಣ ಭಾಗದ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. 
 
ಜಿಲ್ಲೆಯಲ್ಲಿ ಒಟ್ಟು 68 ದ್ವಿತೀಯ ಪಿಯು ಕಾಲೇಜುಗಳಿವೆ. ಅವುಗಳಲ್ಲಿ 23 ಸರ್ಕಾರಿ ಹಾಗೂ 34 ಅನುದಾನಿತ 11 ಅನುದಾನ ರಹಿತ ಪಿಯು ಕಾಲೇಜುಗಳಿವೆ. ಅವುಗಳಲ್ಲಿ ಪ್ರಥಮ ಪಿಯುಸಿಯಲ್ಲಿ 6,900 ವಿದ್ಯಾರ್ಥಿಗಳಿದ್ದಾರೆ. 
 
ದ್ವಿತೀಯ ಪಿಯುನಲ್ಲಿ 7000 ವಿದ್ಯಾರ್ಥಿಗಳು ಇದ್ದಾರೆ. ಒಟ್ಟಾರೆ 1,4000 ವಿದ್ಯಾರ್ಥಿಗಳಲ್ಲಿ ಸೋಮ ವಾರ ಸಮಾರಂಭದಲ್ಲಿ ಬೆರಳೆ ಣಿಕೆಯಷ್ಟು ಮಂದಿ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರು.
 
ಒಂದು ಕಾಲೇಜಿನಿಂದ ಒಂದು ಜಾನಪದ ಮತ್ತೊಂದು ನಾಟಕ ಪ್ರದರ್ಶಿಸುವ ಅವಕಾಶವನ್ನು ರಂಗೋತ್ಸವದಲ್ಲಿ ಕಲ್ಪಿಸಲಾಗಿತ್ತು. ಕೆಲವೇ ಕಾಲೇಜಿನಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಜಾನಪದ ನೃತ್ಯ ಮತ್ತು ನಾಟಕ ಪ್ರದರ್ಶಿಸಿದರು. ನಾಟಕ ವೀಕ್ಷಿಸಲು ಅಲ್ಲಿ ವಿದ್ಯಾರ್ಥಿಗಳ ಮತ್ತು ಸಭಿಕರ ಕೊರತೆಯೂ ಇತ್ತು. ನೃತ್ಯ ಮತ್ತು ನಾಟಕ ತೀರ್ಪುಗಾರರಿಗಷ್ಟೇ ಮೀಸಲು ಎಂಬಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.