ADVERTISEMENT

‘ಆರೋಗ್ಯ ಕೇಂದ್ರ ಆರಂಭಿಸುವ ಭರವಸೆ’

ಆರ್ಎಂಎಸ್ ಯೋಜನೆಯಡಿ ನೂತನ ಪ್ರೌಢಶಾಲೆ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2016, 7:02 IST
Last Updated 9 ಜನವರಿ 2016, 7:02 IST

ಯಾದಗಿರಿ: ಕಕ್ಕೇರಾ ಪಟ್ಟಣದಕ್ಕೆ ಮೊದಲ ಹಂತವಾಗಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಜಿಲ್ಲೆಯ ಕಕ್ಕೇರಾದಲ್ಲಿ ಶುಕ್ರವಾರ ₹68 ಲಕ್ಷ ರೂ ವೆಚ್ಚದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಿರ್ಮಿಸಿದ ಸಿದ್ದಣ್ಣ ನಾಯಕ ಬಂಗಾರಪ್ಪ ನಾಯಕ ದೇಸಾಯಿ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಹಾಗೂ ಬಿಸಿಯೂಟ ಕೋಣೆ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾಗಿರುವ ಕಕ್ಕೇರಾಕ್ಕೆ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಗೆ ₹3 ಕೋಟಿ ರೂ ಮಂಜೂರಾಗಿತ್ತು. ಕಾರಣಾಂತರದಿಂದ ಅದು ಬೇರೆಡೆಗೆ ರವಾನೆಯಾಗಿದೆ. ಆರೋಗ್ಯ ಸಚಿವರು ಹಾಗೂ ಆಯುಕ್ತರೊಂದಿಗೆ ಚರ್ಚಿಸಿ, ಸಮುದಾಯ ಆರೋಗ್ಯ ಕೇಂದ್ರ ಮಂಜೂರಾತಿ ಪಡೆದುಕೊಳ್ಳುವ ವರೆಗೆ ನನಗೆ ನೆಮ್ಮದಿಯಿಲ್ಲ ಎಂದು ಹೇಳಿದರು.

ಕಕ್ಕೇರಾ–ಹುಣಸಗಿ ಮಾರ್ಗದ ರಸ್ತೆ ದುರಸ್ತಿಗೆ ₹40 ಲಕ್ಷ ಹಾಗೂ ಕಕ್ಕೆರಾ–ಬಲಶೆಟ್ಟಿಹಾಳವರೆಗಿನ ರಸ್ತೆ ದುರಸ್ತಿಗೆ ₹35ಲಕ್ಷ ಅನುದಾನ ಒದಗಿಸಲಾಗಿದ್ದು, ಕೆಲಸ ಚಾಲ್ತಿಯಲ್ಲಿದೆ ಎಂದ ಅವರು, ಬಾಲಕಿಯರ ಪ್ರೌಢಶಾಲೆ ಹಾಗೂ ಬಿಸಿಎಂ ಹಾಸ್ಟೆಲ್ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಕಾಲೇಜಿನ ಆರು ಕೋಣೆಗಳಿಗೆ ಅನುದಾನ ನೀಡಲಾಗುವುದು. ಪ್ರೌಢಶಾಲಾ ಕಟ್ಟಡಕ್ಕೆ ಭೂಮಿ ದಾನ ಮಾಡಿದ ಮಾನಪ್ಪ ನಾಯಕ ದೇಸಾಯಿ ಅವರಿಗೆ ಸೇವಾ ಮನೋಭಾವ ಸ್ಮರಣೀಯ ಎಂದರು.

ವಿದ್ಯಾರ್ಥಿಗಳು ಹಾಗೂ ನಾಗರಿಕರು, ಇದು ನಮ್ಮ ಶಾಲೆ. ನಮ್ಮ ಮಕ್ಕಳು ಅಭ್ಯಾಸ ಮಾಡುವ ಜ್ಞಾನ ದೇಗುಲ ವೆಂದು ತಿಳಿದು ಸ್ವಚ್ಛತೆ ಕಾಪಾಡಬೇಕು. ಶಾಲೆಯನ್ನು ಹಸಿರಿನಿಂದ ಕಂಗೊಳಿಸು ವಂತೆ ಮಾಡಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪರಂಗಯ್ಯ ಮಾತನಾಡಿ, ಜಾಗದ ಸಮಸ್ಯೆಯಿಂದ ಶಾಲಾ ಕೊಠಡಿಗಳಿಲ್ಲದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದನ್ನು ಕಂಡಿದ್ದ ಶಾಸಕರು, ಭೂದಾನಿಗಳ ಮನವೊಲಿಸಿದ್ದರಿಂದ ಮೂರು ಮಹ ಡಿಯ 10 ಕೋಣೆಗಳ ಭವ್ಯ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದರು. 

ಸರ್ಕಾರ ಶಾಲಾ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಶೂಭಾಗ್ಯ, ಪಠ್ಯಪುಸ್ತಕ, ಉಚಿತ ಬೈಸಿಕಲ್‌ ಸೇರಿ ದಂತೆ ಹಲವಾರು ಯೋಜನೆಗಳನ್ನು ನೀಡಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು. ಭೀಮಾಬಾಯಿ ದೊರೆ, ಶರಣಮ್ಮ ಸಾಹುಕಾರ, ಹಣಮವ್ವ ಸೊಲ್ಲಾಪೂರ್, ಪಾರ್ವತೆಮ್ಮ ಮಲ್ಕಾಪುರೆ, ಭೂದಾನಿ ಮಾನಪ್ಪ ನಾಯಕ ದೇಸಾಯಿ, ರಾಜಶೇಖರಗೌಡ ಪಾಟೀಲ ಇದ್ದರು.

ಹೆಚ್ಚು ಚಪ್ಪಾಳೆ ನೌಕರಿಗೆ ಆಪತ್ತು
ಯಾದಗಿರಿ: ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡರೇ ನೌಕರಿ ಹೋಗುವ ಸಂಭವವಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಮಾಶೆ ಮಾಡಿದರು. ಕಕ್ಕೇರಾದಲ್ಲಿ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಸ್ಥಳೀಯ ಕಾಲೇಜಿನ ಪ್ರಾಂಶುಪಾಲ ಭೀಮಣ್ಣ ಬೋಸಗಿಯವರ ಹೆಸರು ಹೇಳುತ್ತಿದ್ದಂತೆಯೇ, ಕಾಲೇಜಿನ ವಿದ್ಯಾರ್ಥಿಗಳು, ರಾಜಾ ಹುಲಿಗೆ ಜೈ, ಪ್ರಿನ್ಸಿಪಾಲರಿಗೆ ಜೈ ಎಂದು ಕೂಗಿದಾಗ, ನಗುತ್ತಲೇ ಶಾಸಕರು ಮೇಲಿನಂತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.