ADVERTISEMENT

ಇದು ಆ್ಯಪ್‍ ಲೋಕವಯ್ಯ...

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 19:30 IST
Last Updated 20 ಆಗಸ್ಟ್ 2017, 19:30 IST
ಇದು ಆ್ಯಪ್‍ ಲೋಕವಯ್ಯ...
ಇದು ಆ್ಯಪ್‍ ಲೋಕವಯ್ಯ...   

– ಜೆಸ್ಸಿ ಪಿ.ವಿ.

ಇದು ಸ್ಮಾರ್ಟ್ ಫೋನ್‌ಗಳ ಕಾಲ. ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಸಲು ನಿರ್ಬಂಧ ಇದ್ದರೂ ಮನೆಯಲ್ಲಿ ಬಹುತೇಕ ಮಕ್ಕಳು ಮೊಬೈಲ್ ಬಳಸುತ್ತಾರೆ. ದ್ವಿತೀಯ ಪಿಯುಸಿ ಮುಗಿಯುವವರೆಗೆ ಸ್ಮಾರ್ಟ್ ಫೋನ್‍ನಿಂದ ದೂರವಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಒಳ್ಳೆಯದು. ಪಿಯುಸಿ ಬಳಿಕ ಹಾಗೂ ಪದವಿ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಪ್ರಬುದ್ಧತೆ ಮೂಡಿರುತ್ತದೆ.

ಈ ಹಂತದಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಗೇಮ್, ಚಾಟಿಂಗ್ ಇತ್ಯಾದಿಗಳನ್ನು ಕನಿಷ್ಠಗೊಳಿಸಿ ಫೋನನ್ನು ಸದುದ್ದೇಶಕ್ಕೆ ಹೆಚ್ಚು ಬಳಸತೊಡಗಿರುತ್ತಾರೆ. ಕೆಲವರಿಗೆ ಮೊಬೈಲ್ ಆ್ಯಪ್ ಸ್ಟೋರಲ್ಲಿ ಲಭ್ಯವಿರುವ ಎಲ್ಲಾ ಆ್ಯಪ್‌ಗಳನ್ನೂ ಡೌನ್‌ಲೋಡ್ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಮನೋರಂಜನೆಗೆ ಹೊರತಾಗಿ ಇಂತಹ ಆ್ಯಪ್‌ಗಳಿಂದ ಬೇರೇನೂ ಪ್ರಯೋಜನವಿರುವುದಿಲ್ಲ.

ADVERTISEMENT

ಈಗ ಶೈಕ್ಷಣಿಕ ಉದ್ದೇಶಕ್ಕಾಗಿಯೇ ನಿರ್ಮಿತವಾದ ಹಲವು ಆ್ಯಪ್‌ಗಳು ಲಭ್ಯವಿವೆ. ಇಂತಹ ಆ್ಯಪ್‍ಗಳು ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾರ್ಥಿಗಳಿಗೆ ಪ್ರಯೋಜನಕಾರಿ. ಅಂಥ ಕೆಲವು ಆ್ಯಪ್‍ಗಳ ಪರಿಚಯ ಇಲ್ಲಿದೆ.

ಎಂ-ಸ್ವಾಧ್ಯಾಯ: ಮೊಬೈಲ್ ಆಧಾರಿತ ಸ್ವ–ಅಧ್ಯಯನ ಎನ್ನುವುದು ‘ಎಂ-ಸ್ವಾಧ್ಯಾಯ’ದ ವಿಸ್ತೃತ ರೂಪ. ಇದೊಂದು ಡಿಜಿಟಲ್ ಶಿಕ್ಷಣದ ಆ್ಯಪ್.

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಿಂದ ‘ಇಭಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್’ ಪ್ರಾಯೋಜಿತವಾದ ಪ್ರಾಜೆಕ್ಟ್‌. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ಸಹಾಯ ಮಾಡುವ ಉದ್ದೇಶ ಇದರದ್ದು.

