ADVERTISEMENT

ಮತ್ತದೇ ಆಟ, ಹಾಡು, ಕತೆ!

ಡಾ .ಕೆ.ಎಸ್.ಚೈತ್ರಾ
Published 5 ಫೆಬ್ರುವರಿ 2017, 19:30 IST
Last Updated 5 ಫೆಬ್ರುವರಿ 2017, 19:30 IST
ಮತ್ತದೇ ಆಟ, ಹಾಡು, ಕತೆ!
ಮತ್ತದೇ ಆಟ, ಹಾಡು, ಕತೆ!   

ರಾತ್ರಿ ಮಲಗುವಾಗ ಹೇಳಿದ ಕತೆ, ಶಾಲೆಯಲ್ಲಿ ಆಡಿದ ಆಟ, ಟೀವಿಯಲ್ಲಿ ನೋಡಿದ ಕಾರ್ಟೂನ್, ತೋರಿಸಿದ ಚಿತ್ರ, ಹಾಡಿದ ಹಾಡು-- ಹೀಗೆ ತಮಗೆ ಇಷ್ಟವಾದದ್ದನ್ನು ಮತ್ತೆ ಮತ್ತೆ ಮಾಡುವಂತೆ ತಂದೆ-ತಾಯಿಯರನ್ನು ಮಗು ಪೀಡಿಸುವುದು ಸಾಮಾನ್ಯ. ಸಮಯದ ಅಭಾವದ ಜೊತೆ ಪದೇ ಪದೇ ಅದೇ ಕತೆ-ಹಾಡು ಹೇಳಿ, ಆಟ ಆಡಿ, ಶೋ ತೋರಿಸಿ ಪೋಷಕರಿಗೆ ಕಿರಿಕಿರಿಯಾಗಿ, ಬೈಯ್ಯುವುದು ಸಹಜ. ಆದರೆ ಆರು ತಿಂಗಳ ಮಗುವಿನಿಂದ ಶಾಲೆಗೆ ಹೋಗುವ ಮಕ್ಕಳಲ್ಲಿ ಈ ಪುನರಾವರ್ತನೆಯು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪುನರಾವರ್ತನೆಯ ಲಾಭಗಳು
1. ಕ್ರಿಯೆ-ಪರಿಣಾಮ ಅರಿಯುವಿಕೆ: ಪುಟ್ಟ ಮಗು ಕೈಯಲ್ಲಿ ಹಿಡಿದ ಲೋಟವನ್ನು ಒಮ್ಮೆ ಬಿಸುಟು ಮತ್ತೆ ಹಠ ಮಾಡಿ ಪಡೆದು ಮಾಡುವುದೇನು? ಕೆಳಗೆ ಬಿಸಾಡುವುದು! ಲೋಟ ಕೊಟ್ಟು, ಬಗ್ಗಿ ತೆಗೆದು ಪೋಷಕರಿಗೆ ಸುಸ್ತು-ಸಿಟ್ಟೇ ಹೊರತು ಮಗುವಿಗಲ್ಲ. ಮಗುವಿಗೆ ಲೋಟ ಹಿಡಿದು ಬಿಸಾಡಿ, ಪೋಷಕರಿಗೆ ಕಷ್ಟ ಕೊಡುವ ಉದ್ದೇಶವಿರುವುದಿಲ್ಲ, ಯಾವ ಕ್ರಿಯೆಯಿಂದ ಏನು ಪರಿಣಾಮ ಎನ್ನುವುದನ್ನು ಸ್ವತಃ ಅನೇಕ ಸಲ ಮಾಡಿ ಕಲಿಯುವ ರೀತಿ ಅದು.

2. ನೆನಪಿನ ಶಕ್ತಿಯಲ್ಲಿ ಹೆಚ್ಚಳ:  ಮಗುವಿನ ಮೆದುಳು ಅತ್ಯಂತ ವೇಗವಾಗಿ ಬೆಳೆಯುತ್ತಾ ಬಹಳಷ್ಟು ಬಗೆಯ ಪ್ರಚೋದನೆಯನ್ನು  ಸ್ವೀಕರಿಸಲು ಸಿದ್ಧವಾಗಿರುತ್ತದೆ. ಹೊರಗಿನಿಂದ ದೊರೆತ ಪ್ರಚೋದನೆಗಳು ನರವ್ಯೂಹಗಳ ಮೂಲಕ ಮೆದುಳನ್ನು ತಲುಪುತ್ತವೆ. ಮಾಹಿತಿ ಹೇಗೇ ಇರಲಿ ಒಂದೇ ಬಾರಿಗೆ ಗ್ರಹಿಸಿ ನೆನಪಿನಲ್ಲಿಡಲು ಮೆದುಳಿಗೆ ಸಾಧ್ಯವಿಲ್ಲ. ಯಾವುದೇ ಅನುಭವಕ್ಕೆ ಮತ್ತೆ ಮತ್ತೆ ಒಡ್ಡಿಕೊಂಡಾಗ ಮಾತ್ರ ನರವ್ಯೂಹಗಳು ಸ್ಥಿರವಾಗಿ ಶಕ್ತಿಯುತವಾಗುತ್ತವೆ. ಒಮ್ಮೆ ಮಾತ್ರ ಪ್ರಚೋದನೆ ಸಿಕ್ಕ ನರವ್ಯೂಹಗಳು ದುರ್ಬಲವಾಗಿರುತ್ತವೆ. ಹೀಗೆ ಬಲಿಷ್ಠ ನರವ್ಯೂಹಗಳಿದ್ದಾಗ ಕಲಿತದ್ದನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯ. ಅಧ್ಯಯನಗಳ ಪ್ರಕಾರ ಮಗುವಿಗೆ ಹೊಸದೊಂದು ಪರಿಕಲ್ಪನೆ ದೃಢವಾಗಲು ಸಾವಿರಕ್ಕೂ ಹೆಚ್ಚು ಸಲ ಓದಿ/ಕೇಳಬೇಕಾಗುತ್ತದೆ.

