ADVERTISEMENT

ವಾಲ್ಮೀಕಿ ಸಂಘದಿಂದ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 9:28 IST
Last Updated 22 ನವೆಂಬರ್ 2017, 9:28 IST

ಶಹಾಪುರ: ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಹೈದರಾಬಾದ್‌ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಮುಖಂಡರು ಮಂಗಳವಾರ ಭೀಮರಾಯನಗುಡಿ ಬಳಿ ಬೀದರ್‌–ಶ್ರೀರಂಗಪಟ್ಟಣ ಹೆದ್ದಾರಿ ತಡೆ ನಡೆಸಿದರು.

ನೇತೃತ್ವ ವಹಿಸಿದ್ದ ಗೊಲಪಲ್ಲಿ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ ಮಾತನಾಡಿ, ‘ಬೀದರ್‌, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ 123 ಜನ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡಿರುವುದು ಸಾಬೀತಾಗಿದೆ. ಆದ್ದರಿಂದ ಕಲಬುರ್ಗಿ ಜಿಲ್ಲಾಧಿಕಾರಿ 33 ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದರು. ಆದರೆ, ಸ್ವಜಾತಿ ಪ್ರೇಮಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಆದೇಶವನ್ನು ತಡೆ ಹಿಡಿದಿರುವುದು ನಾಚಿಗೇಡು ಸಂಗತಿಯಾಗಿದೆ’ ಎಂದು ಟೀಕಿಸಿದರು.

‘ಹೈದರಾಬಾದ್‌ ಕರ್ನಾಟಕದಲ್ಲಿ ಗೊಂಡ, ರಾಜಗೊಂಡ, ಕಾಡು ಕುರುಬ, ಜೇನು ಕುರುಬ, ಟೋಕ್ರಿ ಕೋಳಿ, ಡೋರಕೋಳಿ ಹೆಸರಿನ ಜನಾಂಗ ಈ ಭಾಗದಲ್ಲಿ ಇಲ್ಲ. ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ನೀಡಬಾರದು. ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರೆಪ್ಪ ನಾಯಕ ಮಗದಂಪುರ, ಗೌಡಪ್ಪಗೌಡ ಆಲ್ದಾಳ, ಸಿದ್ದಣ್ಣಗೌಡ ಪಾಟೀಲ ಕರಿಬಾವಿ, ವೆಂಕಟೇಶ ಬೇಟೆಗಾರ, ಭೀಮರಾಯ ಹದ್ದಿನಾಳ ಮಾತನಾಡಿ, ‘ನಮ್ಮ ಹೋರಾಟ ಯಾವುದೇ ಜಾತಿ, ಧರ್ಮದ ವಿರುದ್ಧವಲ್ಲ. ಆದರೆ, ನಮ್ಮ ಹಕ್ಕುಗಳನ್ನು ಕಬಳಿಸುತ್ತಿರುವ ವ್ಯಕ್ತಿಗಳ ವಿರುದ್ಧವಾಗಿದೆ. ಸರ್ಕಾರದ ಯೋಜನೆಗಳನ್ನು ದುರ್ಬಳಕೆ ಮಾಡಿಕೊಂಡು ನಿಜವಾದ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ತಾಲ್ಲೂಕಿನ ನಾಗನಟಗಿ, ಶೆಟ್ಟೆಕೇರಾ ಗ್ರಾಮದಲ್ಲಿ ಕೆಲ ದುಷ್ಟಶಕ್ತಿಗಳು ವಾಲ್ಮೀಕಿ ಭಾವಚಿತ್ರವನ್ನು ತೆರವುಗೊಳಿಸಿರುವುದು ಸಮುದಾಯಕ್ಕೆ ನೋವುಂಟಾಗಿದೆ. ವಾಲ್ಮೀಕಿ ಸಮಾಜದ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕು’ ಎಂದು ಆಗ್ರಹಿಸಿದರು.

ವಾಲ್ಮೀಕಿ ಸಮಾಜದ ಮುಖಂಡರಾದ ನಾಗಪ್ಪ ಕಾಶಿರಾಜ, ರಮೇಶ ದೊರೆ ಆಲ್ದಾಳ, ಗಂಗಾಧರ ನಾಯಕ, ರಘುವೀರ ನಾಯಕ, ಮಲ್ಲಪ್ಪ ನಾಯಕ ಅರಳಹಳ್ಳಿ, ತಿಮ್ಮಣ್ಣ ರಾಂಪೂರಕರ್, ರವಿ ಯಕ್ಷಿಂತಿ, ಅಮರೇಶ ನಾಯಕ ಇಟಗಿ, ಶರಣಪ್ಪ ಪ್ಯಾಟಿ, ಮಲ್ಲಿಕಾರ್ಜುನ ಪ್ಯಾಟಿ, ಧರ್ಮರಾಜ ಬಾಣತಿಹಾಳ, ರಾಘವೇಂದ್ರ ನಾಯಕ, ಶಿವಾಜಿ, ಶರಣಪ್ಪ ಜಾಕನಹಳ್ಳಿ, ಹಣಮಂತರಾಯ ದೊರೆ, ಗೋಪಾಲ, ಮಾನಪ್ಪ ಬಾಣತಿಹಾಳ, ರಂಗನಾಥ ದೊರೆ ವನದುರ್ಗ, ವಾಲ್ಮೀಕಿ ಹನುಮಂತಪ್ಪ, ವೆಂಕಟೇಶ ಮಾಸ್ತಿ, ಹೊನ್ನಪ್ಪ ಕೊಳ್ಳೂರ ಇದ್ದರು. ನಂತರ ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಜಗದೀಶ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.