ADVERTISEMENT

‘ಶಾಲೆಗಳಲ್ಲಿ ಸಾಹಿತ್ಯ ವಾತಾವರಣ ಇರಲಿ’

ಡಾ.ಜಿ.ಎಸ್.ಎಸ್. ಜನ್ಮದಿನಾಚರಣೆ ಸಮಾರಂಭ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 5:59 IST
Last Updated 20 ಫೆಬ್ರುವರಿ 2017, 5:59 IST

ಯಾದಗಿರಿ: ‘ಜ್ಞಾನಾಭಿವೃದ್ಧಿಗಾಗಿ ಮಕ್ಕಳಿಗೆ ಓದುವ ಪ್ರವೃತ್ತಿಯನ್ನು ರೂಢಿಸಬೇಕು’ ಎಂದು ಗುಲಬರ್ಗಾ ವಿವಿ ಉಪ ಕುಲಸಚಿವ ಆರ್.ಎಸ್.ದೊಡ್ಡಮನಿ ಸಲಹೆ ನೀಡಿದರು.

ನಗರದ ಓರಿಯಂಟ್ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಡಾ.ಜಿ.ಎಸ್.ಎಸ್. ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮೊಬೈಲ್, ಅಂತರ್ಜಾಲ ಸಂಸ್ಕೃತಿಯಲ್ಲಿ ಮಕ್ಕಳು ಕಳೆದು ಹೋಗುತ್ತಿದ್ದಾರೆ. ಓದು ಇಲ್ಲದ ಅವರ ಮಸ್ತಕದಲ್ಲಿ ಎಂಥದ್ದೂ ಇಲ್ಲದಾಗಿದೆ. ಪುಸ್ತಕ ಓದಲು ಶ್ರಮ, ಏಕಾಗ್ರತೆ ಬೇಕು. ಆದರೆ, ಈಗಿನ ಮಕ್ಕಳಲ್ಲಿ ಏಕಾಗ್ರೆತೆ ಎಂಬುದೇ ಇಲ್ಲ. ಏಕಾಗ್ರತೆ ಮತ್ತು ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಬೇಕು. ಪುಸ್ತಕ ಓದುವುದರಿಂದ ಸಾಹಿತಿಗಳ ಪರಿಚಯವಾಗುತ್ತದೆ’ ಎಂದರು.

ಹಿರಿಯ ಪತ್ರಕರ್ತ ಸಿ.ಎಂ.ಪಟ್ಟೇದಾರ ಮಾತನಾಡಿ,‘ಈಚೆಗೆ ಕವಿಗಳ, ಸಾಹಿತಿಗಳ ಜನ್ಮದಿನಾಚರಣೆಗೆ ಬದಲಾಗಿ ಅನ್ಯರ ಜಯಂತಿಗಳು ಹೆಚ್ಚಿವೆ.  ಶಾಲಾ–ಕಾಲೇಜುಗಳಲ್ಲಿ ಸಾಹಿತಿಗಳ ಜನ್ಮದಿನಾಚರಣೆ ಆಚರಿಸುವ ಮೂಲಕ ಮಕ್ಕಳಿಗೆ ಸಾಹಿತ್ಯದ ಗೀಳು ಹೆಚ್ಚಿಸಬೇಕು. ಕಾದಂಬರಿಗಳು ಇಂದು ಧಾರವಾಹಿಗಳ ರೂಪಪಡೆದಿವೆ. ಅವು ಸಮಾಜ ಘಾತುಕ ಸಂದೇಶ ನೀಡುವಂತಹ ಧಾರಾವಾಹಿಗಳನ್ನು ವೀಕ್ಷಿಸುವುದಕ್ಕಿಂತ ತರಾಸು, ಗೋಪಾಲಕೃಷ್ಣ, ಜಿ.ಎಸ್.ಶಿವರುದ್ರಪ್ಪ, ಕುವೆಂಪು ಅವರ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದರೆ ಬದುಕಿಗೂ ಶಿಸ್ತು ಒಲಿಯುತ್ತದೆ’ ಎಂದರು.