ADVERTISEMENT

3.  ಪರಿಚಿತ ಭಾವನೆ: ಸಹಜವಾಗಿಯೇ ಮಕ್ಕಳಿಗೆ ಹೊಸ ವಸ್ತು-ಅನುಭವಗಳ ಬಗ್ಗೆ ಹಿಂಜರಿಕೆ-ಹೆದರಿಕೆ ಇರುತ್ತದೆ. ಹೀಗಿರುವಾಗ ಪುನರಾವರ್ತನೆ  ಅವರನ್ನು ಹೊಸದಕ್ಕೆ ಪರಿಚಿತರನ್ನಾಗಿ ಮಾಡುತ್ತದೆ. ಉದಾಹರಣೆಗೆ, ಮೊದಲ ಬಾರಿ ಪುಸ್ತಕ ದೂರದಿಂದ ನೋಡಿದ ಮಗು, ಎರಡನೇ ಬಾರಿ ಚಿತ್ರ ತೋರಿಸು ಎನ್ನುತ್ತದೆ. ಮೂರನೇ ಸಲ ಅದರ ಕತೆ ಕೇಳಿ, ನಾಲ್ಕನೇ ಬಾರಿ ತಾನೇ ಕತೆ ಕಟ್ಟಬಹುದು. ಹೀಗೆ ಅಪರಿಚಿತತೆಯಿಂದ ಪರಿಚಿತ ವಾತಾವರಣಕ್ಕೆ ಇದು ಸಹಕಾರಿ.

4. ಆತ್ಮವಿಶ್ವಾಸದ ವೃದ್ಧಿ: ಯಾವುದೇ ಕೆಲಸವನ್ನು ಅನೇಕ ಬಾರಿ ಮಾಡುವುದರಿಂದ ಚೆನ್ನಾಗಿ ಮಾಡಲು ಸಾಧ್ಯ. ಕತೆ ಕೇಳಿ ಕೇಳಿ ಮಗು ಮುಂದಿನ ಸಾಲುಗಳನ್ನು ತಾನೇ ಹೇಳಬಲ್ಲದು. ತನಗೆ ಗೊತ್ತಿದೆ, ಚೆನ್ನಾಗಿ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಮಗುವಿನ ಬೆಳವಣಿಗೆಗೆ ಪೂರಕ.

5. ಶಬ್ದಸಂಪತ್ತು-ಭಾಷಾಕೌಶಲ: ನೋಡಿ ನೋಡಿ ರೂಢಿಯಾಗಿ ನೆನಪಿನಿಂದ ಓದುವುದು, ಓದುವಿಕೆಯಲ್ಲಿ ಮೊದಲ ಹಂತ. ಶಬ್ದಗಳನ್ನು ಕೇಳಿ ತಾವೂ ಉಚ್ಚರಿಸುವುದು, ಗುರುತಿಸಲು ಕಲಿಯುವುದು – ಹೀಗೆ ಪುನರಾವರ್ತನೆ ಮಗುವಿನ ಭಾಷಾಕೌಶಲಕ್ಕೆ ಸಹಕಾರಿ

6. ಸುರಕ್ಷಿತ ಭಾವನೆ: ಪುನರಾವರ್ತನೆ ಮಗುವಿಗೆ ಕೇವಲ ಕಲಿಕೆಯ ವಿಧಾನವಷ್ಟೇ ಅಲ್ಲ, ನಂಬಿಕೆಯನ್ನೂ ಮೂಡಿಸುತ್ತದೆ. ಗೊತ್ತಿರುವ ಕತೆ, ಚಿತ್ರ, ಹಾಡುಗಳಿಂದ ಮಗುವಿಗೆ ಮುಂದೆ ಏನಾಗುತ್ತದೆ ಎಂದು ಕೆಲಮಟ್ಟಿಗೆ ತಿಳಿಯುವುದರಿಂದ ಪುನರಾವರ್ತನೆಯು ಸುರಕ್ಷಿತ ಭಾವನೆ ಮೂಡಿಸುತ್ತದೆ.

