ADVERTISEMENT

ವದಂತಿಗೆ ಹೈರಾಣಾದ ಪೊಲೀಸರು

ಅಮಾಯಕರನ್ನು ಥಳಿಸಿದವರು ಜೈಲುಪಾಲು; ಎರಡು ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 25 ಮೇ 2018, 4:48 IST
Last Updated 25 ಮೇ 2018, 4:48 IST

ಯಾದಗಿರಿ: ಮಕ್ಕಳ ಕಳ್ಳರು ನಗರಕ್ಕೆ ಬಂದಿದ್ದಾರೆ ಎಂಬ ವದಂತಿ ಜಿಲ್ಲೆಯಲ್ಲೂ ಹರಡಿದ್ದು, ಪೋಷಕರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ವಾಟ್ಸ್‌ ಆ್ಯಪ್‌ ಮೂಲಕ ಈ ಸುದ್ದಿ ಹರಡಿದ್ದು, ಕೆಲ ಯುವಕರು ಬಡಿಗೆ ಹಿಡಿದು ಕಳ್ಳರ ಹುಡುಕಾಟ ನಡೆಸಿದ ಪ್ರಸಂಗವೂ ಜಿಲ್ಲೆಯಲ್ಲಿ ಕಂಡು ಬಂದಿದೆ. ಈ ಗುಂಪಿನ ಯುವಕರ ಆಕ್ರೋಶಕ್ಕೆ ತುತ್ತಾದವರು ಅಮಾಯಕರು ಎಂಬುದಾಗಿ ಪೊಲೀಸರು ಕಳವಳ ವ್ಯಕ್ತಪಡಿಸುತ್ತಾರೆ.

‘ಮಕ್ಕಳು ಕಳ್ಳರು’ ವದಂತಿಗೆ ಮಹಿಳೆಯರು ಹೆಚ್ಚು ಭಯ ಭೀತರಾಗಿದ್ದು, ಮಕ್ಕಳನ್ನು ಜೋಪಾನ ಮಾಡುತ್ತಿದ್ದಾರೆ. ಆಟ ಆಡುವುದಕ್ಕೂ ಮಕ್ಕಳನ್ನು ಹೊರಕ್ಕೆ ಬಿಡಲಾರದಂತಹ ಪರಿಸ್ಥಿತಿ ತಂದೊಡ್ಡಿದೆ’ ಎಂಬುದಾಗಿ ಮೈಲಾಪುರ ಬೇಸ್‌ನ ಹಣಮಂತ ಹೇಳುತ್ತಾರೆ.

ವದಂತಿಗೆ ಕಿವಿಗೊಟ್ಟಿರುವ ಜನರು ನಗರದ ಯಾಕೂಬ್‌ ಪುಕಾರಿ ದರ್ಗಾದ ಬಳಿ ಒಬ್ಬ ವ್ಯಕ್ತಿಯನ್ನು ಮಕ್ಕಳ ಕಳ್ಳ ಎಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಥಳಿತಕ್ಕೆ ಒಳಗಾಗಿರುವ ವ್ಯಕ್ತಿ ವೆಂಕಟಸ್ವಾಮಿ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯವರು. ಅಲ್ಪಸ್ವಲ್ಪ ಮಾನಸಿಕ ಅಸ್ವಸ್ಥತೆ ಇರುವ ಈತ ಮಕ್ಕಳ ಕಳ್ಳನಂತೆ ಜನರು ಕಂಡಿದ್ದಾರೆ. ಮೊದಲಿಗೆ ವಿಚಾರಿಸಿದಾಗ ಅಸ್ಪಷ್ಟ ಕನ್ನಡ ಮಾತನಾಡಿದ ಕೂಡಲೇ ಕೆಲವರು ಮಕ್ಕಳ ಕಳ್ಳ ಎಂದು ಸುಳ್ಳು ವದಂತಿ ಹಬ್ಬಿಸಿ ಜನರು ವೆಂಕಟಸ್ವಾಮಿಯನ್ನು ಥಳಿಸುವಂತೆ ಪ್ರೇರೇಪಿಸಿದ್ದಾರೆ. ಹಾಗೆ ಪ್ರೇರೇಪಿಸಿದವರ ಮೇಲೆ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿನಕೆರಾ ಗ್ರಾಮದ ಸಾಬಯ್ಯ ಮಲ್ಲಯ್ಯ ಗುತ್ತೇದಾರ, ದಂಡಪ್ಪ ಶರಣಪ್ಪ ಅಗಸರ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸರ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌.

