ADVERTISEMENT

ಸುರಪುರ: ಪ್ರತಿಭಟನೆ ನಾಳೆ

ಹೈ.ಕದ ಶಾಲೆ, ಕಾಲೇಜುಗಳಿಗೆ ವೇತನಾನುದಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 9:13 IST
Last Updated 24 ಮಾರ್ಚ್ 2017, 9:13 IST

ಸುರಪುರ: ‘371(ಜೆ) ಅಡಿಯಲ್ಲಿ ಖಾಸಗಿ ಅನುದಾನ ರಹಿತ ಶಾಲಾ, ಕಾಲೇಜುಗಳಿಗೆ ವೇತನ ಅನುದಾನ ಹಾಗೂ ಮೂಲ ಸೌಕರ್ಯಗಳಿಗಾಗಿ ಹಣ ನೀಡುವಂತೆ ಒತ್ತಾಯಿಸಿ ಮಾ.25ರಂದು ಎಚ್‌ಕೆಆರ್‌ಡಿಬಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು’ ಎಂದು ಖಾಸಗಿ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಣ್ಣ ಕುಲಕರ್ಣಿ ತಿಳಿಸಿದರು.

ನಗರದ ಗಾಯತ್ರಿ ಶಾಲೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ‘ಹೈದರಾಬಾದ್ ಕರ್ನಾಟಕದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲಾ, ಕಾಲೇಜುಗಳಿಗೆ 371(ಜೆ) ಅಡಿಯಲ್ಲಿ ವೇತನ ಅನುದಾನ ಮತ್ತು ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಪೀಠೋಪಕರಣ, ಕಟ್ಟಡ, ಆಟದ ಮೈದಾನ, ಪ್ರಾಯೋಗಾಲಯ ಮುಂತಾದವುಗಳಿಗೆ ಅನುದಾನ ನೀಡುವುದಾಗಿ ನಿಯಮ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಸರ್ಕಾರ ಯಾವುದೇ ಕ್ರಮ ಕೈಕೊಳ್ಳದಿರುವುದನ್ನು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಗಮನಿಸಿ ಹೈ.ಕ. ಪ್ರದೇಶದಲ್ಲಿರುವ ಶಾಲಾ, ಕಾಲೇಜುಗಳ ಪದಾಧಿಕಾರಿಗಳೊಂದಿಗೆ ಬೆಂಗಳೂರಿಗೆ ತೆರಳಿ 371(ಜೆ) ವಿಶೇಷ ಕೋಶದ ಅಧಿಕಾರಿಗಳನ್ನು ಭೇಟಿಯಾಗಿ ವಿಷಯ ಮನವರಿಕೆ ಮಾಡಿಕೊಟ್ಟಾಗ ಜಂಟಿ ಕಾರ್ಯದರ್ಶಿ ಕೆ.ಎಲ್. ಲೋಕನಾಥ ಅವರು ಅನುದಾನ ಒದಗಿಸುವಂತೆ ಎಚ್‌ಕೆಆರ್‌ಡಿಬಿ ಕಾರ್ಯದರ್ಶಿಗೆ ಲಿಖಿತ ಆದೇಶ ಕಳಿಸಿದ್ದಾರೆ’ ಎಂದು ವಿವರಿಸಿದರು.

‘ಈ ಭಾಗದ ಶಾಲೆ, ಕಾಲೇಜುಗಳ ಪದಾಧಿಕಾರಿಗಳು ಎರಡು ತಿಂಗಳ ಹಿಂದೆ ಪ್ರದೇಶಾಭಿವೃದ್ಧಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದೇವೆ. ಮಂಡಳಿಯ ಅಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ ರಿಗೂ ಮನವಿ ಸಲ್ಲಿಸಲಾಗಿದೆ. ಸಚಿವರಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಂಡಳಿ ಆದೇಶ ಕುರಿತು ಯಾವುದೇ ಕ್ರಮ ಕೈಕೊಳ್ಳದಿರುವುದಕ್ಕೆ ಮತ್ತು ವೇತನ ಅನುದಾನ ಮತ್ತು ಮೂಲ ಸೌಕರ್ಯಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಮಾರ್ಚ್‌ 31ರೊಳಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಾರ್ಚ್‌ 25ರಂದು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬೀಗ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಹಣಮಂತರಾಯ ದೊರಿ, ಲಂಕೆಪ್ಪ ಕವಲಿ, ಕೃಷ್ಣ ದರಬಾರಿ, ಈಶ್ವರ ದೇವರಗೋನಾಲ, ಬೂದೆಪ್ಪ ಶೆಟ್ಟಿ, ಅಶೋಕ ಚಿನ್ನಕಾರ, ಶಿವರಾಜ ನಾಯಕ ಜಾಗಿರದಾರ, ನಿಂಗಪ್ಪ ಬುಡ್ಡ, ಪರಮೇಶ್ವರ, ವಿರೇಶ ಹಳಿಸಗರ, ಮೌನೇಶ ಕಳಸರ, ಹಣಮಂತಗೌಡ, ಮಹಿಬೂಬ, ವಾಸುದೇವ ಅರಸಿಕೇರಿ, ಶ್ರೀನಿವಾಸ ಸಿಂದಿಗೇರಿ, ಮಾನಯ್ಯ ಗುತ್ತೇದಾರ, ಚಿದಾನಂದ ಹಿರೇಮಠ, ರೇಣುಕಾ ಕನಕಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.