ಪೋಷಕರು ಮಾಡಬಹುದಾದದ್ದು
ಮಗುವಿಗೆ ಒಂದೇ ಕತೆಯನ್ನು ಅನೇಕ ಬಾರಿ ಹೇಳುವಾಗ ಪ್ರತಿ ಪಾತ್ರಕ್ಕೆ ದನಿ ಬದಲಾವಣೆ. ಹೊಸ ಸದ್ದು, ಬೆರಳಿಗೆ ಗೊಂಬೆಯ ಚಿತ್ರ  ಇತ್ಯಾದಿ ಮಗುವಿಗೆ ಆಸಕ್ತಿ ಹುಟ್ಟಿಸುವುದರ ಜೊತೆ ತಾನೂ ಅವುಗಳನ್ನು ಮಾಡಲು ಪ್ರೇರೇಪಿಸುತ್ತದೆ.

ಸುಲಭವಾಗಿ ಒಡೆಯದ, ಜೋಡಿಸಿ, ಕಟ್ಟಿ, ತುಂಬಿಸಬಹುದಾದ ಆಟಿಕೆಗಳನ್ನು ನೀಡುವುದು. ನಾನಾ ರೀತಿಯ ಆಕಾರದಲ್ಲಿ  ಅವುಗಳನ್ನು ಜೋಡಿಸಿ, ಬೀಳಿಸಿ ಮತ್ತೆ ಕಟ್ಟುವುದು ಮಗುವಿಗೆ ಖುಷಿ ಕೊಡುತ್ತದೆ, ಕಲಿಯಲೂ ಸೂಕ್ತ.

ಪದೇ ಪದೇ ಏನನ್ನಾದರೂ ಮಾಡಿ ಮಾಡಿ ಕಲಿತು, ಮಗು ಹೆಮ್ಮೆಯಿಂದ ತೋರಿಸಿದಾಗ ಚಪ್ಪಾಳೆ, ನಗು, ಅಪ್ಪುಗೆಯಿಂದ ಮಗುವಿಗೆ ಮೆಚ್ಚುಗೆ ಸೂಚಿಸುವುದು ಮುಖ್ಯ.

ದಿನವೂ ಅದೇ ಸಮಯಕ್ಕೆ ಹಲ್ಲುಜ್ಜುವುದು, ಊಟ, ನಿದ್ದೆ, ಕತೆ, ಆಟಗಳನ್ನು ಮಾಡುವುದರಿಂದ ಮಗುವಿಗೆ ಶಿಸ್ತು ಕಲಿಸಬಹುದು. ಯಾವ ಸಮಯಕ್ಕೆ ಏನು ಎಂದು ಮೊದಲೇ ಅರಿತ ಮಗು ಅದನ್ನು ಊಹಿಸಿ ಅನುಸರಿಸಲು ಸಿದ್ಧವಾಗುತ್ತದೆ.

ಪುನರಾವರ್ತನೆ ಒಳ್ಳೆಯದಾದರೂ ಅದರೊಂದಿಗೇ ನಿಧಾನವಾಗಿ ಹೊಸ ವಿಷಯವನ್ನೂ ಪರಿಚಯಿಸುವುದು ಅಗತ್ಯ. ಅದರೊಂದಿಗೇ ಹಳೆಯದರಲ್ಲಿಯೂ ಹೊಸ ವಿಷಯ ಅಳವಡಿಸಿ (ಅದೇ ಚಿತ್ರಕ್ಕೆ ಬೇರೆ ಬಣ್ಣ, ಕತೆಯ ಪಾತ್ರಗಳ ಬದಲಾವಣೆ, ಎರಡು ಆಟಿಕೆಗಳ ಹೋಲಿಕೆ, ಹಳೆಯ ಹಾಡಿನ ಧಾಟಿಗೆ ಸ್ವಂತ ಪದಗಳು ಇತ್ಯಾದಿ) ಮಗುವಿನ ಸೃಜನಶೀಲತೆ ಹೆಚ್ಚಿಸಬಹುದು.

ಆದ್ದರಿಂದ ಮುಂದಿನ ಬಾರಿ ಮಗು ಮತ್ತದೇ ಆಟ, ಕತೆ, ಹಾಡಿಗಾಗಿ ಕೇಳಿದಾಗ ಸಿಟ್ಟಿಗೆದ್ದು ಬೈಯ್ಯುವ ಬದಲು ತಾಳ್ಮೆಯಿಂದ ಮತ್ತೊಮ್ಮೆ ಮಾಡಿ. ಏಕೆಂದರೆ ಅದು ಕಲಿಕೆಯ ಪ್ರಮುಖ ಹಂತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.