‘ಹಿಂದೆ ಕಾದಂಬರಿಗಳ ಕಾಲ ಇತ್ತು. ಕಾದಂಬರಿ ಬರೆದವರಿಗೂ ಭಾರೀ ಗೌರವ ದೊರೆಯುತ್ತಿತ್ತು. ಪತ್ರಿಕೆಗಳೂ ಸಹ ಸಾಹಿತ್ಯವನ್ನು ಉಣಬಡಿಸುತ್ತಿದ್ದವು. ಶಾಲೆಗಳಲ್ಲೂ ಸಾಹಿತ್ಯ ವಾತಾವರಣ ಇರುತ್ತಿತ್ತು. ಹಾಗಾಗಿ, ವಿದ್ಯಾರ್ಥಿಗಳು ದೊಡ್ಡ ಸಾಹಿತಿಗಳಾಗಿ ಗುರುತಿಸಿಕೊಳ್ಳುತ್ತಿದ್ದರು. ಆದರೆ, ಇಂದು ಶಾಲಾ–ಕಾಲೇಜುಗಳಲ್ಲಿ ಸಾಹಿತ್ಯ ವಾತಾವರಣ ಇಲ್ಲವಾಗಿದೆ. ಮೊಬೈಲ್ ಸಂಸ್ಕೃತಿಯಿಂದ ಮಕ್ಕಳ ಮನಸ್ಸು ಜಡ್ಡುಗಟ್ಟುತ್ತಿದೆ’ ಎಂದು ವಿಷಾದಿಸಿದರು.

ಡಾ.ರಫೀಕ್ ಸೌದಾಗರ, ಡಾ.ಸುಭಾಶ್ಚಂದ್ರ ಕೌಲಗಿ, ಡಾ.ಜ್ಯೋತಿಲತಾ ತಡಬಿಡಿಮಠ, ಮಹಮ್ಮದ್  ಮುಜಾಕೀರ್ ಅಲಿ, ಕಾಲೇಜು ಪ್ರಾಂಶುಪಾಲ ಜ್ಞಾನೇಶ್ವರ ಸಂದೇನ್ಕರ್ ಇದ್ದರು. ಕವಿಗೋಷ್ಠಿಯಲ್ಲಿ ಏಳು ಜನ ಕವಿಗಳು ಕವನ ವಾಚಿಸಿದರು.

ಪ್ರಾರ್ಥನಾ ಗೀತೆ ರೂಪಾ ಎಂ.ಪುಲ್ಸೆ ಹಾಡಿದರು. ರೇಷ್ಮಾ ಬೇಗಂ ಸ್ವಾಗತಿಸಿದರು. ರೇಣುಕಾ ವಂದಿಸಿದರು. ಜ್ಞಾನೇಶ್ವರ ಸಂದೇನ್ಕರ್  ಕಾರ್ಯಕ್ರಮ ನಿರೂಪಿಸಿದರು. ಸಿದ್ದಪ್ಪ ಹೊಟ್ಟಿ, ಅಯ್ಯಣ್ಣ ಹುಂಡೇಕಾರ್, ಸಂಗಣ್ಣ ಹೋತ್‌ಪೇಠ್, ಮಲ್ಲಪ್ಪ ಪುಟ್ಟಿ, ರಾಮಯ್ಯ ಶಾಬಾದಿ, ರಮಾದೇವಿ, ಸುವರ್ಣ ಹೂಗಾರ್, ಜಿ.ಎಸ್.ಅಂಬಿಕಾ, ವೆಂಕೋಬ, ವಿಶ್ವನಾಥ ಕುಲಕರ್ಣಿ, ಶರಣು ಯಾದವ ಕೇಶ್ವಾರ, ಪಹಿಮುನ್ನಿಸಾ ಬೇಗಂ, ಅಬ್ದುಲ ಖಾದೀರ್, ಶಮುಶುದ್ದೀನ್  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.