ADVERTISEMENT

ಹುಲಕಲ್(ಜೆ): ಕೆರೆ ನೀರು ನುಗ್ಗುವ ಭೀತಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 7:22 IST
Last Updated 9 ಸೆಪ್ಟೆಂಬರ್ 2017, 7:22 IST
ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದಲ್ಲಿ ತಗ್ಗಿನ ಪ್ರದೇಶದಲ್ಲಿನ ಮನೆಗಳಿಗೆ ಗುರುವಾರ ರಾತ್ರಿ ನೀರು ನುಗ್ಗಿರುವ ದೃಶ್ಯ
ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದಲ್ಲಿ ತಗ್ಗಿನ ಪ್ರದೇಶದಲ್ಲಿನ ಮನೆಗಳಿಗೆ ಗುರುವಾರ ರಾತ್ರಿ ನೀರು ನುಗ್ಗಿರುವ ದೃಶ್ಯ   

ಯಾದಗಿರಿ: ರಾತ್ರಿಯಿಡೀ ಸುರಿದ ಹಿಂಗಾರು ಮಳೆಯಿಂದ ಜಿಲ್ಲೆಯ ಹಲವು ಕೆರೆ–ಕಟ್ಟೆಗಳು ತುಂಬಿವೆ. ಏರಿ ಶಿಥಿಲಗೊಂಡಿರುವ ಹುಲಕಲ್ (ಜೆ) ಕೆರೆಯೂ ತುಂಬಿದ್ದು ಗ್ರಾಮಸ್ಥರಿಗೆ ಭೀತಿ ಎದುರಾಗಿದೆ.

ಶಹಾಪುರ ತಾಲ್ಲೂಕಿನ ಗುರಸಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಕಲ್‌ (ಜೆ) ಕೆರೆ ಮತ್ತು ಊರು ಪರಸ್ಪರ ಹೊಂದಿಕೊಂಡಿವೆ. 200 ಕುಟುಂಬಗಳಿರುವ ಗ್ರಾಮವು 1,500 ಜನಸಂಖ್ಯೆ ಹೊಂದಿದೆ. ಆದರೆ, ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಗೆ ಸಮರ್ಪಕ ಕೋಡಿ ಇಲ್ಲ.

ಗುರುವಾರ ರಾತ್ರಿ ಸುರಿದ ಮಳೆಯಿಂದ ಗುರಸಣಗಿ ಮತ್ತು ಹುಲಕಲ್‌ (ಜೆ) ಗುಡ್ಡಗಳ ಮಧ್ಯದಲ್ಲಿರುವ ಕೆರೆ ಸಂಪೂರ್ಣ ತುಂಬಿದೆ. ಆದರೆ, ಕೆರೆಗೆ ಕೋಡಿ ಇರುವ ಸ್ಥಳದ್ಲಲಿ ರೈತರೊಬ್ಬರ ಹೊಲವಿದ್ದು  ಕೋಡಿ ಕೆಡೆಗೆ ನೀರು ಹರಿಯದಂತೆ ರೈತರು ಒಡ್ಡು ನಿರ್ಮಿಸಿದ್ದಾರೆ. ಕೆರೆಯ ತೂಬು ಸಹಿತ ಹೂಳಿನಿಂದ ತುಂಬಿದೆ.

ADVERTISEMENT

ಇದರ ಪರಿಣಾಮ ಕೆರೆ ನೀರನ್ನು ಎತ್ತ ಹರಿಸಬೇಕು ಎಂಬುದು ಗ್ರಾಮಸ್ಥರ ಗೊಂದಲಕ್ಕೆ ಕಾರಣವಾಗಿದೆ. ಮತ್ತೆ ದೊಡ್ಡ ಮಳೆಯಾದರೆ, ಕೆರೆ ಏರಿ ಒಡೆದು ಗ್ರಾಮಕ್ಕೆ ನೀರು ನುಗ್ಗುವುದು ಖಚಿತ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡಪ್ಪ ಮತ್ತು ಮುಖಂಡ ಹಣಮಂತ ಆತಂಕ ವ್ಯಕ್ತಪಡಿಸುತ್ತಾರೆ.\

19 ಮನೆಗಳಿಗೆ ನುಗ್ಗಿದ ನೀರು: ನಾಯ್ಕಲ್ ಗ್ರಾಮದ ಶಹಾಪುರ–ಯಾದಗಿರಿ ಸಂಪರ್ಕ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಒಟ್ಟು 19 ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯವಸ್ತಗೊಂಡಿದೆ. ಪ್ರತಿ ಮಳೆಗಾಲದಲ್ಲಿ ಇಲ್ಲಿನ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಮಳೆನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಾರೆ. ಮಳೆನೀರು ಸರಾಗವಾಗಿ ಹರಿದು ನಾಲಡಿ ದಾರಿ ಹಳ್ಳ ಸೇರುವಂತೆ ವ್ಯವಸ್ಥೆ ಮಾಡಿಲ್ಲ ಎಂದು ಮಳೆ ಸಂತ್ರಸ್ಥರು ದೂರುತ್ತಾರೆ.

