ADVERTISEMENT

BJP ಅಭ್ಯರ್ಥಿ ಬ್ರಿಜೇಶ್ ಚೌಟ ಜತೆ ಒಂದು ದಿನ | ಮೋದಿಯ ಮಂತ್ರ: ಹಿಂದುತ್ವದ ತಂತ್ರ

ಸಂಧ್ಯಾ ಹೆಗಡೆ
Published 18 ಏಪ್ರಿಲ್ 2024, 5:08 IST
Last Updated 18 ಏಪ್ರಿಲ್ 2024, 5:08 IST
   

ಮಂಗಳೂರು: ಕಂದಾವರ, ಅದ್ಯಪಾಡಿ, ಕೋಡಿಕಲ್, ಕುಳಾಯಿ, ಕಾಟಿಪಳ್ಳ ಹೀಗೆ ಪ್ರವಾಸ ದಿನಚರಿಯ ಮಾರ್ಗದುದ್ದಕ್ಕೂ ಸಿಗುವ ಎಲ್ಲ ನಾರಾಯಣಗುರು ಮಂದಿರಗಳ ಭೇಟಿ ಪೂರ್ವನಿಗದಿಯಂತೆ ನಡೆದವು. ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯೆದುರು ಗೆಲುವಿಗೆ ಪ್ರಾರ್ಥನೆ ಅರುಹಿದ ನಂತರ ಪುಟ್ಟದೊಂದು ಸಭೆ. ಹೆಚ್ಚೆಂದರೆ ಒಂದೂವರೆ ನಿಮಿಷದ ಭಾಷಣ. ‘ದೇಶದ ಸಂಸ್ಕೃತಿಯ ಉಳಿವಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು, ಈ ಚುನಾವಣೆ ರಾಷ್ಟ್ರದ ಭವಿಷ್ಯಕ್ಕಾಗಿ ನಡೆಯುವ ಚುನಾವಣೆ, ಹಿಂದುತ್ವದ ಚುನಾವಣೆ’ ಎನ್ನುತ್ತ ಬಿಜೆಪಿಗೆ ಮತ ನೀಡುವಂತೆ ನಿವೇದನೆ. ಮತ್ತೆ ಮುಂದಿನ ಮತ ಶಿಕಾರಿಗೆ ಯೋಜನೆ.

ಇದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಚಾರದ ವೈಖರಿ.

ನಸುಕಿನಲ್ಲಿ ಎದ್ದು ನಿತ್ಯಕ್ರಮದಂತೆ ದೇವರ ಪೂಜೆ, ಅಪ್ಪ–ಅಮ್ಮನ ಪಾದಗಳಿಗೆ ನಮಸ್ಕರಿಸಿ, ವಾಹನ ಹತ್ತಿ ಹೊರಟ ಚೌಟ, ತಲುಪಿದ್ದು ಪಕ್ಷದ ಕಚೇರಿಗೆ. ಪ್ರಚಾರದ ಪ್ರವಾಸ ಇಲ್ಲಿಂದ ಶುರು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬ್ರಿಜೇಶ್ ಪ್ರಚಾರ ಕೈಕೊಂಡ ದಿನ ‘ಪ್ರಜಾವಾಣಿ’ ಪ್ರತಿನಿಧಿ ಅವರ ಜೊತೆ ಪಯಣ ಬೆಳೆಸಿದ್ದರು.

ADVERTISEMENT

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ಚೌಟ, ಎದೆಯೊಳಣ ತಲ್ಲಣಗಳನ್ನು ಅವಿತಿಟ್ಟು, ಆತ್ಮವಿಶ್ವಾಸ ನಗುವಿನೊಂದಿಗೆ, ಶಾಸಕ ಡಾ. ಭರತ್ ಶೆಟ್ಟಿ ಮಾತಿಗೆ ಕಿವಿಯಾಗುತ್ತಿದ್ದರು. ರಿಂಗಿಣಿಸುತ್ತಿದ್ದ ಮೊಬೈಲ್ ಫೋನ್ ಕರೆಗಳಿಗೆ ಸ್ಥಿತಪ್ರಜ್ಞರಾಗಿ ಉತ್ತರಿಸುತ್ತಿದ್ದರು. 

