ADVERTISEMENT

₹136ಕೋಟಿ ಕ್ರಿಯಾಯೋಜನೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 6:29 IST
Last Updated 19 ಜುಲೈ 2017, 6:29 IST
ಯಾದಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ಪುಸ್ತಕದಲ್ಲಿನ ಮಾಹಿತಿ ಸರಿಯಿಲ್ಲ ಎಂದು ಸದಸ್ಯರು ತೋರಿಸುತ್ತಿರುವುದು
ಯಾದಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ಪುಸ್ತಕದಲ್ಲಿನ ಮಾಹಿತಿ ಸರಿಯಿಲ್ಲ ಎಂದು ಸದಸ್ಯರು ತೋರಿಸುತ್ತಿರುವುದು   

ಯಾದಗಿರಿ: 2017–18ನೇ ಸಾಲಿನ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ಮಂಗಳವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಎಂ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಅನುಮೋದನೆ ನೀಡಿತು. ಸಭೆಯ ಆರಂಭದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿಗೆ ನಿಗದಿಪಡಿಸಿದ ಅನುದಾನದ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನಿಲ್ ಬಿಸ್ವಾಸ್ ಸಭೆಯ ಗಮನಕ್ಕೆ ತಂದರು.

2017–18ನೇ ಸಾಲಿನ ಇಲಾಖೆವಾರು ನಿಗದಿಯಾದ ಅನುದಾನ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆಯ ಪಂಚಾಯತ್ ರಾಜ್‌ಗೆ ₹2.76ಕೋಟಿ ಅನುದಾನ ನಿಗದಿಯಾಗಿದ್ದು, ₹2.30 ಕೋಟಿ ಸಿಬ್ಬಂದಿ ವೇತನಕ್ಕೆ ಮೀಸಲಿರಿಸುವ ಕುರಿತು ಸಭೆಗೆ ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ₹53.59 ಕೋಟಿ ವೇತನ ಮತ್ತು ವೇತನ ರಹಿತ ಅನುದಾನ ನಿಗದಿ, ಅದೇ ರೀತಿಯಲ್ಲಿ ಕ್ರೀಡಾ ಮತ್ತು ಯುವಜನ ಸೇವೆ ಇಲಾಖೆ ₹ 21.67 ಕೋಟಿ, ಕುಟುಂಬ ಕಲ್ಯಾಣ ಇಲಾಖೆ ₹4.53ಕೋಟಿ, ಸಮಾಜ ಕಲ್ಯಾಣ ಇಲಾಖೆ₹ 15.74 ಕೋಟಿ, ಹಿಂದುಳಿದ ವರ್ಗಗಳ ಇಲಾಖೆ ₹17.76 ಹಾಗೂ ಅಲ್ಪಸಂಖ್ಯಾತರ ಇಲಾಖೆ ₹2.09 ಕೋಟಿ,  ಕೃಷಿ ಇಲಾಖೆ₹1.71 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ₹2.6 ಕೋಟಿ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿಗೆ ಒಟ್ಟು₹136.69 ಅನುದಾನ ಕ್ರಿಯಾಯೋಜನೆಗೆ ಸರ್ವ ಸದಸ್ಯರು ಅನುಮೋದನೆ ನೀಡಿದರು.

ADVERTISEMENT

₹5ಲಕ್ಷ ವೆಚ್ಚದಲ್ಲಿ ರೈತರ ಬಜಾರ್‌: ಪ್ರತಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ₹5ಲಕ್ಷ ವೆಚ್ಚದಲ್ಲಿ ರೈತರ ಬಜಾರ್‌ ನಿರ್ಮಿಸಿ ರೈತರು ಬೆಳೆದ ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲ ಮಾಡಿಕೊಡುವಂತೆ ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು.

ಮದ್ದರಕಿ, ಇಬ್ರಾಹಿಂಪೂರ, ತಂಗಡಗಿ, ಮುಡಬೂಳ ಶಾಲೆಗಳ ದುರಸ್ತಿ ಮಾಡಬೇಕಿದೆ. ಪುಟಪಾಕ್ ವ್ಯಾಪ್ತಿಯ ಚಪೆಟ್ಲಾ, ಇಲಮಾಪುರ ಗ್ರಾಮಗಳಲ್ಲಿ ಶಾಲಾ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿರುವ ಕುರಿತು ಸದಸ್ಯೆ ರಾಜಶ್ರೀರೆಡ್ಡಿ ಸಭೆಯ ಗಮನಕ್ಕೆ ತಂದರು. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಯಿತು.

