ADVERTISEMENT

ಸಭೆ ಬಹಿಷ್ಕರಿಸಿ ಹೊರನಡೆದ ಗ್ರಾಮಸ್ಥರು

ಗೋಗಿ ಗ್ರಾಮಸ್ಥರ ಸಭೆ ಕರೆದಿದ್ದ ಯುಸಿಐಎಲ್ ಪ್ರಧಾನ ವ್ಯವಸ್ಥಾಪಕ ಆತ್ನಾನಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:21 IST
Last Updated 11 ಮಾರ್ಚ್ 2017, 6:21 IST
ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮ ಸಮೀಪದಲ್ಲಿ ಯುರೇನಿಯಂ ಕಾರ್ಪೋರೇಷನ್ ಆಫ್‌ ಇಂಡಿಯಾ ಲಿಮಿಟೆಡ್‌ ಆರಂಭಿಸಿರುವ ಯುರೇನಿಯಂ ಗಣಿಗಾರಿಕೆಗೆ ಸಂಬಂಧಿಸಿದಂತೆ ಶುಕ್ರವಾರ ಯುಸಿಐಎಲ್ ಪ್ರಧಾನ ವ್ಯವಸ್ಥಾಪಕ ಆತ್ನಾನಿ ಯಾದಗಿರಿಯಲ್ಲಿ ಕರೆದಿದ್ದ ಸಭೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದರು.
 
ಯುರೇನಿಯಂ ಗಣಿಗಾರಿಕೆ ಯೋಜನೆ ₹ 500 ಕೋಟಿಯದ್ದಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಬೆಲೆಬಾಳುವ ‘ರೈತರ 200 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಈಗ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಯುರೇನಿಯಂ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಅಲ್ಲದೇ ಗ್ರಾಮಸ್ಥರ ಸಮಾಲೋಚನಾ ಸಭೆ ಕೂಡ ನಡೆಸಿಲ್ಲ. ಅದಕ್ಕಾಗಿ ಯೋಜನೆ ಸ್ಥಗಿತಗೊಳಿಸುವಂತೆ ವಿರೋಧಿಸುತ್ತಲೇ ಬಂದಿದ್ದೇವೆ.
 
ಗ್ರಾಮಸ್ಥರ ವಿರೋಧದಿಂದಾಗಿ ಘಟಕ ನಿರ್ಮಾಣದ ಕಾರ್ಯಚಟುವಟಿಕೆಗಳು ನಿಂತಿವೆ. ಕಾರ್ಯಚಟುವಟಿಕೆಗೆ ಮರುಚಾಲನೆ ನೀಡುವ ಉದ್ದೇಶದಿಂದ ಯುಸಿಎಲ್‌ಐನ ಎಂಡಿ ಸಭೆ ಗ್ರಾಮಸ್ಥರ ಕರೆದಿದ್ದರು. ರೈತರ ಪ್ರಶ್ನೆಗಗಳಿಗೆ ಅವರಿಂದ ಸಮರ್ಪಕ ಉತ್ತರ ಸಿಗದೇ ಇದುದ್ದರಿಂದ ಸಭೆ ಬಹಿಷ್ಕರಿಸಲಾಯಿತು’ ಎಂದು ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲನಗೌಡ ಪರಿವಾಣ ತಿಳಿಸಿದರು.
 
ಯುರೇನಿಯಂ ಘಟಕ ಆರಂಭಿಸುವುದರಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಮುಖ್ಯವಾಗಿ ಗೋಗಿ ಸುತ್ತಮುತ್ತಲಿನ ಜಲಮೂಲಗಳು ಹಾಳಾಗುತ್ತವೆ.

ಅಲ್ಲದೇ ದುಷ್ಪರಿಣಾಮಗಳ ಪಟ್ಟಿಯೇ ಬೆಳೆಯುತ್ತದೆ. ನಮಗೆ ಆರೋಗ್ಯ, ಗಾಳಿ, ಬೆಳಕು, ನೀರು ಮುಖ್ಯ ಯೋಜನೆ ಅಲ್ಲ. ಮೊದಲು ಆರೋಗ್ಯ ಸುರಕ್ಷತಾ ಕ್ರಮಗಳನ್ನು ಏಕೆ ತೆಗೆದುಕೊಂಡಿಲ್ಲ ಎಂದು ಎಂಡಿ ಆತ್ನಾನಿಗೆ ಪ್ರಶ್ನಿಸಿದರೆ ಸರಿಯಾಗಿ ಅವರು ನಮಗೆ ಉತ್ತರಿಸಲಿಲ್ಲ. ಅವರು ಏಕಮುಖವಾಗಿ ಮಾತನಾಡತೊಡಗಿದ್ದರಿಂದ ಸಭೆಯಿಂದ ಹೊರಬರಬೇಕಾಯಿತು.
 
ಯುರೇನಿಯಂ ಘಟಕ ಸಂಪೂರ್ಣ ಸ್ಥಗಿತಗೊಳಿಸಲು ಕೇಂದ್ರ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಇಡೀ ಗ್ರಾಮಸ್ಥರು ಸಂಘಟಿತರಾಗಿ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಪರಿಸರ ಹೋರಾಟಗಾರ ಡಾ.ಬಸವರಾಜ ಇಜೇರಿ ತಿಳಿಸಿದರು.
ಗ್ರಾಮಸ್ಥರಾದ ಸಂಗನಬಸವ, ಶಾಂತಪ್ಪ ಮಹಾಮನಿ ದಿಗ್ಗೇರಿ, ಬೈಲಪ್ಪರ ದಿಗ್ಗೇರಿ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.