ADVERTISEMENT

ಮಕ್ಕಳಿಗೆ ಬೇಕು ಚಿತ್ರಕಲೆ ಪಾಠ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2016, 19:30 IST
Last Updated 18 ಡಿಸೆಂಬರ್ 2016, 19:30 IST
ಮಕ್ಕಳಿಗೆ ಬೇಕು ಚಿತ್ರಕಲೆ ಪಾಠ
ಮಕ್ಕಳಿಗೆ ಬೇಕು ಚಿತ್ರಕಲೆ ಪಾಠ   

-ಕೆ.ಬಿ. ವೀರಲಿಂಗನಗೌಡ್ರ

ಸರ್ವಜಾತಿ, ಧರ್ಮ, ಮತ, ಪಂಥ, ಭಾಷೆಯವರನ್ನೂ ಸೆಳೆದುಕೊಳ್ಳುವ ಶಕ್ತಿ ಚಿತ್ರಗಳಿಗಿವೆ. ಅನುವಾದಕರ ಅವಶ್ಯಕತೆ ಇಲ್ಲದೆಯೇ ಸಂವಹನವನ್ನು ನಡೆಸಬಲ್ಲ ವಿಶ್ವಭಾಷೆಯೇ ಚಿತ್ರಕಲೆ. ಚಿತ್ರಗಳಿಲ್ಲದ ಅಕ್ಷರಗಳನ್ನು ಚಿಕ್ಕ ಮಕ್ಕಳು ಗುರುತಿಸಲಾರರು. ಮಕ್ಕಳ ಕಲಿಕೆಯ ಜೀವಸೆಲೆಯೇ ಚಿತ್ರಕಲೆ. ಮನಸ್ಸನ್ನು ಆಕರ್ಷಿಸಿ ಉಲ್ಲಾಸಗೊಳಿಸುವ ಚಿತ್ರಗಳ ಜೊತೆ ಮಕ್ಕಳು ಅನುಸಂಧಿಸುತ್ತ ಅಂತರ್ಮುಖಿಯಾಗಿ ಓದು ಮತ್ತು ಬರಹದತ್ತ ಸಹಜವಾಗಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ.

ಸೌಮ್ಯವರ್ಣಗಳು, ಪ್ರಖರವರ್ಣಗಳು, ಪಾರದರ್ಶಕವರ್ಣಗಳು – ಹೀಗೆ ಹಲವು ವರ್ಣಗಳ ಸಾಂಕೇತಿಕ ಅರ್ಥಗಳು ನಿಧಾನಕ್ಕೆ ಅರಿವಾಗುತ್ತಹೊದಂತೆ ಮಕ್ಕಳ ಬದುಕಿನಲ್ಲಿ ಒಂದು ಅದ್ಭುತ ವರ್ಣಲೋಕವೇ ಅನಾವರಣಗೊಳ್ಳುತ್ತದೆ. ನಿಸರ್ಗದೊಳಗಿರುವ ವರ್ಣ, ಶಬ್ದ, ಸೌಂದರ್ಯ, ಚಲನೆ, ಪರಿಮಳ ಮುಂತಾದ ಸೂಕ್ಷ್ಮತೆಯನ್ನು ಗ್ರಹಿಸುತ್ತಾ ಮುನ್ನೆಡೆದಾಗ ಮಕ್ಕಳು ಮುಂದೊಂದು ದಿನ ಶಕ್ತಿಶಾಲಿ ವ್ಯಕ್ತಿತ್ವವನ್ನು ದಕ್ಕಿಸಿಕೊಳ್ಳುವುದು ಸತ್ಯ.

ನಮ್ಮ ಸುತ್ತಲೂ ನೋಡಲು ಸಿಗುವ ರಂಗೋಲಿ, ಹಚ್ಚೆ, ಮೆಹಂದಿ, ಭಿತ್ತಿಚಿತ್ರ, ಚಿತ್ತಾರ, ಕ್ಯಾಲೆಂಡರ್‌ನ ಚಿತ್ರಗಳು, ಪುಸ್ತಕದಲ್ಲಿರುವ ಚಿತ್ರಗಳು ಮುಂತಾದ ಚಿತ್ರಗಳನ್ನು ಆಂತರಿಕ ಕಣ್ಗಳಿಂದ ನೋಡಿ ಸುಖಿಸುತ್ತಾರೆ; ಅಷ್ಟೇ ಅಲ್ಲ, ತಾವು ಕಂಡ ಚಿತ್ರಗಳನ್ನು ಚಿತ್ರಿಸುವ ಕಾರ್ಯಕ್ಕೂ ಮಕ್ಕಳು ಅಣಿಯಾಗುತ್ತಾರೆ. ಇದರಿಂದ ಮಕ್ಕಳ ಮನಸ್ಸು ಹುರಿಗೊಂಡು ನವಿರಾದ ಭಾವಗಳು ಮೊಳಕೆಯೊಡೆಯುತ್ತವೆ. ಮುಖ್ಯವಾಗಿ ಅವರಲ್ಲಿ ಸೃಷ್ಟಿಶೀಲಗುಣ ಮೆಲ್ಲಗೆ ನೆಲೆಗೊಳ್ಳುತ್ತದೆ.

