ADVERTISEMENT

ರೈತರ ಖಾತೆಗೆ ಬಾರದ ತೊಗರಿ ಹಣ

ಕೆಂಭಾವಿ: ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:58 IST
Last Updated 19 ಏಪ್ರಿಲ್ 2017, 4:58 IST
ರೈತರ ಖಾತೆಗೆ ಬಾರದ ತೊಗರಿ ಹಣ
ರೈತರ ಖಾತೆಗೆ ಬಾರದ ತೊಗರಿ ಹಣ   
ಕೆಂಭಾವಿ: ಇಲ್ಲಿನ ತೊಗರಿ ಖರೀದಿ ಕೇಂದ್ರದಿಂದ ಇದುವರೆಗೆ 1,800 ರೈತರಿಂದ 60ಸಾವಿರ ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ಆದರೆ, ಈವರೆಗೆ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಿಲ್ಲ.
 
‘ಮಾ.1ರಿಂದಲೇ ತೊಗರಿ ತಂದಿದ್ದೇವೆ. ಆದರೆ, ಖರೀದಿ ಮಾಡಿದ ಹಣ ರೈತರಿಗೆ ಜಮೆ ಮಾಡುವಲ್ಲಿ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳಿ ವಿಳಂಬ ನೀತಿ ಅನುಸರಿಸುತ್ತಿದೆ’ ಎಂದು ರೈತರು ಆಪಾದಿಸಿದ್ದಾರೆ. 
 
‘ತೊಗರಿ ರಾಶಿ ಮಾಡಿ ಎರಡು ತಿಂಗಳಾಯಿತು. ಖರೀದಿ ಕೇಂದ್ರದ ಮುಂದೆ ಸರದಿಯಲ್ಲಿ ನಿಂತು ತೊಗರಿ ಮಾರಾಟ ಮಾಡಿದ್ದೇವೆ. ಆದರೆ, ಒಂದೂವರೆ ತಿಂಗಳಾದರೂ ಖಾತೆಗೆ ಹಣ ಜಮೆಯಾಗಿಲ್ಲ. ಮನೆಯಲ್ಲಿ ಮಕ್ಕಳ ಮದುವೆ ನಿಶ್ಚಯ ಮಾಡಿದ್ದೇವೆ. ಹಣ ಇಲ್ಲದೆ ಮುಂದೇನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ’ ಎಂದು ರೈತ ಮುದಪ್ಪ ತಿಳಿಸಿದರು. 
 
ಇದು ಕೇವಲ ಮುದಕಪ್ಪನ ತೊಂದರೆಯಲ್ಲ. ಹಲವಾರು ರೈತರು ಇಂತಹ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮದುವೆ, ಮುಂಜಿ, ತೊಟ್ಟಿಲು ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ಹಣ ಸಿಗದೆ ಕಂಗಾಲಾಗಿದ್ದಾರೆ.
 
‘15 ದಿನಗಳಲ್ಲಿ ಹಣ ಬರುತ್ತದೆ ಎಂಬ ವಿಶ್ವಾಸದಿಂದ ತೊಗರಿ ಮಾರಿದ್ದೇವೆ. ಹಲವು ತಿಂಗಳು ಕಳೆದರೂ ಹಣ ಜಮೆ ಆಗಿಲ್ಲ. ಮೊದಲು ತೊಗರಿ ಖರೀದಿ ಮಾಡುವಂತೆ ಹೋರಾಟ ಮಾಡಬೇಕಾಯಿತು. ಈಗ ಹಣ ಪಡೆಯಲು ಹೋರಾಟ ನಡೆಸಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಯಬಣ್ಣ ದೊಡಮನಿ ಆರೋಪಿಸಿದರು. 
 
‘ಏ.22ರವರೆಗೆ ತೊಗರಿ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಪ್ರತಿರೈತರಿಂದ ಕೇವಲ 25 ಕ್ವಿಂಟಲ್ ಮಾತ್ರ ಖರೀದಿಸುವ ಷರತ್ತು ವಿಧಿಸಿದೆ. ಹೆಚ್ಚು ತೊಗರಿ ಬೆಳೆದ ರೈತರು ಉಳಿದದ್ದನ್ನು ಎಲ್ಲಿ ಮಾರಬೇಕು’ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಚಿಂಚೋಳಿ ಪ್ರಶ್ನಿಸಿದರು.
 
‘ಸರ್ಕಾರದ ನೀತಿಯಿಂದ ರೈತರು ಆದಾಯ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಮಿತಿ 50 ಕ್ವಿಂಟಲ್‌ಗೆ ಏರಿಸಬೇಕು’ ಎಂದು ಅವರು ಒತ್ತಾಯಿಸಿದರು. 
‘ಸರ್ಕಾರದ ಆದೇಶದಂತೆ ತೊಗರಿ ಖರೀದಿಸಿ ರೈತರಿಗೆ ರಸೀದಿ ನೀಡಿದ್ದೇವೆ. ಹಣ ಜಮೆ ಮಾಡುವುದು ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಜವಾಬ್ದಾರಿ. ರೈತರು ಅಲ್ಲಿಯೇ ಕೇಳಬೇಕು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಯಾಳಗಿ ಹೇಳಿದರು.
****
ರೈತರ ಬ್ಯಾಂಕ್ ಖಾತೆಗಳಿಗೆ ತೊಗರಿ ಖರೀದಿಸಿದ ಹಣ ಶೀಘ್ರ ಜಮೆ ಮಾಡಬೇಕು. ಇಲ್ಲದಿದ್ದರೆ ರೈತರೊಂದಿಗೆ ಪ್ರತಿಭಟನೆ ನಡೆಲಾಗುವುದು
ಬಸನಗೌಡ ಚಿಂಚೋಳಿ, ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.