ADVERTISEMENT

ಮಕ್ಕಳ ಕಳ್ಳರ ಬಗ್ಗೆ ಮೊಬೈಲ್‌ ವಾಟ್ಸಪ್ ಗ್ರೂಪುಗಳಲ್ಲಿ ಸುಳ್ಳು ಸಂದೇಶ ರವಾನಿಸುತ್ತಿದ್ದ ಸಂಜೀವ ಸಾಗರ ಎಂಬುವವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಆರೋಪಿತನಿಗೆ ಎಚ್ಚರಿಕೆ ನೀಡಿದ್ದಾರೆ.

ಮಕ್ಕಳ ಕಳ್ಳರು ಇದ್ದಾರೆಯೇ: ಮಕ್ಕಳ ಕಳ್ಳರು ಬಂದಿದ್ದಾರೆ. ಅವರ ಗುಂಪು ಹೊಂಚು ಹಾಕಿ ಮಕ್ಕಳನ್ನು ಅಪಹರಿಸುತ್ತಾರೆ ಎಂಬುದು ಕೇವಲ ವಾಟ್ಸ್‌ ಆ್ಯಪ್‌ ವದಂತಿ. ಇದು ಎಲ್ಲೆಡೆ ಹರಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ ಎಂಬುದಾಗಿ ಜಿಲ್ಲಾ ಪೊಲೀಸರ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌ ಹೇಳುತ್ತಾರೆ.

ಗ್ರಾಮೀಣ ಭಾಗದಲ್ಲಿನ ಜನರು ಈ ವದಂತಿಗೆ ಕಿವಿಗೊಟ್ಟಿಲ್ಲ. ಆದರೂ ಕಿಡಿಗೇಡಿಗಳು ವದಂತಿ ಹರಡಲು ಯತ್ನಿಸಿದ್ದಾರೆ. ಇದು ಕೇವಲ ವದಂತಿ. ಆತಂಕಪಡುವ ಅಗತ್ಯವಿಲ್ಲ ಎಂಬುದಾಗಿ ಪೊಲೀಸ್ ಇಲಾಖೆ ಜನರಲ್ಲಿ ಅರಿವು ಮೂಡಿಸಿದೆ. ಆದ್ದರಿಂದ, ಜನರು ನಿಟ್ಟುಸಿರು ಬಿಟ್ಟಿದ್ದಾರೆ ಎಂಬುದಾಗಿ ಯಾದಗಿರಿ ಗ್ರಾಮೀಣ ಪೊಲೀಸ್‌ ಠಾಣೆ ಪಿಎಸ್‌ಐ ಅಲೀ ಹೇಳುತ್ತಾರೆ.

ಜನರು ಏನು ಹೇಳುತ್ತಾರೆ?

ಮಕ್ಕಳ ಕಳ್ಳರು ಎಂದೊಡನೆ ಪೋಷಕರಲ್ಲಿ ಆತಂಕ ಸಹಜ. ಆದರೆ, ಜನರು ಖಚಿತಪಡಿಸಿಕೊಳ್ಳದೆ ಹಲ್ಲೆ ನಡೆಸುವುದು ಸರಿಯಲ್ಲ. ಇಡೀ ರಾಜ್ಯವನ್ನೇ ತಲ್ಲಣಕ್ಕೆ ದೂಡಿರುವ ಇಂಥಾ ವದಂತಿ ಹಬ್ಬಿಸಿದವರು ಯಾರು? ಎಂಬ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು
– ಬಸವರಾಜ ಅರಳಿ ಮೋಟ್ನಳ್ಳಿ, ಯಾದಗಿರಿ ನಿವಾಸಿ

ಆತಂಕ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸದ ಹೊರತು ಇಂಥಾ ವದಂತಿಗಳಿಗೆ ಸಮಾಜ ತುತ್ತಾಗಿ ನೆಮ್ಮದಿ ಕಳೆದುಕೊಳ್ಳುತ್ತದೆ. ಸೈಬರ್ ಪೊಲೀಸರು ಜಾಗರೂಕರಾಗಬೇಕು
 ಸುನೀತಾ, ಗೃಹಿಣಿ, ವರ್ಕನಹಳ್ಳಿ

ಸಮಾಜದಲ್ಲಿ ಸುಳ್ಳು ಸುದ್ದಿ, ಸಂದೇಶ ಹರಿಯಬಿಟ್ಟು ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್‌ ಇಲಾಖೆ ಮುಂದಾಗಿದೆ
– ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ರಾಜ್ಯವನ್ನೇ ತಲ್ಲಣಕ್ಕೆ ದೂಡಿರುವ ವದಂತಿ ಹಬ್ಬಿಸಿದವರು ಯಾರು ಎಂಬುದನ್ನು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು
ಬಸವರಾಜ ಅರಳಿ ಮೋಟ್ನಳ್ಳಿ, ಯಾದಗಿರಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.