ADVERTISEMENT

ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ

ಕೆಂಭಾವಿ: ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ನಡೆಸುತಿದ್ದ ಧರಣಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:14 IST
Last Updated 18 ಏಪ್ರಿಲ್ 2017, 5:14 IST
ಕೆಂಭಾವಿ: ಕೆಂಭಾವಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಜನತೆ ನಡೆಸುತ್ತಿರುವ ಪ್ರತಿಯೊಂದು ಹೋರಾಟಕ್ಕೂ ಸಂಪೂರ್ಣ ಬೆಂಬಲವಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿ ಭೇಟಿ ಮಾಡಲು ಶೀಘ್ರವೇ ನಿಯೋಗ ತೆರಳುವುದಾಗಿ ಶಾಸಕ ಗುರು ಪಾಟೀಲ ಶಿರವಾಳ ತಿಳಿಸಿದರು.
 
ತಾಲ್ಲೂಕು ಕೇಂದ್ರದ ರಚನೆಗೆ ಆಗ್ರಹಿಸಿ ತಿಂಗಳಿಂದ ಪುರಸಭೆ ಕಚೇರಿ ಮುಂದೆ ತಾಲ್ಲೂಕು ಹೋರಾಟ ಸಮಿತಿ ನಡೆಸುತ್ತಿದ್ದ ಧರಣಿಯನ್ನು ಸೋಮವಾರ ಅಂತಿಮಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಅವರು, 30 ದಿನಗಳಿಂದ ಪಟ್ಟಣದಲ್ಲಿ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಹಲವರು ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಸ್ಪಂದಿಸದೆ ಇರುವುದು ವಿಪರ್ಯಾಸ ಎಂದರು. 
 
ಸರ್ಕಾರ ಈಗ ಘೋಷಣೆ ಮಾಡಿರುವ 49 ತಾಲ್ಲೂಕುಗಳಿಗೆ ಹಣ ಬಿಡುಗಡೆ ಮಾಡದೆ ಕೇವಲ ಘೋಷಣೆ ಮಾಡಿದೆ. ಇದರಿಂದ ಹೊಸ ತಾಲ್ಲೂಕು ಅಭಿವೃದ್ಧಿ ಯಾವಾಗ ಎಂದು ಪ್ರಶ್ನಿಸಿದರು.
 
ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಮಾತನಾಡಿ, ಕೆಂಭಾವಿ ಯನ್ನು ತಾಲ್ಲೂಕು ಕೇಂದ್ರ ಮಾಡಲು ಈ ಭಾಗದ ಜನತೆಯ ಜತೆ ಪಕ್ಷಾತೀತವಾಗಿ ಹೋರಾಟ ಮಾಡಲು ಸಿದ್ಧ.
 
ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಶಾಸಕರ ಜತೆಗೂಡಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವದು ಎಂದು ಹೇಳಿದರು. 
 
ತಿಂಗಳಿನಿಂದ ಜನತೆ ಧರಣಿ ನಡೆಸುತ್ತಿದ್ದು, ಧರಣಿ ಕೈಬಿಟ್ಟು ಸರ್ಕಾರದ ಗಮನ ಸೆಳೆಯಲು ಬೆಂಗ ಳೂರಿಗೆ ನಿಯೋಗದೊಂದಿಗೆ ತೆರಳಲು ಜನತೆಯಲ್ಲಿ ಮನವಿ ಮಾಡಿದರು. 
 
ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ಮಾತನಾಡಿ, ಶಾಸಕ ಹಾಗೂ ಮಾಜಿ ಸಚಿವರ ಒತ್ತಾಯದ ಮೇರೆಗೆ ಧರಣಿ ಹಿಂಪಡೆಯುತ್ತಿದ್ದು, ಕೇವಲ ಸತ್ಯಾಗ್ರಹಕ್ಕೆ ಅಂತಿಮ ತೆರೆ. ಆದರೆ, ತಾಲ್ಲೂಕು ಕೇಂದ್ರ ಆಗುವವರೆಗೂ ಹೋರಾಟ ಅವಿರತವಾಗಿ ನಡೆಯಲಿದೆ ಎಂದು ಹೇಳಿದರು. 
 
ಧರಣಿ ನಿರತರಿಗೆ ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶ ನಾಪುರ ಹಣ್ಣಿನ ರಸ ನೀಡುವ ಮೂಲಕ ಧರಣಿ ಸತ್ಯಾಗ್ರಹಕ್ಕೆ ಮುಕ್ತಾಯ ಗೊಳಿಸಿದರು.
 
ಜಿಲ್ಲಾ ಪಂಚಾಯಿತಿ ಸದಸ್ಯ ಬಸನಗೌಡ ಯಡಿಯಾಪುರ, ಮಾಜಿ ಶಾಸಕ ಅಮಾತೆಪ್ಪ ಕಂದಕೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಜಿ.ಪಂ ಮಾಜಿ ಸದಸ್ಯ ಲಿಂಗನಗೌಡ ಮಾಲಿ ಪಾಟೀಲ, ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ, ರೈತ ಮುಖಂಡ ಬಸನಗೌಡ ಚಿಂಚೋಳಿ, ಬಸನಗೌಡ ಹೊಸಮನಿ, ಗೌಡಪ್ಪಗೌಡ ನಂದರಗಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.