ADVERTISEMENT

ಸೌಕರ್ಯಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಖರೀದಿ ಕೇಂದ್ರಗಳಲ್ಲಿ ಗೋಣಿ ಚೀಲದ ಕೊರತೆ; ಕದಮುಚ್ಚಿದ ಖರೀದಿಕೇಂದ್ರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:24 IST
Last Updated 19 ಜನವರಿ 2017, 5:24 IST
ಸೌಕರ್ಯಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಸೌಕರ್ಯಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ   

ಯಾದಗಿರಿ: ಖರೀದಿ ಕೇಂದ್ರಕ್ಕೆ ತೊಗರಿ, ಶೇಂಗಾ ಮಾರಾಟಕ್ಕೆ ಬರುವ ರೈತರಿಗೆ ಎಪಿಎಂಸಿಯಲ್ಲಿ ಕುಡಿಯುವ ನೀರು, ಬೀದಿದೀಪ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬುಧವಾರ ಖರೀದಿ ಕೇಂದ್ರದ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ಯರಗೋಳದ ರೈತ ಕಾಶೀನಾಥ ಮಾತನಾಡಿ,‘ಖರೀದಿ ಕೇಂದ್ರ ಸಮಯಕ್ಕೆ ಸರಿಯಾಗಿ ಕದ ತೆರೆಯುತ್ತಿಲ್ಲ. ಇದರಿಂದ ರೈತರ ತೊಗರಿ ಖರೀದಿಯಲ್ಲಿ ವಿಳಂಬವಾಗುತ್ತಿದೆ. ಕೇಳಿದರೆ ಕೇಂದ್ರದ ವ್ಯವಸ್ಥಾಪಕರು ತೊಗರಿ ತುಂಬಲು ಗೋಣಿಚೀಲಗಳ ಕೊರತೆ ಇದೆ ಎನ್ನುತ್ತಾರೆ.

ಚೀಲ ಇಲ್ಲದ ಮೇಲೆ ಖರೀದಿ ಕೇಂದ್ರ ಏಕೆ ಕದ ತೆರೆಯಬೇಕು. ಎಪಿಎಂಸಿಯಲ್ಲಿ ರಾತ್ರಿ ಉಳಿದುಕೊಳ್ಳುವ ರೈತರಿಗೆ ಬೆಳಕಿನ ವ್ಯವಸ್ಥೆ ಇಲ್ಲ. ಇಡೀ ಎಪಿಎಂಸಿ ಕತ್ತಲೆಯಲ್ಲಿ ಮುಳುಗಿರುತ್ತದೆ. ಕುಡಿಯುವ ನೀರಿನ ಸೌಲಭ್ಯ ಇಲ್ಲ. ನೂರಾರು ರೈತರು ಸಮೀಪದ ಹೊಟೇಲ್‌ ಗಳನ್ನು ಆಶ್ರ ಯಿಸುವಂತಾಗಿದೆ’ ಎಂದು ದೂರಿದರು.

ಬೆಂಡೆಬೆಂಬಳ್ಳಿಯ ರೈತ ಮಹಮ್ಮದ್ ಮಾತನಾಡಿ,‘ಹಮಾಲರ ಹಾವಳಿ ಕೂಡ ಹೆಚ್ಚಿದೆ. ಹಮಾಲರು ತುಂಬುವ ಪ್ರತಿಚೀಲಕ್ಕೆ ಸರ್ಕಾರ ನಿಗದಿ  ಮಾಡಿರುವಂತೆ ₹12 ನೀಡ ಲಾಗುತ್ತಿದ್ದರೂ, ಹಮಾಲರು ಅರ್ಧ ಕ್ವಿಂಟಲ್‌ನಷ್ಟು ಹೆಚ್ಚುವರಿ ತೊಗರಿ ಯನ್ನು ರೈತರಿಂದ ಕಸಿದು ಕೊಳ್ಳುತ್ತಿದ್ದಾರೆ. ಇದರಿಂದ ಸಣ್ಣ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು. ಎಪಿಎಂಸಿ ಕಾರ್ಯದರ್ಶಿಗಳು ಕೂಡಲೇ ರೈತರಿಗೆ ಕುಡಿಯುವ ನೀರು ಮತ್ತು ಬೀದಿದೀಪದ ಸೌಕರ್ಯವನ್ನು ಕಲ್ಪಿಸಬೇಕು.

