ADVERTISEMENT

ಹಕ್ಕುಗಳ ರಕ್ಷಣೆಗೆ ಪ್ರಾದೇಶಿಕ ಪಕ್ಷ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 6:08 IST
Last Updated 8 ಜುಲೈ 2017, 6:08 IST
ಯಾದಗಿರಿ ಸಮೀಪದ ಗರುಮಠಕಲ್‌ನಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ರಾಜ್ಯಮಟ್ಟದ ಯುವ ಸಮಾವೇಶದಲ್ಲಿ ಪಕ್ಷದ ರಾಜ್ಯ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು
ಯಾದಗಿರಿ ಸಮೀಪದ ಗರುಮಠಕಲ್‌ನಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ರಾಜ್ಯಮಟ್ಟದ ಯುವ ಸಮಾವೇಶದಲ್ಲಿ ಪಕ್ಷದ ರಾಜ್ಯ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು   

ಯಾದಗಿರಿ: ‘ಕಾಂಗ್ರೆಸ್‌ನ ಸಿದ್ದರಾಮಯ್ಯ ಸೋನಿಯಾ ಗಾಂಧಿ ಮನೆಬಾಗಿಲು ಕಾಯುತ್ತಿದ್ದರೆ, ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ನರೇಂದ್ರ ಮೋದಿಯ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ. ಅವರಿವರ ಮನೆ ಕಾಯುವ ಇವರಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು. ಜಿಲ್ಲೆಯ ಗುರುಮಠಕಲ್‌ನಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ರಾಜ್ಯ ಯುವ ಸಮಾ ವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಜಾತಿ ರಾಜಕಾರಣ, ಭ್ರಷ್ಟಾಚಾರ ದಂತಹ ವಾಮಮಾರ್ಗಗ ಳನ್ನು ಮೊದಲ ಬಾರಿಗೆ ಜಾರಿಗೆ ತಂದವರು ಬಿ.ಎಸ್.ಯಡಿಯೂರಪ್ಪ. ಜೈಲು ಆತಿಥ್ಯವನ್ನು ಮೊದಲ ಸಲ ಉಂಡವರೂ ಸಹ ಅವರೇ. ಇಂತಹ ವರು ಇರುವ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಬುದ್ಧಿ ಕಲಿಸಲು ಜನರು ಮುಂದಿನ ಚುನಾವಣೆಗೆ ಸಜ್ಜಾಗಬೇಕು’ ಎಂದರು.

‘ನಿರಂತರ ಅಧಿಕಾರಲ್ಲಿದ್ದವರು ಗುರುಮಠಕಲ್‌ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯಿಂದ ವಂಚಿಸುತ್ತಿದ್ದಾರೆ. ಈ ಬಾರಿಯೂ ಅದೇ ಮಂತ್ರ ಹೇಳಿ ಮಂಕು ಬೂದಿ ಎರಚಲು ಸಿದ್ಧತೆ ನಡೆಸಿದ್ದಾರೆ. ಅವರ ಬಗ್ಗೆ ಎಚ್ಚರದಿಂದ ಇರಬೇಕು. 45 ವರ್ಷ ಅಧಿಕಾರ ನಡೆಸಿದವರು ಜನರ ಅಭಿವೃದ್ಧಿಗಾಗಿ ಎಂದೂ ಸೋನಿ ಯಾಗಾಂಧಿ ಅವರ ಮನೆ ಬಾಗಲು ಕಾದಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ನಿಮ್ಮಲ್ಲಿ ಎಷ್ಟು ಜನರ ಸಾಲಮನ್ನಾ ಆಗಿದೆ? ಎಷ್ಟು ಜನರಿಗೆ ಬೆಳೆವಿಮೆ ಪರಿಹಾರ ಸಿಕ್ಕಿದೆ? ಸಾಲಮನ್ನಾ ಮಾಡಲು ಹತ್ತಾರು ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಷರತ್ತು ಒಳಪಟ್ಟ ರೈತರ ಸಾಲ ಮಾತ್ರ ಮನ್ನಾ ಆಗುತ್ತದೆ. ಹೀಗಾಗಿ, ಸಾಲಮನ್ನಾ ಎಂಬುದು ರೈತರ ಮೂಗಿಗೆ ಸವರಿದ ತುಪ್ಪವಾಗಿದೆ. ರೈತರನ್ನು ವಂಚಿಸಿ ಅಧಿಕಾರ ನಡೆಸುವ ಸರ್ಕಾರ ನಮಗೆ ಬೇಕೆ’ ಎಂದು ಪ್ರಶ್ನಿಸಿದರು.