ಅಸಮರ್ಪಕ ಮಾಹಿತಿ– ಅಸಮಾಧಾನ: ‘ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ಮಾಹಿತಿ ಪುಸ್ತಕದಲ್ಲಿ ಒಂದು ರೀತಿಯ ಮಾಹಿತಿ ಇದೆ. ಆದರೆ, ನೀವು ಹೇಳೋದ್‌ ಇನ್ನೊಂದು ರೀತಿ ಇದೆ. ಹೀಗೆ ತಾಳಮೇಳ ಇಲ್ಲದ ಮಾಹಿತಿ ನೀಡಿ ನಮ್ಮನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿರುವವರು ಯಾರು’ ಎಂದು ಸಿಇಒ ರಾಜೇಂದ್ರನ್‌ ಮೆನನ್‌ ಅವರನ್ನು ಸದಸ್ಯರು ಪ್ರಶ್ನಿಸಿದರು.

‘ಪ್ರತಿ ಸಾಮಾನ್ಯ ಸಭೆಯಲ್ಲಿ ಅನುಪಾಲನಾ ವರದಿ ಸೇರಿದಂತೆ ಪ್ರಗತಿ ಮಾಹಿತಿ ಪುಸ್ತಕವನ್ನು ಸಭೆ ಆರಂಭಗೊಂಡ ಮೇಲೆ ತಂದು ಇಡುತ್ತೀರಿ. ಆದರೆ, ಅದು ನಮಗೆ ಏನೂ ಅರ್ಥವಾಗುವುದಿಲ್ಲ. ಅದರಲ್ಲೊಂದು ಇದ್ದರೆ; ನೀವು ಇನ್ನೊಂದು ಹೇಳುತ್ತೀರಿ. ಇದನ್ನೆಲ್ಲಾ ಯಾರು ಮಾಡುತ್ತಾರೆ? ಏಕೆ ಮಾಡುತ್ತಾರೆ? ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಸಮಸ್ಯೆ ಬಗೆಹರಿಸುವ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರು  ಒತ್ತಾಯಿಸಿದರು. ‘ಹಲವಾರು ಕಾಮಗಾರಿಗಳಿಗೆ ಟೆಂಡರ್‌ ಕರೆದಿದ್ದರೂ, ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಇರುವುದರಿಂದ ಜನರು ನೀರಿಗಾಗಿ ತೊಂದರೆ ಪಡುವಂತಾಗಿದೆ’ ಎಂದು ಸದಸ್ಯ ಬಸಣ್ಣಗೌಡ ಯಡಿಯಾಪೂರ ಸಭೆಯ ಗಮನಕ್ಕೆ ತಂದರು. ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ಉಪ ಕಾರ್ಯದರ್ಶಿ ವಸಂತರಾವ ಕುಲಕರ್ಣಿ ಇದ್ದರು.

ನಾವ್‌ ಎಸ್ಸೆಸ್ಸೆಲ್ಸಿ ಫೇಲ್‌...
‘ನಮ್ಗೆ ಇಂಗ್ಲಿಷ್ ಬರಲ್ಲ ಸ್ವಾಮಿ... ನಾವು ಎಸ್ಸೆಸ್ಸೆಲ್ಸಿ ಫೇಲ್‌... ಎಷ್ಟು ಸಲ ಹೇಳಿದ್ರೂ ಇಂಗ್ಲಿಷಿನಾಗೆ ಮಾಹಿತಿ ಕೊಡ್ತೀರಲ್ಲಾ?’ ಜಿಲ್ಲಾ ಪಂಚಾಯಿತಿ ಕ್ರಿಯಾಯೋಜನೆ ಹಾಗೂ ಪ್ರಗತಿ ಮಾಹಿತಿ ಪುಸ್ತಕದಲ್ಲಿ ಇಂಗ್ಲಿಷ್‌ನಲ್ಲಿ ಮಾಹಿತಿ ಇದ್ದುದ್ದಕ್ಕೆ ಸದಸ್ಯ ಮರೆಪ್ಪ ಕರ್ನಾಳ್ ಅಸಮಾಧಾನ ವ್ಯಕ್ತಪಡಿಸಿದ ಪರಿ ಇದು.

‘ಇದನ್ನು ವೆಬ್‌ಸೈಟ್‌ನಿಂದ ಬಟ್ಟಿ ಇಳಿಸಲಾಗಿದೆ. ಕನ್ನಡಕ್ಕೆ ಭಾಷಾಂತರಿಸಿಲ್ಲ’ ಎಂದು ಹರಕಲು ಕನ್ನಡದಲ್ಲಿ ಸಿಇಒ ಹೇಳಿದಾಗ ಮರೆಪ್ಪ ಕರ್ನಾಳ್ ಏನೂ ಅರ್ಥವಾಗದವರಂತೆ ಕುಳಿತರು.

ಅನುದಾನ ಎಷ್ಟು ಕೋಟಿಗಳಲ್ಲಿ

₹2.76 ಪಂಚಾಯತ್ ರಾಜ್‌ಗೆ ನಿಗದಿಗೊಂಡ ಅನುದಾನ

₹15.74 ಸಮಾಜ ಕಲ್ಯಾಣ ಇಲಾಖೆಗೆ ನಿಗದಿಗೊಂಡ ಅನುದಾನ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.