ಹಜರತ್‌ ಅಲಿ, ಅಬ್ದುಲ್‌ ಖಾದರ್ ಮುಲ್ಲಾ, ಬಾಷಾಮಿಯಾ ಮುಲ್ಲಾ, ಬಾಷಾಮಿಯಾ ಫರ್ಟ್ಲೈಸರ್, ಬಸವರಾಜ ಗಚ್ಚಿಮನಿ, ಬಸವಂತ ದೈವತ್, ಹಣಮಂತ ಕುಂಬಾರ, ವಿಶ್ವನಾಥರಡ್ಡಿ ಚಟ್ನಳ್ಳಿ, ಬಸವನಗೌಡ, ಇಸೂಬ್‌ ಬಂ ಚಟ್ನಳ್ಳಿ, ಇಸ್ಮಾಯಿಲ್ ಕೊಲ್ಮಿ, ಶಬ್ಬೀರ್ ಚಟ್ನಳ್ಳಿ, ಚನ್ನುಮಿಯಾ ಚಿನ್ನಾಕರ, ಮರಿಯಪ್ಪ ಅಂಬಿಗರ, ಅಬ್ಬಾಸ್ ಅಲಿ ಚಮರೆ, ಶರಣಪ್ಪ ಮಣಿಗೇರ ಮತ್ತು ಭೀಮರಾಯ ಅಂಬಿಗರ ಎಂಬುವರ ಮನೆಗಳ ಸುತ್ತಲೂ ನೀರು ಸಂಗ್ರಹಗೊಂಡಿದ್ದು ದ್ವೀಪದಂತಾಗಿದೆ.

ಹತ್ತಿ ಹೊಲಗಳು ಜಲಾವೃತ: ಯಾದಗಿರಿ ಸುತ್ತಾಮುತ್ತ ಒಟ್ಟು 59.1 ಮಿ.ಮೀ. ಮಳೆಯಾಗಿದೆ. ಸೈದಾಪುರ, ಚಿನ್ನಾಕರ, ಹತ್ತಿಕುಣಿ ಹೋಬಳಿ ವ್ಯಾಪ್ತಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದ್ದು, ರೈತರ ಹೆಸರು ಮತ್ತು ಹತ್ತಿ ಹೊಲಗಳು ಜಲಾವೃತಗೊಂಡಿವೆ.

ಮುಂಡರಗಿ, ರಾಮಸಮುದ್ರ, ಅರಕೆರಾ (ಬಿ), ಕಂದಕೂರು, ಗಾಜರಕೋಟ, ಮೋಟ್ನಳ್ಳಿ ತಾಂಡಾ ಭಾಗದಲ್ಲಿ ಕೊಯ್ಲಿಗೆ ಬಂದ ಹೆಸರು ಫಸಲು ಹಾಗೂ ರಾಶಿ ಹಾಕಿದ್ದ ಹೆಸರು ಕಾಳು ಮಳೆಗೆ ಕೊಚ್ಚಿಹೋಗಿವೆ.

ಹೂ ಬಿಟ್ಟು ನಳನಳಿಸುತ್ತಿದ್ದ ಬಹುತೇಕ ಹತ್ತಿಹೊಲಗಳಲ್ಲಿ ನೀರು ಸಂಗ್ರಹಗೊಂಡಿರುವ ಕಾರಣ ಈ ಸಲದ ಹತ್ತಿ ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರೈತ ಮಲ್ಲಿಕಾರ್ಜುನಪ್ಪ ತಿಳಿಸಿದರು. ತಾಲ್ಲೂಕು ಮತ್ತು ಜಿಲ್ಲಾಡಳಿತ ಕೂಡಲೇ ಮಳೆ ಮತ್ತು ಬೆಳೆಹಾನಿ ಪರಿಶೀಲಿಸಿ ಪರಿಹಾರ ಕಲ್ಪಿಸಬೇಕು. ಶೀಘ್ರ ನೆರವಿಗೆ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.