ಮೂರ್ತ ಮತ್ತು ಅಮೂರ್ತ ಚಿತ್ರಗಳ ವ್ಯತ್ಯಾಸ, ವ್ಯಂಗ್ಯಚಿತ್ರಗಳು, ರೇಖಾಚಿತ್ರಗಳು ಮತ್ತು ವೇದಿಕೆಯ ಅಲಂಕಾರಗಳನ್ನು ನೋಡುವ, ಅರಿಯುವ ಪರಿಯನ್ನು ಮಕ್ಕಳು ಅರ್ಥೈಸಿಕೊಂಡರೆ  ಕಲಾವಿದರಾಗಿ/ಕಲಾಸಕ್ತರಾಗಿ ಬೆಳೆಯುವ ಎಲ್ಲ ಸಾಧ್ಯತೆಗಳಿವೆ. ಚಿತ್ರಗಳನ್ನು ಇಷ್ಟಪಡುವ, ಅದಕ್ಕೆ ಸ್ಪಂದಿಸಿ ಅವನ್ನು ತಾವೂ ಚಿತ್ರಿಸಲು ತೊಡಗುವ ಮಕ್ಕಳೆಲ್ಲರೂ ಕಲಾವಿದರಾಗದಿರಬಹುದು; ಆದರೆ ಈ ಗುಣ ಅವರ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ; ಅವರ ಗ್ರಹಣಶಕ್ತಿಯನ್ನೂ ಹೆಚ್ಚಿಸುತ್ತದೆ. 

ಸದಾ ಕ್ರಿಯಾಶೀಲರಾಗಿರುವುದಕ್ಕೆ ಮಕ್ಕಳ ಮನಸ್ಸನ್ನು ಅದು ಸಿದ್ಧಗೊಳಿಸುತ್ತದೆ. ಕ್ರಿಯಾಶೀಲ ಮತ್ತು ಸೃಜನಶೀಲ ಮಕ್ಕಳು ಸಂವೇದನಶೀಲರಾಗುತ್ತಾರೆ; ತಾವಿರುವ ಪರಿಸರದ ಬಗ್ಗೆ ಪ್ರೀತಿ–ವಿಶ್ವಾಸಗಳನ್ನು ತುಂಬಿಸಿಕೊಳ್ಳುತ್ತಾರೆ.

ಹಕ್ಕಿಗಳ ಚಿಲಿಪಿಲಿ, ಸುಂದರವಾದ ರಾತ್ರಿ, ಮಿನುಗುವ ನಕ್ಷತ್ರಗಳು, ಅರಳಿದ ಹೂಗಳು, ಹರಿವ ನೀರಿನ ನಿನಾದ, ಗಂಧವನ್ನು ತಾಕಿಸಿ ಬಣ್ಣದ ಗುರುತನ್ನು ಬರೆದು ಹೋಗುವ ಪಾತರಗಿತ್ತಿ, ಚಲಿಸುವ ಮೋಡಗಳು, ಯಾವುದೋ ಅನೂಹ್ಯ ಕಲ್ಪನೆ ಮೂಡಿಸುವ ನವಿಲುಗರಿ, ಮಳೆಯ ಹನಿಗಳು, ಮಣ್ಣಿನ ವಾಸನೆ, ಬಣ್ಣ ಬಣ್ಣದ ಬೊರಂಗಿ, ಒಂದೊಂದು ಕಸದ ಎಳೆಯನ್ನು ತಂದು ತಾಳ್ಮೆಯಿಂದ ಹೆಣೆದ ಗುಬ್ಬಿಯ ಗೂಡು, ಸೂಕ್ಷ್ಮ ಕಲಾವಿದನಂತೆ ಬಲೆ ಹೆಣೆದುಕೊಳ್ಳುವ ಜೇಡರ ಹುಳು, ಮುಟ್ಟಿದರೆ ಮುನಿಸಿಕೊಳ್ಳುವ ಎಲೆಗಳು, ಕಣ್ಮನ ತಣಿಸುವ ಕಾಮನಬಿಲ್ಲು – ಇಂತಹ ಹತ್ತಾರು ನಿಸರ್ಗ ಸೌಂದರ್ಯದ ಸೊಬಗು ಸವಿಯುವ ತುಡಿತವನ್ನು ಮಕ್ಕಳಲ್ಲಿ ಚಿತ್ರಕಲೆ ತುಂಬಲಿದೆ.

ಒಟ್ಟಾರೆ ಮಕ್ಕಳ ಮನೋವಿಕಾಸದಲ್ಲಿ ಚಿತ್ರಕಲೆಯ ಪಾತ್ರ ದೊಡ್ಡದಿದೆ.  ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲೆ ವಿಷಯವನ್ನು ಕಡ್ಡಾಯಗೊಳಿಸುವತ್ತ ಸರ್ಕಾರ ಆಲೋಚಿಸಬೇಕಿದೆ.


(ಲೇಖಕರು ಚಿತ್ರಕಲಾ ಶಿಕ್ಷಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.