ADVERTISEMENT

ರೈತರನ್ನು ತೊಂದರೆಗೆ ಸಿಲುಕಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 10:06 IST
Last Updated 9 ನವೆಂಬರ್ 2017, 10:06 IST
ಹುಣಸಗಿಯಲ್ಲಿ ಬುಧವಾರ ನಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಚಿವ ರಾಜೂಗೌಡ ಮಾತನಾಡಿದರು 
ಹುಣಸಗಿಯಲ್ಲಿ ಬುಧವಾರ ನಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಚಿವ ರಾಜೂಗೌಡ ಮಾತನಾಡಿದರು    

ಹುಣಸಗಿ: ಅವಳಿ ಜಲಾಶಯಗಳು ಭರ್ತಿಯಾಗಿ ಮುಂಗಾರು ಹಂಗಾಮಿಗೆ ಹರಿಸಲು ಬೇಕಾಗುವಷ್ಟು ನೀರು ಲಭ್ಯವಿದ್ದರೂ ಕಾಂಗ್ರೆಸ್ ಸರ್ಕಾರ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರನ್ನು ತೊಂದರೆಗೆ ಸಿಲುಕುವಂತೆ ಮಾಡಿದೆ ಎಂದು ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ದೂರಿದರು. ಹುಣಸಗಿ ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ರೈತ ಮೊರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಶಾಸಕನಾಗಿದ್ದ ಅವಧಿಯಲ್ಲಿ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸುವಾಗ ಎಂದೂ ಚಾಲು –ಬಂದ್ ಪದ್ಧತಿ ಅನುಸರಿಸಿಲ್ಲ. ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆ ಬೆಳೆದು ನೆಮ್ಮದಿಯಿಂದ ಇದ್ದರು. ಆದರೆ, ಈ ಬಾರಿಯ ಚಾಲು ಬಂದ್ ಕ್ರಮದಿಂದಾಗಿ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸ್ಥಳೀಯ ಶಾಸಕರು ತಮ್ಮ ಅವಧಿಯಲ್ಲಿ ಎಲ್ಲ ಏತ ನೀರಾವರಿಗೆ ಒತ್ತು ನೀಡುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

ಸುರಪುರ ಮತಕ್ಷೇತ್ರದಲ್ಲಿ ಗುಂಡಲಗೇರಾ, ಶ್ರೀನಿವಾಸಪುರ, ದೇವತ್ಕಲ್ಲ, ಬಪ್ಪರಗಿ –ಹೊರಟ್ಟಿ ಏತ ನೀರಾವರಿ ಯೋಜನೆಗಳ ಜಾರಿಗೆ ಏಕೆ ಒತ್ತು ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ರೈತ ಮೊರ್ಚಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಕುಂಬಾರ ಮಾತನಾಡಿ, ‘ರಾಜ್ಯ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ. ಯಾವುದೇ ಭಾಗ್ಯಗಳು ಸಮರ್ಪಕವಾಗಿ ಅರ್ಹರಿಗೆ ತಲುಪುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ರೈತ ಮೊರ್ಚಾದ ವಿಭಾಗ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಎಚ್.ಸಿ. ಪಾಟೀಲ, ಸುರಪುರ ಮಂಡಲ ಅಧ್ಯಕ್ಷ ಅಮರಣ್ಣ ಹುಡೇದ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮೆಲಪ್ಪ ಗುಳಗಿ ಮಾತನಾಡಿದರು.

ರೈತ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ನವಾಜರಡ್ಡಿ ಚಪಟ್ಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ (ತಾತಾ), ಎಪಿಎಂಸಿ ಸದಸ್ಯ ದೇವಣ್ಣ ಮಲಗಲದಿನ್ನಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಭೀಮರಾಯ ದೊಡ್ಡಮನಿ, ಸೋಮಣ್ಣ ಮೇಟಿ, ಬಲಭೀಮನಾಯಕ ಬೈರಿಮಡ್ಡಿ, ಶರಣಪ್ಪ ಹೋತಪೇಟ್, ತ್ರಿಶೂಲ್ ಹವಾಲ್ದಾರ್, ಸಂಗಣ್ಣ ವೈಲಿ, ತಿಪ್ಪಣ್ಣ ರಾಠೋಡ, ಅಪ್ಪಾಸಾಹೇಬಗೌಡ ಅಗ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.