ADVERTISEMENT

ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 6:56 IST
Last Updated 5 ಸೆಪ್ಟೆಂಬರ್ 2017, 6:56 IST
ಸುರಪುರದಲ್ಲಿ ಸೋಮವಾರ ನಡೆದ ಜೆಡಿಎಸ್ ಸಭೆಯಲ್ಲಿ ಪ್ರಮುಖರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು
ಸುರಪುರದಲ್ಲಿ ಸೋಮವಾರ ನಡೆದ ಜೆಡಿಎಸ್ ಸಭೆಯಲ್ಲಿ ಪ್ರಮುಖರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು   

ಸುರಪುರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಜೆಡಿಎಸ್‌ ಪ್ರಬಲವಾಗಿದೆ. ಉತ್ತರ ಭಾಗದ ಮತ್ತು ಹೈ.ಕ. ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿ ಹೊಂದಿದೆ’ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಹೇಳಿದರು.

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಪಕ್ಷದ ಸಭೆಯಲ್ಲಿ ಅವರು ಮಾತನಾಡಿ, ‘ರಾಜ್ಯದ ಜನರು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಅಧಿಕಾರ ನೀಡಿ ಅವರ ದುರಾಡಳಿತ ಕಂಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತದ ಸುವರ್ಣಕಾಲ ಜನರಿಂದ ಮಾಸಿ ಹೋಗಿಲ್ಲ. ಪಕ್ಷದ ಕಾರ್ಯಕರ್ತರು ರಾಜ್ಯದೆಲ್ಲೆಡೆ ಸಂಗ್ರಹಿಸಿದ ಮಾಹಿತಿ ಪ್ರಕಾರ ಜೆಡಿಸ್‌ 120 ಸ್ಥಾನಗಳನ್ನು ಪಡೆಯಲಿದೆ’ ಎಂದರು.

‘ರಾಜ್ಯ ಸರ್ಕಾರ ಮೋಡ ಬಿತ್ತನೆ ಹೆಸರಲ್ಲಿ ಜನರ ₹35 ಕೋಟಿ ಪೋಲು ಮಾಡುತ್ತಿದೆ. ಇಂತಹ ಅನಗತ್ಯ ಕೆಲಸಗಳನ್ನು ಬಿಟ್ಟು ರೈತರಿಗೆ ನೆರವಾಗುವ ಯೋಜನೆಗಳನ್ನು ಮಾಡಬೇಕು. ಕುಮಾರಸ್ವಾಮಿ ಮುಖ್ಯ ಮಂತ್ರಿಯಾದರೆ ಪ್ರಮಾಣ ವಚನದ ಕಾರ್ಯಕ್ರಮದಲ್ಲಿ ಸಾಲಮನ್ನಾ ಕಡತಕ್ಕೆ ಸಹಿ ಹಾಕಲಿದ್ದಾರೆ’ ಎಂದು ಹೇಳಿದರು.

ADVERTISEMENT

ತಾಲ್ಲೂಕು ಘಟಕದ ಅಧ್ಯಕ್ಷ ಯಮನಪ್ಪ ದೊರೆ, ಪಕ್ಷದ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ಶಿವಪ್ಪ ಸದಬ್, ಮುಖಂಡ ಸಂಗಣ್ಣ ಬಾಕ್ಲಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ತಿ ಪ್ರಾಸ್ತಾವಿಕ ಮಾತನಾಡಿದರು.

ಕಾಂಗ್ರೆಸ್‌ ಮುಖಂಡರಾದ ಮಲ್ಲಯ್ಯ ಕಮತಗಿ, ನಾಗರಾಳದ ಮಲ್ಲಿಕಾರ್ಜುನ ಗೌಡರ ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು. ಜಿಲ್ಲಾ ಘಟಕದ ಉಪಾಧ್ಯಕ್ಷ ತಿಮ್ಮಣ್ಣ ಜಂಗಳಿ, ಜಿಲ್ಲಾ ಯುವ ಘಟಕದ ಸಂಘಟನಾ ಕಾರ್ಯದರ್ಶಿ ತಿಪ್ಪಣ್ಣ ಪಾಟೀಲ, ಕಾರ್ಮಿಕ ಘಟಕದ ಅಧ್ಯಕ್ಷ ಗೋಪಾಲ ಬಾಗಲಕೋಟೆ, ಹಿಂದುಳಿದ ವರ್ಗಗಳ ಅಧ್ಯಕ್ಷ ಉಮೇಶ ಕುಂಬಾರ, ಎಸ್‌ಟಿ ಘಟಕದ ಅಧ್ಯಕ್ಷ ಪರಮೇಶಿ ಗೋಡಿಹಾಳ ಟಿ, ಮಲ್ಲುನಾಯಕ ಶ್ರೀನಿವಾಸಪುರ, ಬಾಲಪ್ಪ, ಪರಮಾನಂದ ಪುಜಾರಿ ಕಕ್ಕೇರಾ, ಪರಮಣ್ಣ ಇನಾಮದಾರ, ಬಸವರಾಜ ಕವಡಿಮಟ್ಟಿ, ಶಶಿಧರ ಪತ್ತಾರ, ಮಲ್ಲಿಕಾರ್ಜುನ ಚಲುವಾದಿ, ಶಾಂತು ತಳವಾರಗೇರಾ, ಮಲ್ಲಿಕಾರ್ಜುನ ಸದಬ, ಮಹ್ಮದ್ ಆಸಿಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.