ಇದರಲ್ಲಿ 150ಕ್ಕಿಂತಲೂ ಹೆಚ್ಚು ವೀಡಿಯೋ ಪಾಠಗಳು, 500  ಸಂಭವನೀಯ ಉತ್ತರಸಹಿತ ಪ್ರಶ್ನೆಗಳು, 350ಕ್ಕೂ ಹೆಚ್ಚು ಹಳೆಯ ಪ್ರಶ್ನಪತ್ರಿಕೆಗಳು, ಆಯ್ದ ವಿಷಯಗಳ ಟಿಪ್ಪಣಿಗಳು ಇವೆ. ಕೆ.ಎ.ಎಸ್, ಐ.ಎ.ಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ‘ಅಣಕು ಪರೀಕ್ಷೆ’ (mock test) ಲಭ್ಯವಿದ್ದು - ಅಭ್ಯರ್ಥಿ ಪ್ರಯತ್ನಿಸಿದ ಎಲ್ಲಾ ಪರೀಕ್ಷೆಗಳ ವಿಶ್ಲೇಷಣೆಯನ್ನೂ ಇದು ನೀಡುತ್ತದೆ. ಹಾಗಾಗಿ, ಯಾವ ವಿಷಯದಲ್ಲಿ ತನ್ನ ಜ್ಞಾನ ಉತ್ತಮವಿದೆ, ಯಾವುದರಲ್ಲಿ ಕಡಿಮೆಯಿದೆ ಎಂದು ವಿದ್ಯಾರ್ಥಿ ತಿಳಿದುಕೊಳ್ಳಲು ಇದು ಸಹಕಾರಿ. ಒಮ್ಮೆ ಬರೆದ ಪರೀಕ್ಷೆಯನ್ನು ಮರುಪರೀಕ್ಷಿಸುವ (ಹಿಮ್ಮಾಹಿತಿ ಪಡೆಯುವ) ಅವಕಾಶವಿದ್ದು, ಸರಿಯಾದ ಉತ್ತರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಯೋಜನಾ: ‘ಯೋಜನಾ’ ಆ್ಯಪ್‍ನಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳ ಸಂಪೂರ್ಣ ವಿವರಗಳಿವೆ. ರಾಜ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಪ್ರಶ್ನೆಗಳಿರುವುದರಿಂದ ಈ ಆ್ಯಪ್ ಪರೀಕ್ಷಾರ್ಥಿಗಳಿಗೆ ಬಹಳ ಪ್ರಯೋಜನಕಾರಿ.

G.K and Current Affairs 2017: ಈ ಆ್ಯಪ್‌ನಲ್ಲಿ ಜಿ.ಕೆ.ಟ್ರಿಕ್ಸ್, ಮ್ಯಾಥ್ ಟ್ರಿಕ್ಸ್, ಇಂಗ್ಲಿಷ್ ಟಿಪ್ಸ್, ಹಳೆಯ ಪ್ರಶ್ನಪತ್ರಿಕೆಗಳು, ಕ್ವಿಜ್‌ , ಮಾನಸಿಕ ಸಾಮರ್ಥ್ಯ, ಮಾದರಿ ಪರೀಕ್ಷೆ, ಪತ್ರಿಕೆಗಳ ಸಂಪಾದಕೀಯ, ಪ್ರಮುಖ ನೋಟ್ಸ್ , NCRRT ಪುಸ್ತಕಗಳು ಇತ್ಯಾದಿಗಳು ಲಭ್ಯವಿವೆ. ಇದು ಆಂಗ್ಲ ಭಾಷೆಯಲ್ಲಿರುವ ಆ್ಯಪ್.

ಕೆ.ಪಿ.ಎಸ್.ಸಿ,  ಕೆ.ಎ.ಎಸ್ ಜ್ಞಾನಜ್ಯೋತಿ ಇದರಲ್ಲೂ ಕ್ವಿಜ್‌, ಹಳೆಯ ಪ್ರಶ್ನಪತ್ರಿಕೆಗಳು, ಕ್ವಿಕ್ ಟೆಸ್ಟ್, ನೋಟ್ಸ್, ಫ್ರೀ ವೀಡಿಯೋ ಇತ್ಯಾದಿಗಳಿದ್ದು ಸ್ವಯಂ ಕಲಿಕೆಗೆ ಬಹಳಷ್ಟು ಉಪಯುಕ್ತವೆನಿಸಿದೆ.

ಗೂಗಲ್ ಪ್ಲೇ ಸ್ಟೋರಲ್ಲಿ ಇಂತಹ ಹತ್ತು ಹಲವು ಆ್ಯಪ್‍ಗಳಿದ್ದು ಅವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳು ಸಮೀಪದಲ್ಲಿ ಲಭ್ಯವಿರುವುದಿಲ್ಲ. ಅಲ್ಲದೇ ಹಲವರು ದುಬಾರಿ ವೆಚ್ಚ ತೆತ್ತು ಇಂತಹ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದುಕೊಳ್ಳುವಷ್ಟು ಸ್ಥಿತಿವಂತರೂ ಆಗಿರುವುದಿಲ್ಲ. ಇಂತಹವರಿಗೆ ಈ ಶೈಕ್ಷಣಿಕ ಆ್ಯಪ್‍ಗಳು ವರದಾನವಿದ್ದಂತೆ.

ಪ್ರಯಾಣದ ವೇಳೆಯಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಕಲಿಕೆಯಲ್ಲಿ ತೊಡಗಲು, ಕಲಿತದ್ದನ್ನು ಪುನರ್ ಮನನ ಮಾಡಿಕೊಳ್ಳಲು ಈ ಆ್ಯಪ್‍ಗಳು ಸಹಕಾರಿ. ಸ್ವಯಂ ಕಲಿಕೆಯನ್ನು ಪ್ರೋತ್ಸಾಹಿಸುವ ಈ ಉಚಿತ ಆ್ಯಪ್‌ಗಳ ಸಹಕಾರದಿಂದ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಪರೀಕ್ಷಾ ತಯಾರಿಯೂ ಸುಲಭವಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.