ಇಡೀ ದಿನದ ಮತ ಯಾಚನೆಯ ಕೇಂದ್ರ ಬಿಂದು ದೇವಸ್ಥಾನ– ದೈವಸ್ಥಾನ, ಸಮುದಾಯ ಮಂದಿರಗಳು. ಕೊರಳಿಗೆ ಹಸಿರು ಪಟ್ಟೆಯ ಕೇಸರಿ ಶಾಲು ಹಾಕಿದ್ದ ಬ್ರಿಜೇಶ್ ಚೌಟ, ಕಾರಿನಿಂದ ಇಳಿಯುತ್ತಲೇ, ಗುಂಪಿನಲ್ಲಿ ಮಿಳಿತಗೊಂಡು ಕಾರ್ಯಕರ್ತರನ್ನು ಹುರಿದುಂಬಿಸುತ್ತ, ಹಿರಿಯರಿಗೆ ಕರ ಜೋಡಿಸಿ ಶಿರಬಾಗುತ್ತಿದ್ದರು. ಗುಡಿ–ಗೋಪುರಗಳ ಪ್ರದಕ್ಷಿಣೆ, ದೇವರಲ್ಲಿ ಪ್ರಾರ್ಥನೆ, ಅರ್ಚಕರ ಆಶೀರ್ವಾದ ಪಡೆದು ಮತ್ತೆ ಮುಂದಿನ ದೇವಾಲಯದತ್ತ ಪಯಣ.

ಕುಡುಪು ಅನಂತಪದ್ಮನಾಭನ ಸನ್ನಿಧಾನದಲ್ಲಿ ನಾಗಬನಕ್ಕೊಂದು ಸುತ್ತು ಹಾಕಿ, ವಾಮಂಜೂರು ಅಮೃತೇಶ್ವರನ ಪಾದಕ್ಕೆರಗಿ, ಮಣೇಲ್‌ನ ನಾರಾಯಣಗುರು ಮಂದಿರ ತಲುಪುವ ವೇಳೆ ಸೂರ್ಯ ನೆತ್ತಿಗೇರಿದ್ದ. ಕಾರ್ಯಕರ್ತರು ಎಳನೀರಿನ ಆತಿಥ್ಯದೊಂದಿಗೆ ಬರಮಾಡಿಕೊಂಡರು. ವಜ್ರದೇಹಿ ಮಠದಲ್ಲಿ ಶ್ರೀಗಳು ಶಾಲು ಹಾಕಿ ಆಶೀರ್ವದಿಸಿದಾಗ ಚೌಟರು ವಿನೀತರಾಗಿ, ತಲೆಬಾಗಿದರು.

ಬೆಂಕಿಯುಗುಳುವ ಬಿಸಿ ಲು, ತೊಟ್ಟಿಕ್ಕುವ ಬೆವರ ಹನಿ ಅವರ ಉತ್ಸಾಹವನ್ನು ತಗ್ಗಿಸಿದಂತೆ ಕಾಣಲಿಲ್ಲ. ಕಾದ ಕಬ್ಬಿಣದಂತಾದ ನೆಲದ ಮೇಲೆ ಬರಿಗಾಲಿನಲ್ಲೇ ಹೆಜ್ಜೆ ಹಾಕುತ್ತಿದ್ದ (ಗುಡಿಗಳಿಗೆ ತೆರಳುವಾಗ) ಬ್ರಿಜೇಶ್ ಬೆಳಗಿನ ಲವಲವಿಕೆ, ಅದೇ ಮುಗುಳ್ನಗುವನ್ನು ಸಂಜೆಯವರೆಗೂ ಕಾಪಿಟ್ಟುಕೊಂಡಿದ್ದರು.

ಗೆಲುವಿನ ನಿರೀಕ್ಷೆ, ಕಾರ್ಯಕರ್ತರ ಮುಖಾಮುಖಿ, ಮತಗಳ ಲೆಕ್ಕಾಚಾರ, ವಿರೋಧ ಪಕ್ಷಗಳ ತಂತ್ರಗಾರಿಕೆ ತಿಳಿದುಕೊಳ್ಳುವ ಕೌತುಕ, ಚೌಟ ಅವರ ಊಟ– ತಿಂಡಿ, ಹಸಿವು, ಬಾಯಾರಿಕೆ ಎಲ್ಲವನ್ನೂ ಗೌಣವಾಗಿಸಿದಂತೆ ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.