ಜಿಲ್ಲಾಧಿಕಾರಿ ನಿತ್ಯ ಖರೀದಿ ಕೇಂದ್ರದ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಖರೀದಿ ಕೇಂದ್ರದ ವ್ಯವಸ್ಥಾಪಕ ದೇವಿಂದ್ರಪ್ಪ ಖರೀದಿ ಕೇಂದ್ರದ ನಾಮಫಲಕವನ್ನು ತೆಗೆದು ಕೋಣೆಯಲ್ಲಿರಿಸಿದ್ದರಿಂದ ಖರೀದಿ ಕೇಂದ್ರ ಎಲ್ಲಿದೆ ಎಂದು ರೈತರು ಹುಡುಕಾಟ ನಡೆಸಬೇಕಾಯಿತು. ವ್ಯವಸ್ಥಾಪಕರ ದೇವಿಂದ್ರಪ್ಪ ಅವರ ಕಾರ್ಯವೈಖರಿ ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಡೆಬೆಂಬಳ್ಳಿಯ ರೈತ ಮೌಲಾಲಿ, ಹಮೀದ್‌, ಯರಗೋಳದ ಹುಸೇನ್‌ ಪಾಷ ನರಸಯ್ಯ, ಅಡ್ಡಮಿಟಿ ತಾಂಡಾದ ಶಂಕರ್ ನಾಯಕ್ ಸೇರಿದಂತೆ ಇತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕದಮುಚ್ಚಿದ ಖರೀದಿ ಕೇಂದ್ರ

ಯಾದಗಿರಿ: ಜಿಲ್ಲಾಡಳಿತ ಯಾದ ಗಿರಿ ತಾಲ್ಲೂಕಿನಲ್ಲಿ ಒಟ್ಟು ಮೂರು ಖರೀದಿ ಕೇಂದ್ರ ತೆರೆದಿದೆ. ಯಾದಗಿರಿ ನಗರದ ಎಪಿಎಂಸಿಯಲ್ಲಿ ಕೇಂದ್ರ ಸರ್ಕಾರದ ಬಫರ್‌ ಸ್ಟಾಕ್‌ ಯೋಜನೆ ಅಡಿ  ಎಫ್‌ಸಿಐ (ಫುಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ)ಏಜೆನ್ಸಿ ನೆರವಿ ನೊಂದಿಗೆ ಒಂದು ಹಾಗೂ ಎಸ್‌ಎಫ್‌ಎಸಿ (ಸ್ಮಾಲ್‌ ಫಾರ್ಮರ್ ಅಗ್ರಿಕಲ್ಚರಲ್‌ ಕೋಪರೇಷನ್)  ಏಜೆನ್ಸಿ ನೆರವಿನೊಂದಿಗೆ  ಒಂದು ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಅವುಗಳಲ್ಲಿ ಎಸ್‌ಎಫ್‌ಎಸಿ (ಸ್ಮಾಲ್‌ ಫಾರ್ಮರ್ ಅಗ್ರಿಕಲ್ಚರಲ್‌ ಕೋಪರೇಷನ್) ಏಜೆನ್ಸಿ ತೆರೆದಿರುವ ‘ಭೀಮಾತೀರ’ ಹೆಸರಿನ ಖರೀದಿ ಕೇಂದ್ರ ಬುಧವಾರ ಕದ ಮುಚ್ಚಿದ್ದರಿಂದ ರೈತರು ಪರದಾಡುವಂತಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.