‘ಜೆಡಿಎಸ್‌ಗೆ ಸಂಪೂರ್ಣ ಶಕ್ತಿ ತುಂಬಬೇಕು. ನಮ್ಮ ಹಕ್ಕುಗಳನ್ನು ಪಡೆಯಲು ಕೇಂದ್ರದ ಎದುರು ಕೈಚಾಚು ವಂತಹ ಸ್ಥಿತಿಯಿಂದ ಮುಕ್ತರಾಗಲು ಪ್ರಾದೇಶಿಕ ಪಕ್ಷ ಜೆಡಿಎಸ್‌ ಬಲ ಪಡಿಸಬೇಕು. ನಮ್ಮ ಹಕ್ಕು, ಶಕ್ತಿ ನಮ್ಮ ಕೈಯಲ್ಲೇ ಇರಬೇಕು. ರಾಷ್ಟ್ರೀಯ ಪಕ್ಷ ಗಳಿಗೆ ಮಣೆಹಾಕಿ ನಮ್ಮ ಹಕ್ಕುಗಳ ಅಧಿಕಾರ ಕಳೆದುಕೊಳ್ಳಬಾರದು. ಆದ್ದರಿಂದ ‘ಕರ್ನಾಟಕಕ್ಕೆ ಕುಮಾರ ಸ್ವಾಮಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಯುವಕರ ಪಡೆ ರಾಜ್ಯದಲ್ಲಿ ಸಂಘಟಿ ಸಲಾಗುವದು’ ಎಂದು ಹೇಳಿದರು.

‘ಆಗಸ್ಟ್‌ನಲ್ಲಿ ವಿಜಯಪುರದಲ್ಲಿ ರೈತ ಸಮಾವೇಶ, ತುಮಕೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ಆಯೋಜನೆಗೆ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ನಾಗನಗೌಡ ಕಂದಕೂರು ಮಾತನಾಡಿ, ‘ಗುರುಮಠಕಲ್ ಕ್ಷೇತ್ರ ಐದು ದಶಕಗಳಿಂದ ಕಾಂಗ್ರೆಸ್‌ನ ಕಪಿಮುಷ್ಠಿ ಯಲ್ಲಿದೆ. ಹೀಗಾಗಿ, ನಮ್ಮ ಭಾಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗುರುಮಠಕಲ್‌ನಿಂದ ದೆಹಲಿಯವರೆಗೆ ತಲುಪಿದ ಕಾಂಗ್ರೆಸ್ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಮತಕ್ಷೇತ್ರದಲ್ಲಿ ಒಂದೂ ಕೈಗಾರಿಕೆ ಸ್ಥಾಪಿಸದೆ ಯುವ ಜನಾಂಗಕ್ಕೆ ವಂಚಿಸಿದ್ದಾರೆ’ ಎಂದು ಆರೋಪಿಸಿದರು.

ಪಕ್ಷದ ರಾಜ್ಯ ಯುವಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಮಾತನಾಡಿ, ‘ಗುರುಮಠಕಲ್ ಮತಕ್ಷೇತ್ರ ದಲ್ಲಿ ಕಾರ್ಯಕರ್ತರ ಬಲದಿಂದ ಜೆಡಿಎಸ್ ಅಸ್ತಿತ್ವದಲ್ಲಿದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಹಿರಿಯ ಮುಖಂಡರು ಸಲಹೆಯಂತೆ ಟಿಕೆಟ್ ನೀಡಿದರೆ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲಿಸುತ್ತೇವೆ’ ಎಂದರು.

ಪಕ್ಷದ ರಾಜ್ಯ ಯುವ ಘಟಕದ ಕಾರ್ಯದರ್ಶಿ ಚಂದ್ರಶೇಖರ ಬಾಣಾವರ ಮಾತನಾಡಿದರು. ಪಕ್ಷದ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಹರೀಶಗೌಡ, ಮುಖಂಡರಾದ ಶ್ರೀನಿವಾಸ, ಸುನೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜಶೇಖರಗೌಡ ವಡಿಗೇರಾ, ಚೆನ್ನಪ್ಪಗೌಡ ಮೋಸಂಬಿ, ಜಿ.ತಮ್ಮಣ್ಣ  ಇದ್ದರು.

ಪದಾಧಿಕಾರಿಗಳ ನೇಮಕ
ಜೆಡಿಎಸ್ ರಾಜ್ಯ ಯುವಘಟಕದ ಉಪಾಧ್ಯಕ್ಷರಾಗಿ ಶರಣಗೌಡ ಕಂದಕೂರ, ಕಾರ್ಯದರ್ಶಿಗಳಾಗಿ ಅನೀಲ ಹೆಡಗಿಮದ್ರಿ ಮತ್ತು ಅಜಯರಡ್ಡಿ ಯಲ್ಹೆರಿ ಅವರನ್ನು ನೇಮಿಸಲಾಗಿದೆ ಎಂದು ಮಧು ಬಂಗಾರಪ್ಪ ಕಾರ್ಯಕ್ರಮದಲ್ಲಿ ಘೋಷಿಸಿದರು.

* * 

ದೇವೇಗೌಡರು ನನ್ನನ್ನು ಶಾಸಕನಾಗಿಸಿ, ಸ್ಥಾನಮಾನ ನೀಡಿದ್ದಾರೆ. ಇಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನಮಾನ ಸಿಗಲಿದೆ.
ಮಧು ಬಂಗಾರಪ್ಪ
ಅಧ್ಯಕ್ಷ ,ಜೆಡಿಎಸ್ ರಾಜ್ಯ ಯುವ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.